ದಾವಣಗೆರೆ: ಜಿಲ್ಲೆಯ ಹೊನ್ನಾಳಿ ಕ್ಷೇತ್ರ ಮಾಜಿ ಶಾಸಕ ಎಂ.ಪಿ.ರೇಣುಕಾಚಾರ್ಯ ಹಾಗೂ ಪುತ್ರನಿಗೆ ಎರಡು ಪ್ರತ್ಯೇಕ ನಂಬರ್‌ಗಳಿಂದ ಪ್ರಾಣ ಬೆದರಿಕೆ ಕರೆಗಳು ಬಂದ ಘಟನೆ ವರದಿಯಾಗಿದೆ. ಬಿಜೆಪಿಯ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಮೊಬೈಲ್‌ಗೆ ಅಂತಾರಾಷ್ಟ್ರೀಯ ಕರೆ ಮಾಡಿರುವ ಅನಾಮಿಕ ವ್ಯಕ್ತಿಗಳು ಸೋಮವಾರ ರಾತ್ರಿ ಒಳಗಾಗಿ ನಿನಗೆ ಹಾಗೂ ನಿನ್ನ ಮಗನನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಈ ಬಗ್ಗೆ ರೇಣುಕಾಚಾರ್ಯ ಕುಟುಂಬ ಆತಂಕಕ್ಕೆ ಒಳಗಾಗಿದೆ.
ತಮಗೆ ಪ್ರಾಣ ಬೆದರಿಕೆ ಹಾಕಿರುವ ಘಟನೆ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ರೇಣುಕಾಚಾರ್ಯ ಸೋಮವಾರ ಮಧ್ಯಾಹ್ನ ಬೆಂಬಲಿಗರೊಂದಿಗೆ ಹೊನ್ನಾಳಿ ಪೊಲೀಸ್ ಠಾಣೆಗೆ ತೆರಳಿ, ತಮಗೆ ಕರೆ ಬಂದ ಮೊಬೈಲ್ ನಂಬರ್‌ಗಳ ಸಮೇತ ಸಂಜೆ ದೂರು ದಾಖಲು ಮಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ರೇಣುಕಾಚಾರ್ಯ, ಹೊನ್ನಾಳಿ, ನ್ಯಾಮತಿಯಲ್ಲಿ ತಾವು ವಿಧಾನ ಪರಿಷತ್ತು ಚುನಾವಣೆಯಲ್ಲಿ ಸೋಮವಾರ ಬೆಳಗ್ಗೆಯಿಂದ ತೊಡಗಿಕೊಂಡಿದ್ದೆ. ಮಧ್ಯಾಹ್ನ ೧೨.೫೨ಕ್ಕೆ ನ್ಯಾಮತಿಗೆ ಹೋಗಿದ್ದಾಗ ನನಗೆ ಅಂತಾರಾಷ್ಟ್ರೀಯ ಕರೆ ಬಂದಿತು. ಮಿಸ್ಡ್ ಕಾಲ್ ಆಗಿದ್ದರಿಂದ ನಾನು ಕರೆ ಸ್ವೀಕರಿಸಲಿಲ್ಲ. ಮತ್ತೆ ೧೨.೫೩ಕ್ಕೆ ಕರೆ ಬಂದಿತು. ಆಗ ಕನ್ನಡದಲ್ಲೇ ಮಾತನಾಡಿದ ಅಪರಿಚಿತ ವ್ಯಕ್ತಿಯು ಇವತ್ತೇ ನಿನಗೆ ಕೊನೆಯ ದಿನ. ನಿನ್ನ ಮಗನಿಗೂ ಮುಗಿಸುತ್ತೇನೆ” ಎಂಬುದಾಗಿ ಬೆದರಿಕೆ ಹಾಕಿದ ಎಂದು ದೂರಿದರು. ಅನಂತರ ಯಾರೋ ನೀನು.. ಎಂಬುದಾಗಿ ನಾನು ಪ್ರಶ್ನಿಸಿದೆ. ತಕ್ಷಣ ಅಪರಿಚಿತ ವ್ಯಕ್ತಿಯು ಕರೆ ಕಟ್ ಮಾಡಿದ್ದಾನೆ ಎಂದರು.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ಅಂತಾರಾಷ್ಟ್ರೀಯ ಕರೆಯ ಜಾಡು ಹಿಡಿದು, ತನಿಖೆ ಕೈಗೊಳ್ಳಲಿದ್ದಾರೆ. ಪದೇಪದೇ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯಗೆ ಬೆದರಿಕೆ ಕರೆ ಬರುತ್ತಿರುವುದು ಸ್ವತಃ ರೇಣುಕಾಚಾರ್ಯ ಆಕ್ರೋಶಕ್ಕೂ ಕಾರಣವಾಗಿದೆ. ಆದಷ್ಟು ಬೇಗನೆ ಆರೋಪಿಗಳನ್ನು ಪತ್ತೆ ಮಾಡಿ, ಕಾನೂನು ಕ್ರಮ ಕೈಗೊಳ್ಳಬೇಕು. ಮಾಜಿ ಸಚಿವ ರೇಣುಕಾಚಾರ್ಯ ಹಾಗೂ ಕುಟುಂಬಕ್ಕೆ ಸೂಕ್ತ ರಕ್ಷಣೆ, ಭದ್ರತೆ ಒದಗಿಸಬೇಕು ಎಂದು ಬಿಜೆಪಿ ಮುಖಂಡರು, ಕಾರ್ಯಕರ್ತರು ತಿಳಿಸಿದ್ದಾರೆ.