ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ಹೈವೊಲ್ಟೈಜ್ ಕದನವಾಗಿ ಮಾರ್ಪಟ್ಟು ಪೆನ್ ಡ್ರೈವ್ ಪ್ರಕರಣದಿಂದ ರಾಷ್ಟ್ರದ ಗಮನ ಸೆಳೆದಿದ್ದ ಹಾಸನ ಲೋಕಸಭಾ ಕ್ಷೇತ್ರದಲ್ಲಿ ಸಾಲಿಗ್ರಾಮದ ಮೊಮ್ಮಕ್ಕಳಲ್ಲಿ ಒಬ್ಬ ಗೆದ್ದು ಇನ್ನೊಬ್ಬ ಪರಾಭವ ಗೊಂಡಿದ್ದು, ಒಂದೆಡೆ ಸಂಭ್ರಮ, ಇನ್ನೊಂದೆಡೆ ಸೋಲು ಮನೆಮಾಡಿದೆ.
ಕಾಂಗ್ರೇಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ ಶ್ರೇಯಸ್ ಪಟೇಲ್ ಮತ್ತು ಜೆಡಿಎಸ್ ನಿಂದ ಸ್ವರ್ಧಿಸಿ ಪರಾಭವಗೊಂಡ ಪ್ರಜ್ವಲ್ ರೇವಣ್ಣ ಅವರು ಇಬ್ಬರು ಸಾಲಿಗ್ರಾಮದ ಮೊಮ್ಮಕ್ಕಳು ಎಂಬುದು ವಿಶೇಷವಾಗಿದೆ.
ಶ್ರೇಯಸ್ ಪಟೇಲ್ ಅವರು ಸಾಲಿಗ್ರಾಮದ ಮಾಜಿ ಜಿ.ಪಂ.ಸದಸ್ಯೆ ಸುಮಿತ್ರಮ್ಮ ಮತ್ತು ಗೋವಿಂದರಾಜು ಅವರ ಪುತ್ರಿ ಅನುಪಮ ಅವರ ಪುತ್ರನಾದರೇ, ಪ್ರಜ್ವಲ್ ರೇವಣ್ಣ ಅವರು ಸಾಲಿಗ್ರಾಮದ ರಾಜಲಕ್ಷ್ಮಿ ಮತ್ತು ಶಿವಣ್ಣ ಅವರ ಪುತ್ರಿ ಭವಾನಿ ಅವರ ಪುತ್ರ.
ಗೆದ್ದ ಶ್ರೇಯಸ್ ಪಟೇಲ್ ಮತ್ತು ಸೋತ ಪ್ರಜ್ವಲ್ ರೇವಣ್ಣ ಅವರಿಬ್ಬರು ರಾಜ್ಯದ ದೊಡ್ಡ ಪ್ರಭಾವಿ ರಾಜಕಾರಣಿಗಳ ಕುಟುಂಬಕ್ಕೆ ಸೇರಿದವರಾಗಿದ್ದು , ಶ್ರೇಯಸ್ ಪಟೇಲ್ ಹಿರಿಯ ಕಾಂಗ್ರೇಸ್ ಮುಖಂಡ ಮಾಜಿ ಸಚಿವ ಪುಟ್ಟಸ್ವಾಮಿಗೌಡ ಮೊಮ್ಮಗನಾದರೇ ,ಪ್ರಜ್ವಲ್ ರೇವಣ್ಣ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಮೊಮ್ಮಗ.
ಹಿಂದಿನಿಂದಲು ಈ ಎರಡು ಕುಟುಂಬಗಳ ನಡುವೆ ರಾಜಕೀಯ ಜಿದ್ದಾ- ಜಿದ್ದಿ ನಡೆದು ಕೊಂಡು ಬಂದಿದ್ದು ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರ ವಿರುದ್ದ ಶ್ರೇಯಸ್ ಪಟೇಲ್ ಒಂದು ಬಾರಿ ಮತ್ತು ಇವರ ತಾಯಿ ಅನುಪಮ ಎರಡು ಬಾರಿ ಹೊಳೆನರಸೀಪುರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೇಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಪರಾಭವಗೊಂಡಿದ್ದರು.
ಈ ಬಾರಿ ನಡೆದ ಚುನಾವಣೆಯಲ್ಲಿ ಈ ಶ್ರೇಯಸ್ ಪಟೇಲ್ ಮತ್ತು ಪ್ರಜ್ವಲ್ ರೇವಣ್ಣ ಸ್ಪರ್ದೆ ಮಾಡಿದ ಪರಿಣಾಮವಾಗಿ ಮತ್ತೊಮ್ಮೆ ಈ ಕ್ಷೇತ್ರ ಹೈವೊಲ್ಟೈಜ್ ಕದನವಾಗಿ ಮಾರ್ಪಟಿತ್ತು . ಘಟನುಗಟಿ ರಾಜಕಾರಣಿಗಳ ದಂಡೆ ಈ ಇಬ್ಬರ ಪರ ಅದ್ದೂರಿ ಪ್ರಚಾರ ನಡೆಸಿದ ಪರಿಣಾಮವಾಗಿಯೇ ಈ ಕ್ಷೇತ್ರವು ಯಾರ ಪಾಲಾಗುತ್ತದೆ ಎಂದು ಕೂತುಹಲ ಮೂಡಿಸಿತ್ತು.
ಆದರೆ ಮಂಗಳವಾರ ಪ್ರಕಟಗೊಂಡ ಈ ಲೋಕಸಭಾ ಕ್ಷೇತ್ರದ ಮತ ಎಣಿಕೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ಅವರು 670274 ಮತಗಳ ಜೊತಗೆ 43738 ಮತಗಳ ಲೀಡ್ ಪಡೆದು ತಮ್ಮ ವಿರುದ್ದ ಜೆಡಿಎಸ್ ನಿಂದ ಸ್ಪರ್ಧಿಸಿ 626536 ಮತಗಳನ್ನು ಪಡೆದ ಪ್ರಜ್ವಲ್ ರೇವಣ್ಣ ಅವರನ್ನು ಪರಾಭವಗೊಳಿಸಿದ್ದಾರೆ.
ಒಟ್ಟಾರೆಯಾಗಿ ಈ ಚುನಾವಣೆಯಲ್ಲಿ ಪ್ರಜ್ವಲ್ ರೇವಣ್ಣ ಅವರ ಬಗ್ಗೆ ಚುನಾವಣೆ ವೇಳೆಗೆ ಬಂದ ಪೆನ್ ಡ್ರೈವ್ ಸುದ್ದಿಯಿಂದ ಮತದಾರ ಅವಕೃಪೆಗೆ ಪಾತ್ರರಾಗುವಂತೆ ಮಾಡಿದ್ದರೆ ,ಇನ್ನು ಶ್ರೇಯಸ್ ಪಟೇಲ್ ಅವರು ಮತ್ತು ಅವರ ತಾಯಿ ಅನುಪಮ ಅವರ ವಿಧಾನ ಸಭೆ ಚುನಾವಣೆಯ ಸೋಲಿನ ಅನುಕಂಪ ಇಲ್ಲಿ ಪಟೇಲ್ ಗೆಲುವಿಗೆ ವರ್ಕ್ ಔಟ್ ಅಗಿದೆ.
ಶ್ರೇಯಸ್ ಪಟೇಲ್ ಗೆಲುವಿನ ಬಗ್ಗೆ “ರಾಜ್ಯಧರ್ಮ” ದೊಂದಿಗೆ ಮಾತನಾಡಿದ ಇವರ ಸೋದರ ಮಾವ ಕಾಂಗ್ರೆಸ್ ಮುಖಂಡ ಸಾಲಿಗ್ರಾಮದ ಎಸ್.ಜಿ.ಬಾಬುಹನುಮಾನ್ ನಮ್ಮ ಸಹೋದರಿಯ ಪುತ್ರ ಹಾಸನದ ಸಂಸದನಾಗಿ ಆಯ್ಕೆಯಾಗಿರುವುದು ಸಾಲಿಗ್ರಾಮದ ನಮ್ಮ ಮನೆತನ “ಗೌಡ”ರ ಕುಟುಂಬಕ್ಕೆ ಹೆಮ್ಮೆ ಎನ್ನಿಸುತ್ತಿದೆ . ಯುವಕರಾಗಿರುವ ಶ್ರೇಯಸ್ ಪಟೇಲ್ ಅವರು ಹಾಸನ ಕ್ಷೇತ್ರದ ಜನರ ವಿಶ್ವಾಸ ಉಳಿಸಿಕೊಳ್ಳುವಂತ ಕೆಲಸ ಮಾಡುವ ವಿಶ್ವಾಸ ಇದೆ ಎಂದರು.