ನವದೆಹಲಿ: ಲೋಕಸಭೆ ಚುನಾವಣೆಯಲ್ಲಿ ಎನ್‌ಡಿಎ ಬಹುಮತ ಪಡೆದು ಮೂರನೇ ಬಾರಿಗೆ ಅಧಿಕಾರಕ್ಕೆ ಬರಲಿದೆ. ಹೊಸ ಸರ್ಕಾರದ ಪ್ರಮಾಣ ವಚನ ಸ್ವೀಕಾರದ ದಿನಾಂಕ ಮತ್ತು ಸಮಯ ಕೂಡ ನಿಗದಿಯಾಗಿದೆ. ಜೂನ್ ೮ ರಂದು ಸಂಜೆ ಪ್ರಧಾನಿ ನರೇಂದ್ರ ಮೋದಿ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.
ಕೇಂದ್ರದಲ್ಲಿ ಸರಕಾರ ರಚನೆಗಾಗಿ ಎನ್ ಡಿಎ ಮೈತ್ರಿಕೂಟ ಹಾಗೂ ವಿರೋಧ ಪಕ್ಷಗಳ ಮೈತ್ರಿಕೂಟ ಇಂಡಿಯಾ ನಡುವೆ ಹಗ್ಗಜಗ್ಗಾಟ ಮುಂದುವರಿದಿರುವ ಬೆನ್ನಿಗೇ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರಕಾರ ಜೂನ್ ೮ರಂದು ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಲೋಕಸಭಾ ಚುನಾವಣಾ ಫಲಿತಾಂಶದಲ್ಲಿ ಬಿಜೆಪಿ ನೇತೃತ್ವದ ಎನ್ ಡಿಎ ಮೈತ್ರಿಕೂಟ ೨೯೨ ಸ್ಥಾನಗಳನ್ನು ಗಳಿಸುವ ಮೂಲಕ ಸರಳ ಬಹುಮತ ಪಡೆದಿದೆ. ಆದರೆ, ಎನ್ ಡಿಎ ಮೈತ್ರಿಕೂಟದ ಪ್ರಮುಖ ಪಕ್ಷವಾದ ಬಿಜೆಪಿಯ ಸಂಖ್ಯಾಬಲ ೩೦೩ರಿಂದ ೨೪೦ಕ್ಕೆ ಕುಸಿತಗೊಂಡಿದ್ದು, ಇದರಿಂದ ಸ್ವಂತ ಬಲದಲ್ಲಿ ಸರಕಾರ ರಚಿಸುವುದು ಬಿಜೆಪಿ ಪಾಲಿಗೆ ಅಸಾಧ್ಯವಾಗಿ ಪರಿಣಮಿಸಿದೆ.