ಬೆಂಗಳೂರು:ಈ ಬಾರಿ ರಾಜ್ಯೋತ್ಸವ ಮಾದರಿಯಲ್ಲಿ ನಾಡಪ್ರಭು ಕೆಂಪೇಗೌಡ ಪ್ರಶಸ್ತಿ ಪುರಸ್ಕತರನ್ನು ಗುರುತಿಸಲು ಸರ್ಕಾರ ತೀರ್ಮಾನಿಸಿದೆ.ಬಿಬಿಎಂಪಿಯಿಂದ ನೀಡುವ ನಾಡಪ್ರಭು ಕೆಂಪೇಗೌಡ ಪ್ರಶಸ್ತಿಗೆ ಈ ಬಾರಿ ಸಾಧಕರಿಂದ ಅರ್ಜಿ ಸ್ವೀಕರಿಸದೇ, ರಾಜ್ಯೋತ್ಸವ ಮಾದರಿಯಲ್ಲಿ ಬಿಬಿಎಂಪಿಯೇ ಸಾಧಕರನ್ನು ಗುರುತಿಸಿ ಪ್ರಶಸ್ತಿ ನೀಡಬೇಕು ಎಂದು ಸರ್ಕಾರ ಸೂಚಿಸಿದೆ ಎಂದು ತಿಳಿದುಬಂದಿದೆ.
ಬಿಬಿಎಂಪಿಯಿಂದ ಪ್ರತಿವರ್ಷ ಆಚರಿಸುವ ನಾಡಪ್ರಭು ಕೆಂಪೇಗೌಡ ಜಯಂತಿ ಸಮಾರಂಭದಲ್ಲಿ ಬೆಂಗಳೂರಿನ ಅಭಿವೃದ್ಧಿ ಸೇವೆ ಸಲ್ಲಿಸಿದ ವಿವಿಧ ಕ್ಷೇತ್ರದ ಸಾಧಕರಿಗೆ ನಾಡಪ್ರಭು ಕೆಂಪೇಗೌಡ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿತ್ತು,,ಅದಕ್ಕೂ ಮೊದಲು ಪ್ರಶಸ್ತಿಗೆ ಸಾಧಕರಿಂದ ಅರ್ಜಿ ಆಹ್ವಾನಿಸಿ, ಸಲ್ಲಿಕೆಯಾದ ಅರ್ಜಿಗಳನ್ನು ಪರಿಶೀಲಿಸಿ ಪ್ರಶಸ್ತಿಗೆ ಆಯ್ಕೆ ಮಾಡುವ ಪರಿಪಾಠವಿತ್ತು.
ಈ ಬಾರಿ ಸಾಧಕರಿಂದ ಅರ್ಜಿ ಪಡೆಯದೇ ರಾಜ್ಯ ಸರ್ಕಾರದಿಂದ ನೀಡುವ ರಾಜ್ಯೋತ್ಸವ ಪ್ರಶಸ್ತಿ ಮಾದರಿಯಲ್ಲಿ ಕೆಂಪೇಗೌಡ ಪ್ರಶಸ್ತಿಗೆ ಆಯ್ಕೆ ಸಮಿತಿಯೇ ಸಾಧಕರನ್ನು ಗುರುತಿಸಿ ಪ್ರಶಸ್ತಿ ನೀಡುವುದಕ್ಕೆ ತೀರ್ಮಾನ ಮಾಡಲಾಗಿದೆ.ಅದಕ್ಕಾಗಿ ಬಿಬಿಎಂಪಿಯ ಎಂಟು ವಲಯದ ಜಂಟಿ ಆಯುಕ್ತರಿಗೆ ಪ್ರತಿ ವಾರ್ಡ್‍ನಿಂದ ಮೂರು ಸಾಧಕರ ಮಾಹಿತಿ ಸಂಗ್ರಹಿಸಿ ಪ್ರಶಸ್ತಿಗೆ ಶಿಫಾರಸು ಮಾಡಲು ಸೂಚನೆ ನೀಡಿ ಜುಲೈ 5 ರ ಒಳಗಾಗಿ ಶಿಫಾರಸು ಮಾಡಬೇಕೆಂದು ನಿರ್ದೇಶನ ನೀಡಲಾಗಿದೆ.
ಹೀಗಾಗಿ ಬಿಬಿಎಂಪಿ ಮುಖ್ಯ ಆಯುಕ್ತರ ನೇತೃತ್ವದಲ್ಲಿ ಪ್ರಶಸ್ತಿ ಆಯ್ಕೆಗಾಗಿ ಸರ್ಕಾರ ಸಮಿತಿ ರಚನೆ ಮಾಡಿದ್ದು, ಸಮಿತಿಯಲ್ಲಿ ಐದರಿಂದ ಏಳು ಸದಸ್ಯರಿರಲಿದ್ದಾರೆ ಎಂದು ತಿಳಿದುಬಂದಿದೆ.
ಸಮಿತಿಯಲ್ಲಿ ಅಂತಿಮಗೊಂಡ ಪುರಸ್ಕತ ಪಟ್ಟಿಯನ್ನು ನಗರಾಭಿವೃದ್ಧಿ ಇಲಾಖೆಯ ಸಚಿವರಿಂದ ಅನುಮೋದನೆ ಸಿಕ್ಕ ನಂತರ ಜುಲೈ 9 ರಂದು ನಡೆಯುವ ಕೆಂಪೇಗೌಡ ಜಯಂತಿಯ ಸಮಾರೋಪ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.ಈ ಬಾರಿ ಒಟ್ಟು 198 ಕೆಂಪೇಗೌಡ ಪ್ರಶಸ್ತಿ ನೀಡುವುದಕ್ಕೆ ರಾಜ್ಯ ಸರ್ಕಾರ ನಿರ್ಧಾರ ಮಾಡಿದೆ ಎಂದು ತಿಳಿದುಬಂದಿದೆ.