ಯಳಂದೂರು: ಹೊನ್ನೂರು ಗ್ರಾಮ ಪಂಚಾಯಿತಿಯ ನೂತನ ಅಧ್ಯಕ್ಷರಾಗಿ ಆರ್. ಪುಟ್ಟಬಸವಯ್ಯ ಹಾಗೂ ಉಪಾಧ್ಯಕ್ಷರಾಗಿ ಭಾಗ್ಯಮ್ಮ ಅವಿರೋಧವಾಗಿ ಆಯ್ಕೆಯಾದರು.
ಈ ಹಿಂದೆ ಅಧ್ಯಕ್ಷರಾಗಿದ್ದ ಎಂ. ಶಂಕರ್‌ರೂಪೇಶ್ ಉಪಾಧ್ಯಕ್ಷರಾಗಿದ್ದ ಎಚ್.ಜಿ. ನಾಗರಾಜು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದ ಹಿನ್ನೆಲೆಯಲ್ಲಿ ಹೊನ್ನೂರು ಗ್ರಾಮ ಪಂಚಾಯಿತಿಯಲ್ಲಿ ಗುರುವಾರ ಚುನಾವಣಾ ಪ್ರಕ್ರಿಯೆ ನಡೆಯಿತು. ಒಟ್ಟು ೧೬ ಸದಸ್ಯರಿರುವ ಈ ಪಂಚಾಯಿತಿಯಲ್ಲಿ ೧೪ ಮಂದಿ ಸದಸ್ಯರು ಹಾಜರಿದ್ದರು ಕೋರಂ ಇದ್ದ ಹಿನ್ನೆಲೆಯಲ್ಲಿ ಪಂಚಾಯಿತಿಯ ಚುನಾವಣಾಧಿಕಾರಿಯಾಗಿದ್ದ ಬಿಇಒ ಕೆ. ಕಾಂತರಾಜು ಚುನಾವಣಾ ಪ್ರಕ್ರಿಯೆ ಆರಂಭಿಸಿದರು. ಆದರೆ ಅಧ್ಯಕ್ಷ ಸ್ಥಾನಕ್ಕೆ ಆರ್. ಪುಟ್ಟಬಸವಯ್ಯ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಭಾಗ್ಯಮ್ಮ ಮಾತ್ರ ನಾಮಪತ್ರ ಸಲ್ಲಿಸಿದ್ದರು. ಈ ಸಂದರ್ಭದಲ್ಲಿ ಚುನಾವಣೆಯಲ್ಲಿ ಭಾಗವಹಿಸಿದ್ದ ಎಲ್ಲಾ ಸದಸ್ಯರು ಇವರಿಬ್ಬರ ಪರ ಮತ ಚಲಾಯಿಸಿದ ಹಿನ್ನೆಲೆಯಲ್ಲಿ ಇವರಿಬ್ಬರೂ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಕೆ. ಕಾಂತರಾಜು ಘೋಷಣೆ ಮಾಡಿದರು.
ಪಂಚಾಯಿತಿ ಕಚೇರಿ ಹೊರಗೆ ನೆರೆದಿದ್ದ ಇವರ ಬೆಂಬಲಿಗರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಾಚರಣೆ ಮಾಡಿದರು. ಈ ಸಂದರ್ಭದಲ್ಲಿ ನೂತನ ಅಧ್ಯಕ್ಷ ಆರ್. ಪುಟ್ಟಬಸವಯ್ಯ ಮಾತನಾಡಿ, ಹೊನ್ನೂರು ಗ್ರಾಮ ಪಂಚಾಯಿತಿ ತಾಲೂಕಿನ ದೊಡ್ಡ ಪಂಚಾಯಿತಿಗಳಲ್ಲಿ ಒಂದಾಗಿದೆ. ನಾನು ಕಳೆದ ೧೯ ವರ್ಷಗಳಿಂದಲೂ ಗ್ರಾಮ ಪಂಚಾಯಿತಿ ಸದಸ್ಯನಾಗಿ ಕರ್ತವ್ಯ ನಿರ್ವಹಿಸುತ್ತದ್ದೇನೆ.
ಈ ಸಾಲಿನಲ್ಲಿ ನಾಲ್ಕನೆ ಬಾರಿ ನಾನು ಸದಸ್ಯನಾಗಿ ಆಯ್ಕೆಯಾಗಿದ್ದು ಈ ಬಾರಿ ಅಧ್ಯಕ್ಷನಾಗಿ ಆಯ್ಕೆಯಾಗಿರುವುದು ಅತೀವ ಸಂತಸ ತಂದಿದೆ. ಈ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಸಮಸ್ಯೆಗಳ ಅರಿವು ನನಗಿದೆ. ರಸ್ತೆ, ಚರಂಡಿ, ಕುಡಿಯುವ ನೀರು ಸೇರಿದಂತೆ ಮೂಲ ಸಮಸ್ಯೆಗಳ ನಿವಾರಣೆಗೆ ನಾನು ಪ್ರಥಮ ಆದ್ಯತೆಯನ್ನು ನೀಡುತ್ತೇನೆ. ಇದರೊಂದಿಗೆ ಸರ್ಕಾರದಿಂದ ಬರುವ ಅನುದಾನಗಳನ್ನು ಬಳಸಿಕೊಂಡು ಈ ಪಂಚಾಯಿತಿಯನ್ನು ಮಾದರಿಯಾಗಿ ಮಾಡುವ ನಿಟ್ಟಿನಲ್ಲಿ ಕ್ರಮ ವಹಿಸುತ್ತೇನೆ. ನಾನು ಕರ್ತವ್ಯ ನಿರ್ವಹಿಸುವ ಸಂದರ್ಭದಲ್ಲಿ ಎಲ್ಲಾ ಸದಸ್ಯರು ಹಾಗೂ ಪಂಚಾಯಿತಿಯ ವಿಶ್ವಾಸವನ್ನು ಪಡೆದುಕೊಂಡು ಪ್ರಾಮಾಣಿಕವಾಗಿ ನನಗೆ ನೀಡಿರುವ ಅಧಿಕಾರವನ್ನು ಬಳಸಿಕೊಂಡು ಇದನ್ನು ಅಭಿವೃದ್ಧಿಯಡೆಗೆ ಕೊಂಡೊಯ್ಯುತ್ತೇನೆ ಎಂದು ತಿಳಿಸಿದರು.
ಗ್ರಾಪಂ ಸದಸ್ಯರಾದ ಶಂಕರ್ ರೂಪೇಶ್, ನಾಗರಾಜು, ಕುಮಾರ್, ರಾಜೇಶ್, ಗುರುಪ್ರಸಾದ್, ಶಿವಪ್ರಕಾಶ್, ಚಿನ್ನಸ್ವಾಮಿ, ಟಿ.ಎನ್. ರಾಧಾ, ಇಂದಿರಾ, ಅನಿತಾ ನಿರಂಜನ್, ನೇತ್ರಾವತಿ, ರಾಧಾ ತಾಪಂ ಮಾಜಿ ಅಧ್ಯಕ್ಷ ನಿರಂಜನ್ ಮುಖಂಡರಾದ ರಾಜೇಂದ್ರ, ಸೋಮಣ್ಣ, ರೇವಣ್ಣ, ಲಿಂಗರಾಜಮೂರ್ತಿ, ಸಿದ್ದಪ್ಪಸ್ವಾಮಿ, ಮಹದೇವಸ್ವಾಮಿ, ಕೃಷ್ಣಮೂರ್ತಿ, ರಾಘವೇಂದ್ರ ಸೇರಿದಂತೆ ಅನೇಕರು ಹಾಜರಿದ್ದರು.