ಮಂಗಳೂರು(ದಕ್ಷಿಣ ಕನ್ನಡ): ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಹೇಳಿದ್ದಾರೆ.
ಅವರು ಇಂದು ಮಂಗಳೂರಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.
ನನ್ನನ್ನು ಪಕ್ಷ ನೇಮಿಸಿದೆ, ಯಾವ ಸಂದರ್ಭದಲ್ಲಿ ಏನು ಮಾಡಬೇಕು ಎಂದು ಪಕ್ಷಕ್ಕೆ ಗೊತ್ತಿದೆ. ಜನಾರ್ದನ ಪೂಜಾರಿಯವರು ಐದು ಸಲ ಸೋತಾಗ, ಮೊಯಿಲಿ ಅವರು ಎರಡು ಸಲ ಸೋತಾಗ ಯಾರೂ ರಾಜೀನಾಮೆ ನೀಡಿರಲಿಲ್ಲ. ಯಾರೋ ರಾಜೀನಾಮೆ ಕೇಳಿದರು ಅಂತ ರಾಜೀನಾಮೆ ಕೊಡಲು ಆಗಲ್ಲ ಎಂದು ಹರೀಶ್ ಕುಮಾರ್ ಹೇಳಿದ್ದಾರೆ.
ವಾಟ್ಸಪ್ ನಲ್ಲಿ ರಾಜೀನಾಮೆ ಕೇಳಿದರೆ ಕೊಡಲು ಆಗಲ್ಲ. ನಾನು ವಾಟ್ಸಪ್ ಯೂನಿವರ್ಸಿಟಿಯ ಸ್ಟೂಡೆಂಟ್ ಅಲ್ಲ, ನಾನು ಕಾಂಗ್ರೆಸ್ ಯೂನಿವರ್ಸಿಟಿಯ ಸ್ಟೂಡೆಂಟ್. ನನ್ನನ್ನು ಜಿಲ್ಲಾಧ್ಯಕ್ಷ ಮಾಡಲು ಅಂದಿನ 7 ಶಾಸಕರು ಪತ್ರ ಕೊಟ್ಟಿದ್ದರು. ನಾನು ಕಾಂಗ್ರೆಸ್ ಕಾರ್ಯಕರ್ತ, ಎಲ್ಲರನ್ನು ವಿಶ್ವಾಸಕ್ಕೆ ಪಡೆದು ಕೆಲಸ ಮಾಡಿದ್ದೇನೆ ಎಂದು ಹೇಳಿದ್ದಾರೆ.
ವಾಟ್ಸಪ್‌ನಲ್ಲಿ ರಾಜೀನಾಮೆ ಕೇಳಿದರೆ ಕೊಡಲ್ಲ. ಪಕ್ಷ ತೀರ್ಮಾನ ಮಾಡಿದರೆ ಮಾತ್ರ ರಾಜೀನಾಮೆ. ಜಿಲ್ಲೆಯ ಯಾವ ಕಾಂಗ್ರೆಸ್ ನಾಯಕರು ನನ್ನ ರಾಜೀನಾಮೆ ಕೇಳಿಲ್ಲ. ಪದ್ಮರಾಜ್ ಪೂಜಾರಿ, ರಮಾನಾಥ ರೈ ರಾಜೀನಾಮೆ ಕೇಳಿಲ್ಲ, ಯಾರೋ ವಾಟ್ಸಪ್‌ನಲ್ಲಿ ರಾಜೀನಾಮೆ ಕೇಳಿದರೆ ರಾಜೀನಾಮೆ ಕೊಡಲು ಆಗಲ್ಲ ಎಂದು ಹೇಳಿದ್ದಾರೆ.
ಹರೀಶ್ ಕುಮಾರ್ ಅಧ್ಯಕ್ಷತೆಯಲ್ಲಿ ಕಳೆದೆರಡು ವಿಧನಾಸಭಾ ಚುನಾವಣೆ ಮತ್ತು ಲೋಕಸಭಾ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಂಗ್ರೆಸ್ ಹೀನಾಯ ಸೋಲನುಭವಿಸಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಧ್ಯಕ್ಷರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕೆಂದು ಕಾಂಗ್ರೆಸ್ ಕಾರ್ಯಕರ್ತರು ಸಾಮಾಜಿಕ ಮಾಧ್ಯಮಗಳಲ್ಲಿ ಆಗ್ರಹಿಸಿದ್ದರು.