ಬೆಂಗಳೂರು: ಗೃಹಲಕ್ಷ್ಮಿ ಯೋಜನೆಗೆ ಜು.14ರಿಂದ ಅರ್ಜಿಗಳನ್ನು ಆಹ್ವಾನಿಸಲಾಗುವುದು ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್ ತಿಳಿಸಿದರು. ಸಚಿವ ಸಂಪುಟ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯೋಜನೆ ಅನುಷ್ಠಾನದ ಸಂಪೂರ್ಣ ವಿವರಗಳನ್ನು ಇಲಾಖೆಯಿಂದ ಸಂಜೆ ಅಥವಾ ನಾಳೆಯೊಳಗೆ ಪ್ರಕಟಿಸಲಾಗುವುದು ಎಂದರು.
ರೈತ ಮತ್ತು ಕನ್ನಡಪರ ಸಂಘಟನೆಗಳು ಸೇರಿದಂತೆ ವಿವಿಧ ಸಂಘಟನೆಗಳ ಕಾರ್ಯಕರ್ತರು, ಮುಖಂಡರ ಮೇಲೆ ದಾಖಲಾಗಿರುವ ಪ್ರಕರಣಗಳನ್ನು ಹಿಂಪಡೆಯಬೇಕೆಂದು ಮನವಿಗಳು ಕೇಳಿಬಂದಿವೆ. ಅದರ ಪರಿಶೀಲನೆಗೆ ಸಚಿವ ಸಂಪುಟ ಉಪಸಮಿತಿ ರಚಿಸಲಾಗುತ್ತದೆ ಎಂದರು.
ಕೈಗಾರಿಕೆಗಳಿಗೆ ವಿಶೇಷ ಭತ್ಯೆ ನೀಡುವ ಸಂಬಂಧ ಕಾವೇರಿ, ಕೃಷ್ಣಾ, ಮಹದಾಯಿ ಸೇರಿದಂತೆ ವಿವಿಧ ಅಂತಾರಾಜ್ಯ ನದಿ ವಿವಾದಗಳು, ಅದರ ಕುರಿತ ನ್ಯಾಯಾೀಕರಣದ ತೀರ್ಪು ಹಾಗೂ ತೀರ್ಪಿನ ಆಧಾರದ ಮೇಲೆ ಅನುಷ್ಠಾನಗೊಳ್ಳುತ್ತಿರುವ ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ಸಚಿವ ಸಂಪುಟ ಉಪಸಮಿತಿ ರಚಿಸಲಾಗುತ್ತಿದೆ ಎಂದು ಹೇಳಿದರು.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಗುತ್ತಿಗೆದಾರರಿಗೆ ಗುತ್ತಿಗೆ ನೀಡುವ ಕಾಮಗಾರಿಗಳ ಗರಿಷ್ಠ ಮೊತ್ತವನ್ನು 50 ಲಕ್ಷದಿಂದ 1 ಕೋಟಿ ರೂ.ವರೆಗೆ ಹೆಚ್ಚಿಸಲಾಗಿದೆ ಎಂದರು. ಕರ್ನಾಟಕ ಸರಕು ಮತ್ತು ಸೇವೆಗಳ ತಿದ್ದುಪಡಿ ಕಾಯ್ದೆಗೆ ಸಂಪುಟ ಸಭೆ ಒಪ್ಪಿಗೆ ನೀಡಿದೆ.
ಕೇಂದ್ರ ಸರ್ಕಾರ ಶಿಫಾರಸು ಮಾಡಿರುವಂತೆ ಆರೋಪಗಳು ಕೇಳಿಬಂದಾಗ ಅದಕ್ಕೆ ಪುರಾವೆಗಳನ್ನು ಒದಗಿಸಬೇಕು ಎಂಬುದರ ಬದಲಾಗಿ ಸರ್ಕಾರವೇ ಸಾಬೀತು ಪಡಿಸುವುದು ಎಂಬ ತಿದ್ದುಪಡಿ ತಿರಸ್ಕರಿಸಿ ಉಳಿದಂತೆ ಕಾಯ್ದೆಯನ್ನು ಯಥಾವತ್ತಾಗಿ ಜಾರಿ ಮಾಡಲು ವಿಧಾನ ಮಂಡಲದಲ್ಲಿ ಮಂಡನೆ ಮಾಡುವುದಾಗಿ ತಿಳಿಸಿದರು.