ನಕಲಿ ವೈದ್ಯಕೀಯ ಹಾವಳಿ ವಿರುದ್ಧ ಕಠಿಣ ಕ್ರಮ
ಬೆಂಗಳೂರು: ನಕಲಿ ವೈದ್ಯಕೀಯ ವೃತ್ತಿಯನ್ನು ಬೇರುಸಮೇತ ಕಿತ್ತೊಗೆಯಲು ಆರೋಗ್ಯ ಇಲಾಖೆ ಮುಂದಾಗಿದ್ದು, ಇದರನ್ವಯ ಖಾಸಗಿ ಆಸ್ಪತ್ರೆಗಳು, ಕ್ಲಿನಿಕ್’ಗಳು ತಮ್ಮ ಕೆಪಿಎಂಇ ನೋಂದಣಿ ಸಂಖ್ಯೆ, ಆಸ್ಪತ್ರೆಯ ಹೆಸರು ಮತ್ತು ಮಾಲೀಕರ ಹೆಸರನ್ನು ಕಟ್ಟಡದ ಮುಂಭಾಗದಲ್ಲಿ ಪ್ರದರ್ಶಿಸವುದು ಕಡ್ಡಾಯವಾಗಿದೆ ಎಂದು ಆದೇಶ ಹೊರಡಿಸಿದೆ.
ಈ ಸಂಬಂಧ ಆರೋಗ್ಯ ಇಲಾಖೆ ಸುತ್ತೋಲೆ ಹೊರಡಿಸಿದ್ದು, ಕೆಪಿಎಂಇ ಕಾಯ್ದೆ ನಿಯಮ 5ರ ಪ್ರಕಾರ, ಸಾರ್ವಜನಿಕರ ಮಾಹಿತಿಗಾಗಿ ವೈದ್ಯಕೀಯ ಪದ್ಧತಿ ಮತ್ತು ಲಭ್ಯವಿರುವ ಸೇವೆಗಳ ವಿವರವನ್ನು ಆಸ್ಪತ್ರೆಯ ಆವರಣದ ಪ್ರಮುಖ ಸ್ಥಳಗಳಲ್ಲಿ ಸ್ಪಷ್ಟವಾಗಿ ಪ್ರದರ್ಶಿಸಬೇಕು ಎಂದು ಸೂಚಿಸಿದೆ.
ಕೆಲ ಖಾಸಗಿ ಆಸ್ಪತ್ರೆ, ಕ್ಲಿನಿಕ್‌ಗಳು ಸಾಂಪ್ರದಾಯಿಕ ಹಾಗೂ ಪಾರಂಪರಿಕ ಪದ್ಧತಿ, ಮನೆ ಮದ್ದುಗಳು, ಬಾಡಿ ಮಸಾಜ್ ಹಾಗೂ ವಿವಿಧ ಥೆರಪಿಗಳ ಅನಧಿಕೃತ ಅಭ್ಯಾಸದಲ್ಲಿ ತೊಡಗಿಕೊಂಡಿರುವುದು ಗಮನಕ್ಕೆ ಬಂದಿದೆ. ಇವುಗಳು ಕೆಪಿಎಂಇ ಕಾಯ್ದೆ ಅಡಿಯಲ್ಲಿ ವೈದ್ಯಕೀಯ ಚಿಕಿತ್ಸೆಗಳಾಗಿ ವರ್ಗೀಕರಿಸಲ್ಪಟ್ಟಿಲ್ಲ. ಆದ್ದರಿಂದ ಎಲ್ಲ ಖಾಸಗಿ ಆಸ್ಪತ್ರೆಗಳು ಮತ್ತು ಕ್ಲಿನಿಕ್‌ಗಳು ಹೊರಭಾಗದಲ್ಲಿ ಮಾಹಿತಿ ಫಲಕವನ್ನು ಹಾಕಬೇಕು. ಅಲೋಪತಿ ಆಸ್ಪತ್ರೆಗಳು ನೀಲಿ ಬಣ್ಣ ಮತ್ತು ಆಯುರ್ವೇದ ಆಸ್ಪತ್ರೆಗಳು ಹಸಿರು ಬಣ್ಣ ಸೂಚಿತ ಫಲಕವನ್ನು ಬಳಸಬೇಕು. ಈ ಮೂಲಕ ಬಣ್ಣ ಸಂಹಿತೆಯನ್ನು ಕಡ್ಡಾಯವಾಗಿ ಅನುಸರಿಸಬೇಕು ಎಂದು ತಿಳಿಸಲಾಗಿದೆ.