ಚನ್ನಪಟ್ಟಣ: ವಿಧಾನಸಭೆ ಕ್ಷೇತ್ರದ ಉಪಚುನಾವಣೆಯಲ್ಲಿ ನಾನು ಸ್ಪರ್ಧೆ ಮಾಡಲ್ಲ. ಅಲ್ಲಿ ಕಾಂಗ್ರೆಸ್‌ನಿಂದ ಅಚ್ಚರಿಯ ಅಭ್ಯರ್ಥಿ ಕಣಕ್ಕಿಳಿಯಲಿದ್ದಾರೆ ಎಂದು ಬೆಂಗಳೂರು ಗ್ರಾಮಾಂತರದಲ್ಲಿ ಸೋಲನುಭವಿಸಿರುವ ಕಾಂಗ್ರೆಸ್ ನಾಯಕ ಡಿ.ಕೆ ಸುರೇಶ್ ಹೇಳುವ ಮೂಲಕ ಕುತೂಹಲ ಹೆಚ್ಚಿಸಿದ್ದಾರೆ.
ರಾಮನಗರದಲ್ಲಿ ಇಂದು ಸೋಮವಾರ ಮಾತನಾಡಿದ ಅವರು, ಡಿ.ಕೆ ಸುರೇಶ್‌ನ ಸೋಲಿಸಿಬಿಟ್ಟಿದ್ದೇವೆ. ಏನೋ ಆಗಿಬಿಡುತ್ತದೆ ಅನ್ನೋದಾದರೆ ಅದು ಭ್ರಮೆ. ನಾನು ನನ್ನ ಕಾರ್ಯಕರ್ತರ ಜೊತೆಗಿದ್ದೇನೆ. ಯಾರಿಗೂ ನಾನು ವೈಯಕ್ತಿಕವಾಗಿ ತೊಂದರೆ ಕೊಟ್ಟವನಲ್ಲ. ಈ ಕ್ಷೇತ್ರದ ಅಭಿವೃದ್ಧಿಗಾಗಿ ನಾನು ಮಾತನಾಡಿರಬಹುದು, ವಿನಃ ಯಾರನ್ನೂ ಕೆಟ್ಟದಾಗಿ ನಡೆಸಿಕೊಂಡಿಲ್ಲ ಎಂದರು.
ನನ್ನ ನಡೆಯಿಂದ ಯಾರಿಗಾದರೂ ಮನಸ್ಸಿಗೆ ನೊವಾಗಿದ್ದರೆ, ಪಕ್ಷದ ಕಾರ್ಯಕರ್ತರ ಪರವಾಗಿ, ನನ್ನ ಪರವಾಗಿ ಕ್ಷಮೆ ಕೇಳುತ್ತೇನೆ. ನನಗೆ ಯಾರೂ ಶತ್ರುಗಳಿಲ್ಲ. ನನಗೆ ನಾನೇ ಶತ್ರು. ನಾನೂ ಒಂದು ವಿರಾಮ ನಿರೀಕ್ಷೆ ಮಾಡಿದ್ದೆ. ಈಗ ವಿರಾಮ. ಜಾತಿ, ಧರ್ಮ, ಭಾವನಾತ್ಮಕ ವಿಚಾರಗಳು ಅಸೂಯೆ ನನ್ನ ಸೋಲಿಗೆ ಕಾರಣ ಎಂದು ಹೇಳಿದರು.
ಸಾಮಾನ್ಯ ಕಾರ್ಯಕರ್ತನಾಗಿ ನಾನು ಕೆಲಸ ಮಾಡುತ್ತೇನೆ. ಇನ್ನು ಮುಂದೆ ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ನೇತೃತ್ವದಲ್ಲಿ ಕೆಲಸ ಮಾಡುತ್ತೇನೆ. ರಾಜ್ಯಕ್ಕೆ ಕೊಟ್ಟ ಮಾತಿಂದ ಹಿಂದೆ ಸರಿಯುವ ಮಾತಿಲ್ಲ. ನಾನು ಹೊಸದಾಗಿ ಬಂದಾಗ ಜನ ಕೆಲಸ ಮಾಡ್ತಾರೆ ಅಂತ ಗೆಲ್ಲಿಸಿದ್ರು. ಡಾಕ್ಟರ್ ಬಂದಾಗ ಡಾಕ್ಟರ್ ಅವರನ್ನೂ ಗೆಲ್ಲಿಸಿದ್ದಾರೆ. ಅವರಿಗೆ ನಾನು ಈ ಸಂದರ್ಭದಲ್ಲಿ ಅಭಿನಂದನೆ ಸಲ್ಲಿಸಿದ್ದೇನೆ. ಮಾಧ್ಯಮಗಳು ನನ್ನನ್ನು ಹೇಗೆ ಬಿಂಬಿಸಿದವು, ಅವರನ್ನು ಹೇಗೆ ಬಿಂಬಿಸಿದವು ಎಂಬುದು ಗೊತ್ತಿದೆ. ಹೀಗಾಗಿ ಮಾಧ್ಯಮಗಳಿಗೂ ಅಭಿನಂದನೆ ಅರ್ಪಿಸುತ್ತೇನೆ ಎಂದರು.