ಮೈಸೂರು: ಮೈಸೂರು ರೈಲ್ವೆ ನಿಲ್ದಾಣವನ್ನು ಮುಂದಿನ ೨೦-೩೦ ವರ್ಷಗಳ ಪ್ರಯಾಣಿಕರನ್ನು ಗಮನದಲ್ಲಿಟ್ಟುಕೊಂಡು ಬೈಯ್ಯಪ್ಪನಹಳ್ಳಿ ಮಾದರಿಯಲ್ಲಿ ಅಭಿವೃದ್ಧಿಪಡಿಸಲಾಗುವುದು. ಸೆಪ್ಟಂಬರ್ ತಿಂಗಳಲ್ಲಿ ೭೫೦ ಕೋಟಿ ರೂ.ವೆಚ್ಚದಲ್ಲಿ ಹೆಚ್ಚುವರಿ ಟಿಕೆಟ್ ಕೌಂಟರ್ ಸೇರಿ ಇನ್ನಿತರ ಕಾಮಗಾರಿ ಆರಂಭವಾಗಲಿದೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು.
ನಗರದ ರೈಲ್ವೆ ವಿಭಾಗೀಯ ಕಚೇರಿಯಲ್ಲಿ ಬುಧವಾರ ಗತಿಶಕ್ತಿ ವಿಭಾಗ ಮತ್ತು ರೈಲ್ವೆ ಇಲಾಖೆ ಅಧಿಕಾರಿಗಳೊಂದಿಗೆ ರೈಲ್ವೆ ಇಲಾಖೆ ಅಭಿವೃದ್ಧಿ ಕಾಮಗಾರಿಗಳ ಕುರಿತು ಸಭೆ ನಡೆಸಿದ ಬಳಿಕ ಮಾತನಾಡಿದ ಅವರು, ೩೪೬.೬೪ ಕೋಟಿ ರೂ. ವೆಚ್ಚದಲ್ಲಿ ಮೈಸೂರು ರೈಲ್ವೆ ನಿಲ್ದಾಣ ವಿಸ್ತರಣೆ ಕಾಮಗಾರಿ ಕೈಗೊಳ್ಳಲಾಗುವುದು. ಈಗಾಗಲೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ. ಆ.೩೦ಕ್ಕೆ ಟೆಕ್ನಿಕಲ್ ಬಿಡ್ ಆಗುತ್ತದೆ. ನವೆಂಬರ್ ತಿಂಗಳೊಳಗೆ ಕಾಮಗಾರಿ ಆರಂಭಿಸಲಾಗುತ್ತದೆ. ಮೂರು ವರ್ಷಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದರು.
ಚಾಮರಾಜ ಒಡೆಯರ್ ೧೮೭೦ರಲ್ಲಿ ಕರ್ನಾಟಕಕ್ಕೆ ರೈಲ್ವೆ ಟ್ರ್ಯಾಕ್ ತಂದರು. ಹೀಗಾಗಿ ರೈಲ್ವೆ ನಿಲ್ದಾಣದ ೩ನೇ ಪ್ರವೇಶ ದ್ವಾರದಲ್ಲಿ ಚಾಮರಾಜ ಒಡೆಯರ್ ಪ್ರತಿಮೆ ನಿರ್ಮಾಣ ಮಾಡಲಾಗುವುದು. ಮಾತ್ರವಲ್ಲದೇ ಮೈಸೂರು ರೈಲ್ವೆ ನಿಲ್ದಾಣಕ್ಕೆ ಚಾಮರಾಜ ಒಡೆಯರ್ ಹೆಸರಿಡಲು ಕ್ರಮವಹಿಸಲಾಗುತ್ತಿದೆ. ರೈಲು ನಿಲ್ದಾಣದಲ್ಲಿ ಆರು ಪ್ಲಾಟ್‌ಫಾರಂ ಜತೆಗೆ ಹೆಚ್ಚುವರಿಯಾಗಿ ಮೂರು ಪ್ಲಾಟ್‌ಫಾರಂ, ನಾಲ್ಕು ಫಿಟ್‌ಲೈನ್, ನಾಲ್ಕು ಸಬ್‌ಲೇನ್ ಬರಲಿವೆ ಎಂದರು. ಬೈಯ್ಯಪ್ಪನಹಳ್ಳಿ ಮಾದರಿ ದ್ವಾರ: ಬೈಯ್ಯಪ್ಪನಹಳ್ಳಿ, ಯಶವಂತಪುರ ಟರ್ಮಿನಲ್ ಮಾದರಿಯಲ್ಲಿ ಮೈಸೂರಿನ ಸಿಎಫ್‌ಟಿಆರ್‌ಐ ಕಡೆಗಿನ ರೈಲ್ವೆ ನಿಲ್ದಾಣದ ೩ನೇ ಪ್ರವೇಶ ದ್ವಾರ ನಿರ್ಮಿಸಲು ಚರ್ಚಿಸಲಾಗುತ್ತಿದೆ. ಮುಂದಿನ ೨ ತಿಂಗಳಲ್ಲಿ ಡಿಪಿಆರ್ ಸಿದ್ದಪಡಿಸಲಾಗುವುದು. ಇದಕ್ಕೆ ಹೆಚ್ಚುವರಿಯಾಗಿ ೨೦೦ ಕೋಟಿ ರೂ. ಖರ್ಚಾಗಲಿದೆ. ೧೬ರಿಂದ ೨೦ ಕೊಠಡಿ ಇರುವ ಒಂದು ಫ್ಲಾಜಾ, ಸೂಪರ್ ಮಾರ್ಕೆಟ್, ಹೋಟೆಲ್ ಮೊದಲಾದ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದರು.
ಕೆಆರ್‌ಎಸ್ ರಸ್ತೆಯ ಬಳಿ ರೈಲ್ವೆ ಓವರ್ ಬ್ರಿಡ್ಜ್ ಮಾಡುವ ವಿನ್ಯಾಸ ಅನುಮೋದನೆ ಹಂತದಲ್ಲಿದೆ. ಕ್ರಾಫರ್ಡ್‌ಹಾಲ್ ಪಕ್ಕದಲ್ಲಿರುವ ರೈಲ್ವೆ ಹಳಿ ಬಳಿಯಲ್ಲಿ ಶೀಘ್ರವೇ ಅಂಡರ್ ಪಾಸ್ ಕಾಮಗಾರಿ ಕೈಗೊಳ್ಳಲಾಗುತ್ತದೆ ಎಂದರು ತಿಳಿಸಿದರು. ಮೈಸೂರಿನಿಂದ ಬೆಂಗಳೂರಿಗೆ ಹೋಗುವ ಕೆಲವು ರೈಲುಗಳು ಕೆಂಗೇರಿ ತಲುಪಲು ತಡವಾಗುತ್ತಿದೆ. ೨ ಗಂಟೆಯೊಳಗೆ ಕೆಂಗೇರಿ ತಲುಪುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಮೈಸೂರು-ಬೆಂಗಳೂರು ನಡುವೆ ಮಾಸ್ ರ್‍ಯಾಪಿಡ್ ಟ್ರಾನ್ಸ್‌ಪೊರ್ಟೇಷನ್ ಸಿಸ್ಟಂ ಜಾರಿಗೆ ತರಲು ಚಿಂತಿಸಲಾಗುತ್ತಿದೆ. ೩ ಎಲೆಕ್ಟ್ರಿಕ್ ಟ್ರೈನ್ ತರಲು ಪ್ರಯತ್ನಿಸಲಾಗುತ್ತಿದೆ. ಮುಂಬೈ-ಬೆಂಗಳೂರು ನಡುವೆ ಸಂಚರಿಸುವ ಉದ್ಯಾನ್ ಎಕ್ಸ್‌ಪ್ರೆಸ್ ರೈಲನ್ನು ಮೈಸೂರಿಗೆ ತರಲು ಪ್ರಯತ್ನಿಸಲಾಗುವುದು. ಮೈಸೂರು ವಾರಣಾಸಿ ಸೂಪರ್ ಫಾಸ್ಟ್ ರೈಲು ವಾರದಲ್ಲಿ ನಾಲ್ಕು ದಿನ ಬಳಕೆಯಾಗದೇ ಇರುತ್ತದೆ. ಅದನ್ನು ರಾಮೇಶ್ವರಕ್ಕೆ ವಾರದ ರೈಲುಗಾಡಿಯಾಗಿ ಪರಿಚಯಿಸಲು ಚಿಂತಿಸಲಾಗುತ್ತಿದೆ ಎಂದರು.
ವಿಭಾಗೀಯ ರೈಲ್ವೆ ವ್ಯವಸ್ಥಾಪಕಿ ಶಿಲ್ಪಿ ಅಗರ್‌ವಾಲ್, ಗತಿಶಕ್ತಿ ಯೋಜನೆ ಉಸ್ತುವಾರಿ ವಿಷ್ಣುದಾಸ್ ಇನ್ನಿತರರು ಹಾಜರಿದ್ದರು.
ಮೈಸೂರು ರಿಂಗ್ ರಸ್ತೆಗೆ ಬೆಳಕು ನೀಡುವುದು ೧೨ ಕೋಟಿ ಯೋಜನೆಯಾಗಿದೆ. ರಾಜ್ಯ ಸರಕಾರ ಗುತ್ತಿಗೆದಾರರಿಗೆ ನೀಡಬೇಕಾದ ಗುತ್ತಿಗೆ ಹಣವನ್ನು ತಡೆಹಿಡಿಯಿರಿ ಎಂದು ಆದೇಶಿಸಿದೆ. ಹೀಗಾಗಿ ಯೋಜನೆಗೆ ಸಂಬಂಧಿಸಿದ ೬ ಕೊಟಿ ರೂ. ಬಾಕಿ ಹಣವನ್ನು ಗುತ್ತಿಗೆದಾರರಿಗೆ ನೀಡಬೇಕಿದೆ. ಪರಿಣಾಮವಾಗಿ ಅಂತಿಮ ಹಂತದ ಕಾಮಗಾರಿ ಪೂರ್ಣಗೊಳಿಸದೆ ರಿಂಗ್ ರಸ್ತೆ ಮತ್ತೆ ಕತ್ತಲಲ್ಲಿದೆ.
-ಪ್ರತಾಪ್ ಸಿಂಹ, ಸಂಸದ
ಮೈಸೂರು-ಕುಶಾಲನಗರ ರೈಲ್ವೆ ಡಿಪಿಆರ್:ಮೈಸೂರು-ಕುಶಾಲನಗರ ನಡುವಿನ ರೈಲ್ವೆ ಯೋಜನೆಯ ಪ್ರಾಥಮಿಕ ಡಿಪಿಆರ್ ತಯಾರಾಗಿದ್ದು, ಮತ್ತೊಂದು ಸುತ್ತಿನಲ್ಲಿ ಪರಿಶೀಲಿಸಿ ಆಗಸ್ಟ್ ತಿಂಗಳಲ್ಲಿ ಭಾರತೀಯ ರೈಲ್ವೆ ಮಂಡಳಿಗೆ ಪ್ರಸ್ತಾವನೆ ಸಲ್ಲಿಸಲಾಗುವುದು. ಮೈಸೂರು-ಕುಶಾಲನಗರ ನಡುವೆ ೮೭ ಕಿ.ಮೀ ಇದ್ದು, ಪ್ರಾಥಮಿಕವಾಗಿ ೧೮೫೪.೬೨ ಕೋಟಿ ರೂ.ವೆಚ್ಚದ ಯೋಜನೆಗೆ ಸರ್ವೆ ಮಾಡಲಾಗಿದೆ. ಮತ್ತೊಂದು ಸುತ್ತಿನ ಸರ್ವೆ ನಡೆಸಿದ ಬಳಿಕ ಅಂತಿಮ ಡಿಪಿಆರ್‌ನ್ನು ರೈಲ್ವೆ ಮಂಡಳಿಗೆ ಕಳುಹಿಸಲಾಗುವುದು. ಅಂತಿಮ ಹಂತದ ಸರ್ವೆ ಕಾರ್ಯ ಮುಗಿದ ಮೇಲೆ ಎರಡು ಸಾವಿರ ಕೋಟಿ ದಾಟಬಹುದು. ಮೈಸೂರಿನಿಂದ ಬೆಳಗೊಳ, ಇಲವಾಲ, ಬಿಳಿಕೆರೆ, ಉದ್ದೂರು, ಹುಣಸೂರು, ಸತ್ಯಗೋಳ, ಪಿರಿಯಾಪಟ್ಟಣ, ದೊಡ್ಡಹೊಸೂರು, ಕುಶಾಲನಗರ ಸೇರಿ ೯ ರೈಲ್ವೆ ನಿಲ್ದಾಣಗಳು ಬರಲಿವೆ. ಈಗಾಗಲೇ ಕೇಂದ್ರ ಸರ್ಕಾರ ಅನುದಾನ ಮೀಸಲಿಟ್ಟಿರುವ ಕಾರಣ ಡಿಪಿಆರ್‌ಗೆ ಅನುಮೋದನೆ ದೊರೆಯುತ್ತಿದ್ದಂತೆ ಭೂ ಸ್ವಾಧೀನ ಕಾರ್ಯ ಆರಂಭವಾಗಲಿದೆ ಸಂಸದ ಪ್ರತಾಪಸಿಂಹ ತಿಳಿಸಿದರು.
ದಶಪಥ ರೇಸ್ ಟ್ರ್ಯಾಕ್ ಅಲ್ಲ:ಮೈಸೂರು-ಬೆಂಗಳೂರು ನಡುವಿನ ದಶಪಥ ರಸ್ತೆ ಸಂಚಾರಕ್ಕಿರುವ ರಸ್ತೆಯೇ ಹೊರತು ರೇಸ್ ಮಾಡುವ ಟ್ರ್ಯಾಕ್ ಅಲ್ಲ. ಯಾವ ಜಾಗದಲ್ಲಿ ಅವೈeನಿಕವಾಗಿದೆ ಎಂಬುದನ್ನು ಯಾರೇ ಮಹಾನುಭಾವರು ತಿಳಿಸಿದರೂ ಸರಿಪಡಿಸಲಾಗುವುದು. ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿ ಸಾವಿನ ರಸ್ತೆಯಾಗಿ ಮಾರ್ಪಟ್ಟಿದೆ ಎನ್ನುತ್ತಾರೆ. ಅವೈeನಿಕವಾಗಿ ರಸ್ತೆ ಇಲ್ಲ. ಈಗ ಅಪಘಾತದಿಂದ ಮೃತಪಟ್ಟಿರುವ ಶೇ.೯೦ರಷ್ಟು ಪ್ರಕರಣಗಳು ಚಾಲಕರ ಬೇಜವಾಬ್ದಾರಿ, ನಿರ್ಲPದಿಂದ ಆಗಿವೆ. ಯಾರಾದರೂ ಈ ರಸ್ತೆಯಲ್ಲಿ ಇಂತಹ ಕಡೆ ಅವೈeನಿಕವಾಗಿ ಇದೆ ಎಂಬುದನ್ನು ಹೇಳಲಿ ಎಂದು ಪ್ರತಾಪಸಿಂಹ ಸವಾಲು ಹಾಕಿದರು.