ಬೆಳಗಾವಿ: ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಮತಗಳು ಬಿಜೆಪಿಗೆ ಹೋಗಿವೆ, ಇದರ ಪರಿಣಾಮವಾಗಿ ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ತಮ್ಮ ಪುತ್ರ ಮೃಣಾಲ್ ಹೆಬ್ಬಾಳ್ಕರ್ ಸೋತಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸೋಮವಾರ ಹೇಳಿದ್ದಾರೆ.
ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೊಂದಿಗಿನ ಸಭೆಯ ನಂತರ ಲಕ್ಷ್ಮಿ ಈ ವಿಷಯ ತಿಳಿಸಿದರು. ಅವರ ಪುತ್ರ ಮೃಣಾಲ್ ಅವರು ಬಿಜೆಪಿಯ ಜಗದೀಶ್ ಶೆಟ್ಟರ್ ವಿರುದ್ಧ ೧.೭೮ ಲಕ್ಷ ಮತಗಳ ಅಂತರದಿಂದ ಸೋತಿದ್ದಾರೆ. ಬೆಳಗಾವಿಯಲ್ಲಿ ತ್ರಿಕೋನ ಸ್ಪರ್ಧೆ ಇತ್ತು. ಈ ಬಾರಿ ಬಿಜೆಪಿ ಮತ್ತು ಎಂಇಎಸ್ ಒಂದಾಗಿದಂತೆ ಕಾಣುತ್ತಿದೆ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದರು.
ಸಚಿವರು ಸಂಖ್ಯೆಗಳನ್ನು ಬಳಸಿಕೊಂಡು ತಮ್ಮ ಸಿದ್ಧಾಂತವನ್ನು ವಿವರಿಸಿದರು. ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ ಎಂಇಎಸ್ ೪೫ ಸಾವಿರ ಮತಗಳನ್ನು ಪಡೆದಿತ್ತು. ಬೆಳಗಾವಿ ಲೋಕಸಭಾ ಉಪಚುನಾವಣೆಯಲ್ಲಿ ಸತೀಶ್ ಜಾರಕಿಹೊಳಿ ೪ ಲಕ್ಷ ಮತಗಳನ್ನು ಪಡೆದರೆ, ಎಂಇಎಸ್ ೧.೩೦ ಲಕ್ಷ ಮತಗಳನ್ನು ಪಡೆದಿದೆ. ಈ ಬಾರಿ ಎಂಇಎಸ್ ಅಭ್ಯರ್ಥಿ ಕೇವಲ ೯ ಸಾವಿರ ಮತಗಳನ್ನು ಪಡೆದಿದ್ದಾರೆ.
೨೦೧೮ರಲ್ಲಿ ನಾನು ೫೨,೦೦೦ ಮತಗಳ ಅಂತರದಿಂದ ಗೆದ್ದಿದ್ದೆ. ಒಂದು ವರ್ಷದ ನಂತರ ನಡೆದ ಲೋಕಸಭಾ ಚುನಾವಣೆಯಲ್ಲಿ ಸುರೇಶ್ ಅಂಗಡಿ ಅವರು ನನ್ನ ಕ್ಷೇತ್ರದಲ್ಲಿ ೭೯,೦೦೦ ಮತಗಳ ಮುನ್ನಡೆ ಪಡೆದರು. ೨೦೨೩ರಲ್ಲಿ ನಾನು ೫೯,೦೦೦ ಮತಗಳ ಅಂತರದಿಂದ ಗೆದ್ದಿದ್ದೆ. ಆದ್ದರಿಂದ, ವಿಭಿನ್ನ ಚುನಾವಣೆಗಳಿಗೆ ಮತದಾರರ ಮನಸ್ಥಿತಿ ವಿಭಿನ್ನವಾಗಿದೆ ಎಂದು ಅವರು ಹೇಳಿದರು