ಮಂಡ್ಯ: ಬರಗಾಲದಲ್ಲಿ ಗ್ರಾಮಕ್ಕೆ ಕುಡಿಯುವ ನೀರು ಕೊಟ್ಟು ಮಾನವೀಯತೆ ಮೆರದಿದ್ದ ದಂಪತಿಯನ್ನು ಗ್ರಾಮಸ್ಥರು ಸನ್ಮಾನಿಸಿ ಅಭಿನಂದಿಸಿದ್ದಾರೆ.
ಮಂಡ್ಯ ತಾಲ್ಲೂಕಿನ ಹಳೆ ಬೂದನೂರು ಗ್ರಾಮದ ಪವಿತ್ರ-ಸಿದ್ದಪ್ಪ ಎಂಬುವವರು, ತಮ್ಮ ಸ್ವಂತ ಬೋರ್ ವೆಲ್ ನಿಂದ ಗ್ರಾಮಕ್ಕೆ ಕುಡಿಯುವ ನೀರು ಒದಗಿಸಿದ್ದರು.
ಗ್ರಾಮಸ್ಥರು ಕಳೆದ ಮೂರು ತಿಂಗಳಿಂದ ಭೀಕರ ಬರಗಾಲಕ್ಕೆ ತತ್ತರಿಸಿದ್ದರು. ಬಿಸೀಲ ಬೇಗೆಗೆ ಗ್ರಾಮದ ಕೆರೆ,ಕಟ್ಟೆ, ಕೊಳವೆ ಬಾವಿಗಳು ಬತ್ತಿಹೋಗಿದ್ದವು.
ಈ ಸಂದರ್ಭದಲ್ಲಿ ಗ್ರಾಮದ ಜನರಿಗೆ ಕುಡಿಯುವ ನೀರು ಕೊಟ್ಟು ಮಾನವೀಯತೆ ಮೆರೆದಿದ್ದರು. ಈ ಹಿನ್ನಲೆ ದಂಪತಿಯನ್ನು ಗ್ರಾಮಸ್ಥರು ಸನ್ಮಾನಿಸಿದ್ದಾರೆ.
ಈ ವೇಳೆ ಗ್ರಾಪಂ ಮಾಜಿ ಸದಸ್ಯ ಬಿ.ಕೆ.ಸತೀಶ ಮಾತನಾಡಿ, ಯಾವುದೇ ಪ್ರತಿಫಲ ಅಪೇಕ್ಷೆ ಇಲ್ಲದ ದಂಪತಿ ಜನರಿಗೆ ಬರದ ಸಂದರ್ಭದಲ್ಲಿ ನೀರು ನೀಡಿದ್ದಾರೆ. ಕುಡಿಯುವ ನೀರು ಕೊಟ್ಟ ಜನರ ಜೀವ ಉಳಿಸಿದ್ದಾರೆ. ಸ್ಥಳೀಯ ಗ್ರಾಪಂ ಕೊಳವೆ ಬಾವಿಯ ವಿದ್ಯುತ್ ಬಿಲ್ ಪಾವತಿಸುವ ಭರವಸೆ ನೀಡಿದೆ. ಅದಷ್ಟು ಬೇಗ ಅದನ್ನು ಗ್ರಾ.ಪಂ ಪಾವತಿಸಬೇಕು. ಹಾಗೂ ನೀರು ನೀಡಿದ ಗ್ರಾಮದವರಿಗೆ ಸನ್ಮಾನಿಸಿ ಅಭಿನಂದನಾ ಪತ್ರ ನೀಡಲಿ ಎಂದರು.
ಈ ವೇಳೆ ಮುಖಂಡ ಕೆಂಪಯ್ಯ, ದಿಲೀಪ್ ಕುಮಾರ್, ಗ್ರಾಪಂ ಮಾಜಿ ಸದಸ್ಯ ಕುಳ್ಳ, ಸವಿತಾ, ಸುಧಾ, ನಾಗರತ್ನ ಭಾಗಿಯಾಗಿದ್ದಾರೆ.