ಪಿರಿಯಾಪಟ್ಟಣ: ತಾಲ್ಲೂಕಿನಾದ್ಯಂತ ಮುಂಗಾರಿನಲ್ಲಿ ಬಿತ್ತನೆಗೊಂಡಿರುವ ಮುಸುಕಿನಜೋಳದ ಬೆಳೆಯನ್ನು ಕೀಟಬಾಧೆ (ಸೈನಿಕ ಹುಳು) ಕಾಡುತ್ತಿದ್ದು, ಉತ್ತಮ ಫಸಲು ಹಾಗೂ ಇಳುವರಿ ನಿರೀಕ್ಷೆಯಲ್ಲಿದ್ದ ರೈತ ಧಿಕ್ಕು ತೋಚದೆ ಕಂಗಾಲಾಗಿದ್ದಾನೆ.
ಕಳೆದ ಮೇ ತಿಂಗಳ ಆರಂಭದಲ್ಲಿ ಮಾನ್ಸೂನ್ ಮಳೆ ಆರಂಭಕ್ಕೂ ಮೊದಲು ಅಂದರೆ ಭರಣಿ ಮಳೆಗೆ ತಾಲ್ಲೂಕಿನಾದ್ಯಂತ ಸುಮಾರು 10 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮುಸುಕಿನ ಜೋಳವನ್ನು ಬಿತ್ತನೆ ಮಾಡಲಾಗಿದೆ. ಮುಸುಕಿನ ಜೋಳಕ್ಕೆ ಆರಂಭದಲ್ಲಿ ಮಳೆಯ ಕೊರತೆ ಕಾಡುತ್ತಿದರುವುದು ಮಾತ್ರವಲ್ಲದೆ ಸೈನಿಕ ಹುಳುವಿನ ಕಾಟ ಹೆಚ್ಚಾಗಿರುವುದು ರೈತರನಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ ಜೋಳ ಬಿತ್ತನೆ ಮಾಡಿ ಈಗಾಗಲೇ 50ರಿಂದ 60 ದಿನಗಳು ಕಳೆದಿರುವ ಮುಸುಕಿನ ಜೋಳ ಫಸಲು ಕಚ್ಚುವ ಹಂತದಲ್ಲಿರುವಾಗ ಸೈನಿಕಹುಳುವಿನ ದಾಳಿಗೆ ಸಿಲುಕಿರುವುದು ರೈತರನ್ನು ಚಿಂತೆಗೀಡು ಮಾಡಿದೆ. ಈಗಾಗಲೇ ಮುಸುಕಿನ ಜೋಳ ತೆನೆ ಮೂಡುವ ಹಂತದಲ್ಲಿದ್ದು, ಈಹಂತದಲ್ಲಿ ಸೈನಿಕ ಹುಳುಗಳು ಬೆಳೆಗೆ ಲಗ್ಗೆಇಟ್ಟಿವೆ. ಹಗಲಿನಲ್ಲಿ ಸುಳಿ ಹಾಗೂ ಬುಡದ ಮಣ್ಣಿನ ಒಳಭಾಗ ಸೇರಿಕೊಳ್ಳುವ ಹುಳುಗಳು, ರಾತ್ರಿವೇಳೆ ಹೊರಬಂದು ಗರಿಗಳನ್ನು ತಿನ್ನುತ್ತಿವೆ. ಜೊತೆಗೆ ಗರಿಗಳ ಮೇಲೆ ಹಿಕ್ಕೆ ವಿಸರ್ಜಿಸಿ ರೈತರ ನಿದ್ರೆ ಗೆಡಿಸಿವೆ.
ಕೀಟಬಾದೆ ತೀವ್ರಗೊಂಡು ಮುಸುಕಿನಜೋಳದ ಗರಿಗಳು ಹಾಳಾಗಿರುವ ಪರಿಣಾಮ ಬೆಳವಣಿಗೆಯಲ್ಲಿ ಕುಂಠಿತವಾಗಿದ್ದು, ಇದರಿಂದ ಜೋಳದ ತೆನೆ ಹುಲುಸಾಗಿ ಬರುವುದಿಲ್ಲ. ತೆನೆ ಬಂದರೂ ನಿರೀಕ್ಷೆಯಂತೆ ಫಸಲು ಹಿಡಿಯುವುದು ಅನುಮಾನವಾಗಿದೆ ಎಂದು ರೈತ ಹೆಚ್,ಬಿ.ಶಿವರುದ್ರ ತಮ್ಮ ಅಳಲು ತೋಡಿಕೊಂಡಿದ್ದಾರೆ.
ಕಳೆದ 2ವಾರದಿಂದ ಮೋಡ ಕವಿದ ವಾತಾವರಣ ಹಾಗೂ ಶೀತಮಿಶ್ರಿತ ಗಾಳಿ ಕೀಟಬಾಧೆ ಕಾರಣ ಎನ್ನಲಾಗಿದೆ. ರೈತರು ಹೋಬಳಿಯ ರೈತ ಸಂಪರ್ಕ ಕೇಂದ್ರ ಹಾಗೂ ಖಾಸಗಿ ಔಷಧಿ ಅಂಗಡಿಗಳಲ್ಲಿ ಲಭ್ಯವಿರುವ ಕೀಟನಾಶಕಗಳನ್ನು ತಂದುಬೆಳೆಗೆ ಸಿಂಪಡಿಸಿದರೂ ಕೀಟಬಾಧೆ ನಿಯಂತ್ರಣಕ್ಕೆ ಬಂದಿಲ್ಲ. ಕೆಲವರು ಬೆಳೆಗೆ ತಕ್ಷಣ ಕೀಟನಾಶಕ ಸಿಂಪಡಿಸಿದರೆ, ಇನ್ನೂ ಕೆಲವರು ಕೀಟನಾಶಕ ಸಂಪಡಿಸದೆ ಕೈಚೆಲ್ಲಿರುವ ಕಾರಣ ಹುಳುಗಳ ನಿಯಂತ್ರಣ ಸಾಧ್ಯವಾಗುತ್ತಿಲ್ಲ. ಒಂದು ಎಕರೆ ಜಮೀನಿನಲ್ಲಿ ಮುಸುಕಿನಜೋಳ ಬೆಳೆಯಲು ಬಿತ್ತನೆಯಿಂದ ಕಟಾವಿನ ಹಂತದವರೆಗೆ ಸುಮಾರು 8 ರಿಂದ 9 ಸಾವಿರರೂ. ನಿರ್ವಹಣೆ ವೆಚ್ಚತ ಗುಲಲಿದೆ. ಕೀಟಬಾಧೆಗೆ ತುತ್ತಾಗಿರುವ ಮುಸುಕಿನಜೋಳದ ಬೆಳೆ ಜಾನುವಾರುಗಳ ಮೇವಿಗೂ ಬಳಕೆಯಾಗದ ಸ್ಥಿತಿ ತಲುಪಿದ್ದು, ರೈತರು ದಿಕ್ಕು ತೋಚದ ಪರಿಸ್ಥಿತಿಯಲ್ಲಿದ್ದಾರೆ.
ಮುಂಗಾರಿನಲ್ಲಿ ಬಿತ್ತನೆ ಮಾಡಿದ್ದ ಮುಸುಕಿನ ಜೋಳ ಮಳೆಯ ತೀವ್ರ ಕೊರತೆಯಿಂದ ಒಣಗಿ ಹೋಗಿರುವುದು, ರೈತರಿಗೆ ಆರ್ಥಿಕವಾಗಿ ಸಂಕಷ್ಟ ಎದುರಿಸುವಂತಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಿ ರೋಗಬಾಧೆ ತಡೆ, ಬೆಳೆ ಪರಿಹಾರಕ್ಕೆ ಕ್ರಮವಹಿಸಬೇಕೆಂದು ರೈತರು ಒತ್ತಾಯಿಸಿದ್ದಾರೆ.

- ಪಿರಿಯಾಪಟ್ಟಣ ತಾಲ್ಲೂನಾಧ್ಯಂತ ಹುಲುಸಾಗಿ ಬೆಳೆದಿರುವ ಮುಸುಕಿನ ಜೋಳದ ಬೆಳೆ.