ವರದಿ ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ತಾಲೂಕಿನಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹಾಳಾಗಿದ್ದು ಅದನ್ನು ಕಾಪಾಡುವಲ್ಲಿ ವಿಫಲರಾಗಿರುವ ಶಾಸಕ ಡಿ.ರವಿಶಂಕರ್ ಅವರು ಕ್ಷೇತ್ರದ ಜನತೆಯ ಕ್ಷಮೆ ಕೇಳಬೇಕು ಎಂದು ರಾಜ್ಯ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್ ಹಾಗೂ ಜಿ.ಪಂ.ಮಾಜಿ ಸದಸ್ಯ ಎಂ.ಟಿ.ಕುಮಾರ್ ಜಂಟಿಯಾಗಿ ಒತ್ತಾಯಿಸಿದರು. ಕೆ.ಆರ್.ನಗರ ಪಟ್ಟಣದ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ತಾಲೂಕಿನ ಚಂದಗಾಲು ಗ್ರಾಮದ ಮಹದೇವನಾಯಕನ ಕುಟುಂಬದವರು ಆತ್ಮಹತ್ಯೆಗೆ ಯತ್ನಿಸಿ ಇಬ್ಬರು ಸಾವನ್ನಪ್ಪಿದ್ದು ಇದಕ್ಕೆ ಯಾರು ಹೊಣೆ ಎಂದು ಪ್ರಶ್ನಿಸಿದ ಚಂದ್ರಶೇಖರ್ ಚೀರ‍್ನಹಳ್ಳಿ ಗ್ರಾಮದ ಪುಂಡನಾದ ಕಾಮುಕ ಲೋಕೇಶ್ ಎಂಬಾತನ ಬೆದರಿಕೆಯಿಂದ ಕುಟುಂಬ ಪೊಲೀಸ್ ಠಾಣೆಗೆ ದೂರು ನೀಡಲು ಹೋದಾಗ ಅದನ್ನು ಅವರು ನಿರ್ಲಕ್ಷಿಸಿದ ಪರಿಣಾಮ ಆತ್ಮಹತ್ಯೆಗೆ ಮಾಡಿಕೊಳ್ಳಲು ನಿರ್ಧರಿಸಿರುವ ಪ್ರಕರಣದ ಹೊಣೆಯನ್ನು ಶಾಸಕರೆ ಹೊರಬೇಕೆಂದರು.
ಮಹದೇವನಾಯಕನ ಕುಟುಂಬದ ಆತ್ಮಹತ್ಯೆ ವಿಚಾರದಲ್ಲಿ ನಾನು ಜವಬ್ದಾರಿಯುತವಾಗಿ ನಡೆದುಕೊಂಡಿದ್ದೇನೆ ಎಂದು ಡಿ.ರವಿಶಂಕರ್ ತಿಳಿಸಿದ್ದಾರೆ ಆದರೆ ಆ ದಿನ ಪ್ರಕರಣವನ್ನು ಮುಚ್ಚಿಹಾಕಲು ಕೆ.ಆರ್.ನಗರದ ಪ್ರವಾಸಿ ಮಂದಿರದಲ್ಲಿ ಪ್ರಯತ್ನಿಸಿದ್ದು ಯಾರು ಶಾಸಕರೇ, ದೂರು ದಾಖಲಿಸದಂತೆ ನೀವು ಹೇಳಿಲ್ಲ ಎಂದರೆ ಯೋರೊ ಇದ್ದಾರಲ್ಲ ಚೀರ್ನಹಳ್ಳಿ ಗ್ರಾಮದ ನಿಮ್ಮ ಪಕ್ಷದ ಲೀಡರ್ ಪೊಲೀಸರಿಗೆ ಹೇಳಿಲ್ಲವೇ ಎಂದು ಪ್ರಶ್ನೆ ಹಾಕಿದರು
ಮಾಜಿ ಸಚಿವ ಸಾ.ರಾ.ಮಹೇಶ್ ಅವರ ಶಾಸಕರ ಅವಧಿಯಲ್ಲಿ ಕೆಲವು ಘಟನೆಗಳು ನಡೆದ್ದವು ಎಂದು ಶಾಸಕರು ಹೇಳಿದ್ದಾರೆ ಆದರೆ ಆಗ ಯಾರೋ ಗ್ರಾಮದಲ್ಲಿ ಪರಸ್ಪರ ವೈಯುಕ್ತಿಕ ವಿಚಾರಕ್ಕೆ ಹೊಡೆದಾಡಿ ಕೊಂಡಿದ್ದರು, ಅದು ಆ ಗ್ರಾಮದ ವಿಚಾರ ಆದರೆ ಚಂದಗಾಲು ಗ್ರಾಮದಲ್ಲಿ ನಡೆದಿರುವುದು ಮುಂಚಿತವಾಗಿ ಪೊಲೀಸರಿಗೆ ತಿಳಿದಿತ್ತು ಎಂದರು.
ಬಳಿಕ ಜಿ.ಪಂ.ಮಾಜಿ ಸದಸ್ಯ ಎಂ.ಟಿ.ಕುಮಾರ್ ಮಾತನಾಡಿ ಮಾಜಿ ಸಚಿವರಾದ ಸಾ.ರಾ.ಮಹೇಶ್ ಅಭಿವೃದ್ದಿ ವಿಚಾರದಲ್ಲಿ ನನ್ನ ಜತೆ ಕೈಜೋಡಿಸಲಿ ಎಂದು ಶಾಸಕರು
ಕೇಳಿದ್ದಾರೆ ಆದರೆ ವಾಸ್ತವವಾಗಿ ಇಲ್ಲಿ ಒಂದು ವರ್ಷದಿಂದ ಯಾವ ಕೆಲಸಗಳು ನಡೆಯುತ್ತಿವೆ ಎಂದು ವ್ಯಂಗ್ಯವಾಗಿ ಮಾತನಾಡಿದ ಎಂ.ಟಿ.ಕುಮಾರ್ ಮುಂದಾದರು ಡಿ.ರವಿಶಂಕರ್ ಅವರು ತಾಲೂಕು ಆಡಳಿತ ಮತ್ತು ಪೊಲೀಸ್ ಇಲಾಖೆಗೆ ಸೂಕ್ತ ನಿರ್ದೇಶನ ನೀಡಿ ಕ್ಷೇತ್ರದ ಜನತೆಗೆ ರಕ್ಷಣೆ ನೀಡಲಿ ಎಂದು ಸಲಹೆ ನೀಡಿದರು.
ಮಹದೇವನಾಯಕನ ಕುಟುಂಬದವರು ಪೊಲೀಸ್ ಠಾಣೆಗೆ ದೂರು ನೀಡಲು ಹೋದಾಗ ಪೊಲೀಸರು ತಿಸ್ಕರಿಸಿದ ಸಮಯದಲ್ಲಿ ಗಮನಿಸದ ಶಾಸಕರ ಕಣ್ಣು ಆ ಕುಟುಂಬ ಆತ್ಮಹತ್ಯೆಗೆ ಯತ್ನಿಸಿದಾಗ ತೆರೆಯಿತೆ ಎಂದು ಟೀಕಿಸಿದರು.
ವಾಸ್ತವವಾಗಿ ಪ್ರಕರಣವನ್ನು ಮುಚ್ಚಿಹಾಕಲು ಶಾಸಕರು ವ್ಯವಸ್ಥಿತ ಹುನ್ನಾರ ನಡೆಸಿದ್ದರು ಆದರೆ ಈ ವಿಚಾರದಲ್ಲಿ ಮಾಜಿ ಸಚಿವರಾದ ಸಾ.ರಾ.ಮಹೇಶ್ ಅವರು ಮಧ್ಯೆ ಪ್ರವೇಶ ಮಾಡಿದ ನಂತರ ನೊಂದ ಕುಟುಂಬಕ್ಕೆ ನ್ಯಾಯ ದೊರೆತು ಪುಂಡನ ವಿರುದ್ದ ದೂರು ದಾಖಲಾಗಿ ತಪ್ಪಿತಸ್ಥ ಪೊಲೀಸರ ಅಮಾನತ್ತಾಗಿದೆ ಎಂದರು.
ಆತ್ಮಹತ್ಯೆ ಮಾಡಿಕೊಂಡಿರುವ ಕುಟುಂಬದವರಿಗೆ ಪರಿಹಾರದ ಚೆಕ್ ನೀಡಲು ಸಾ.ರಾ.ಮಹೇಶ್ ಯಾರು ಎಂದು ಶಾಸಕರು ಪ್ರಶ್ನಿಸಿದ್ದಾರೆ ಆದರೆ ವಿಧಾನ ಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡರ ಮೂಲಕ ಚೆಕ್ ಕೊಡಿಸಲಾಗಿದೆ ಇದಕ್ಕೆ ನಿಮ್ಮ ವೈಫಲ್ಯವು ಕಾರಣ ಎಂದು ಅರಿಯ ಬೇಕೆಂದರು.
ತಾಲೂಕು ಜೆಡಿಎಸ್ ಅಧ್ಯಕ್ಷ ಹೆಚ್.ಸಿ.ಕುಮಾರ್ ಮಾತನಾಡಿ ಆತ್ಮಹತ್ಯೆ ಪ್ರಕರಣದ ವಿಚಾರದಲ್ಲಿ ತಪ್ಪಿತಸ್ಥನ ವಿರುದ್ದ ದೂರು ದಾಖಲಾಗಿ ನೊಂದ ಕುಟುಂಬಕ್ಕೆ ನ್ಯಾಯ ಕೊಡಿಸಿ ಪರಿಹಾರ ಸಿಗಲು ಮಾಜಿ ಸಚಿವ ಸಾ.ರಾ.ಮಹೇಶ್ ಕಾರಣರಾಗಿದ್ದು ಅವರು ವಿರುದ್ದ ಮಾತನಾಡುವ ನೈತಿಕ ಹಕ್ಕು ಶಾಸಕ ಡಿ.ರವಿಶಂಕರ್ ಅವರಿಗಿಲ್ಲ ಎಂದರು
ಸಾಲಿಗ್ರಾಮ ತಾಲೂಕು ಜೆಡಿಎಸ್ ಅಧ್ಯಕ್ಷ ಮೆಡಿಕಲ್ ರಾಜಣ್ಣ ಮಾತನಾಡಿ ಸಾಲಿಗ್ರಾಮ ಕೋಮು ಗಲಭೆಗೆ ಸಾ.ರಾ.ಮಹೇಶ್ ಸಹೋದರ ಕಾರಣ ಎಂದು ಶಾಸಕ ಡಿ.ರವಿಶಂಕರ್ ಆರೋಪ ಮಾಡಿದ್ದಾರೆ, ಅಂದು ನಡೆದ ಗಲಾಟೆಯನ್ನು ತಡೆದಿದ್ದು ಅಂದಿನ ಶಾಸಕ ಸಾ.ರಾ.ಮಹೇಶ್ ಸಹೋದರ ಎಂಬುದನ್ನು ಅರಿಯಿರಿ.
ಚಂದಗಾಲು ಗ್ರಾ.ಪಂ.ಸದಸ್ಯ ಮಹದೇವನಾಯಕ, ಜಿಲ್ಲಾ ಯುವ ಜೆಡಿಎಸ್ ಉಪಾಧ್ಯಕ್ಷ ಕೆಗ್ಗೆರೆ ಕುಚೇಲ, ನಗರ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ರುದ್ರೇಶ್, ಸುದ್ದಿಗೋಷ್ಠಿಯಲ್ಲಿ ಇದ್ದರು.