ವರದಿ : ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ಸಾಲಿಗ್ರಾಮ ತಾಲೂಕಿನ ಚಿಕ್ಕಕೊಪ್ಪಲು ಗ್ರಾಮದಲ್ಲಿ ಬಂಡಿಹಬ್ಬದ ಪ್ರಯುಕ್ತ ಶ್ರೀ ಆದಿಶಕ್ತಿ ಮುತ್ತುತಾಳಮ್ಮ ದೇವರ ರಥೋತ್ಸವ ಶುಕ್ರವಾರ ರಾತ್ರಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ಬಾರಿ ವಿಜೃಂಭಣೆಯಿಂದ ನಡೆಯಿತು.
11 ವರ್ಷದ ನಂತರ ನಡೆದ ಈ ಹಬ್ಬದ ಹಿನ್ನಲೆಯಲ್ಲಿ ಚಿಕ್ಕಕೊಪ್ಪಲು ಗ್ರಾಮದ ದೇವರಹಟ್ಟಿ ಬಳಿ ಹೂವಿನ ಅಲಂಕಾರ ದಿಂದ ಶೃಂಗಾರಗೊಂಡಿದ್ದ ರಥದಲ್ಲಿ ಆದಿಶಕ್ತಿ ಮುತ್ತುತಾಳಮ್ಮ ದೇವರನ್ನ ಪ್ರತಿಷ್ಠಾಪಿಸಿದ ಬಳಿದ ಅರ್ಚಕ ಮಂಜುನಾಯಕ್ ದೇವರಿಗೆ ಪೂಜೆ ಸಲ್ಲಿಸಿದ ನಂತರ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.
ನಂತರ ಹಾಜರಿದ್ದ ಭಕ್ತರು ದೇವರಿಗೆ ಚಪ್ಪಾಳೆ- ಜಯಕಾರ ದೊಂದಿಗೆ ರಥವನ್ನು ಗ್ರಾಮದಿಂದ ಕುಪ್ಪೆ ಗ್ರಾಮಕ್ಕೆ ಎಳೆದು ತಂದು ದೂಳ್ ಮರಿ ಬಲಿ ಕೊಟ್ಟ ನಂತರ ಮತ್ತೆ ಚಿಕ್ಕಕೊಪ್ಪಲು ಗ್ರಾಮದ ಹೊರವಲಯದ ಬಳಿ ಇರುವ ಶ್ರೀ ಆದಿಶಕ್ತಿ ಮುತ್ತುತಾಳಮ್ಮ ದೇವರ ದೇವಸ್ಥಾನಕ್ಕೆ ತಂದು ಸಂಭ್ರಮಿಸಿದರು.
21 ಕ್ಕೆ ಮಡೆ ಹಬ್ಬ
14 ಶುಕ್ರವಾರ ದಿಂದ ಗ್ರಾಮದಲ್ಲಿ ಆಂಭಗೊಂಡ ಬಂಡಿ ಹಬ್ಬವು 21 ರ ಶುಕ್ರವಾರ ಸಂಜೆ 7 ಗಂಟೆಗೆ ಗ್ರಾಮದ ಮಲ್ಲಮ್ಮನ ಕೊಳದ ಬಳಿಯಿಂದ ತಬ್ಬಿಟ್ಟಿನ ಆರತಿಯನ್ನು ಗ್ರಾಮದ ಹೆಬ್ಬಾಗಿಲಿನ ವರಿಗೆ ಮೆರವಣಿಗೆ ಮಾಡುವ ಮೂಲಕ ಮಡೆ ಹಬ್ಬ ನಡೆದು 8 ದಿನಗಳ ಕಾಲ ನಡೆದ ಮುತ್ತುತಾಳಮ್ನ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ಮುಕ್ತಾಯವಾಗಲಿದೆ.
ಆನಂತರ ಭಕ್ತಾಧಿಗಳು ಮತ್ತು ಗ್ರಾಮಸ್ಥರು ಆದಿ ಶಕ್ತಿ ಮುತ್ತುತಾಳಮ್ಮ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಹಬ್ಬದ ಹಿನ್ನಲೆಯಲ್ಲಿ ದೇವಾಲಯದ ಬಳಿ ಹಾಕಲಾಗಿದ್ದ ಕೊಂಡ ಹಾದು ತಮ್ಮಇಷ್ಟಾರ್ಥವನ್ನು ನೇರವೇರಿಸುವಂತೆ ಮತ್ತು ಗ್ರಾಮಕ್ಕೆ ಒಳಿತಾಗುವಂತೆ ಪ್ರಾರ್ಥಿಸಿಕೊಂಡರು.
ಬಂಡಿ ಹಬ್ಬ ಮತ್ತು ರಥೋತ್ಸವದ ಹಿನ್ನಲೆಯಲ್ಲಿ ಗ್ರಾಮದಲ್ಲಿ ಹಾಕಲಾಗಿದ್ದ ವಿದ್ಯುತ್ ಆಲಂಕಾರ ಮತ್ತು ವಿವಿಧ ಬಗೆಯ ಪಟಾಕಿಗಳ ಆರ್ಭಟ ವೀರಗಾಸೆಯ ನೃತ್ಯಗಳು ಜೊತಗೆ ನಗಾರಿ ಶಬ್ದ ಅಲ್ಲದೇ ಯುವಕರ ಭರ್ಜರಿ ನೃತ್ಯ ಮನಸೂರೆಗೊಂಡಿತು. ಬೆಳಿಗ್ಗೆ 6 ಗಂಟೆಯಿಂದಲೇ ಮುತ್ತುತಾಳಮ್ಮ ದೇವಾಲಯದಲ್ಲಿ ಹೋಮ ಮತ್ತು ವಿಶೇಷ ಪೂಜಾಕಾರ್ಯ ನಡೆದವು.
ರಥೋತ್ಸವದಲ್ಲಿ ಕುಪ್ಪೆ.ಗ್ರಾ.ಪಂ.ಅಧ್ಯಕ್ಷೆ ಸವಿತಾಶ್ರೀನಿವಾಸ್, ಸದಸ್ಯರಾದ ಸಿ.ಬಿ.ಧರ್ಮ, ರೇಖಾಉಮೇಶ್, ಯಜಮಾನರಾದ ಟಿ.ಪುರುಷೋತ್ತಮ್, ಸತ್ಯಪ್ಪ,ಸಿ.ಬಿ.ಸಂತೋಷ್, ತೊ.ಸ್ವಾಮಿಗೌಡ,ಸಿ.ಎಲ್.ಬಸವರಾಜು,ಡಿ.ಕುಮಾರಸ್ವಾಮಿ, ಸಿ.ಆರ್.ಉಮೇಶ್, ಪ.ಸ್ವಾಮಿಗೌಡ, ಸಿ.ಕೆ.ರಾಮಸ್ವಾಮಿ,ಹೆಗ್ಗಡಿರವೀಶ,ಅಪ್ಪಾಜಿಗೌಡ,ಬಡ್ಡಪ್ಪ ದೊಡ್ಡಜವರನಾಯಕ, ಸೇರಿದಂತೆ ಸಾವಿರಾರು ಮಂದಿ ಹಾಜರಿದ್ದರು.