Tuesday, April 22, 2025
Google search engine

Homeರಾಜ್ಯಸಣ್ಣ ನೀರಾವರಿ ಕೆರೆಗಳು, ಬ್ಯಾರೇಜ್‌ ಮತ್ತು ಕಿಂಡಿ ಅಣೆಕಟ್ಟುಗಳಲ್ಲಿ ನೀರು ಪೋಲಾಗುವುದನ್ನ ತಡೆಗಟ್ಟಿ: ಅಧಿಕಾರಿಗಳಿಗೆ ಸಚಿವ...

ಸಣ್ಣ ನೀರಾವರಿ ಕೆರೆಗಳು, ಬ್ಯಾರೇಜ್‌ ಮತ್ತು ಕಿಂಡಿ ಅಣೆಕಟ್ಟುಗಳಲ್ಲಿ ನೀರು ಪೋಲಾಗುವುದನ್ನ ತಡೆಗಟ್ಟಿ: ಅಧಿಕಾರಿಗಳಿಗೆ ಸಚಿವ ಎನ್‌ ಎಸ್‌ ಬೋಸರಾಜು ಖಡಕ್‌ ಸೂಚನೆ

ಬೆಂಗಳೂರು: ಬರಗಾಲದಿಂದ ಬಳಲಿದ್ದ ರಾಜ್ಯಕ್ಕೆ ಉತ್ತಮ ಮುಂಗಾರಿನ ಆರಂಭವಾಗಿದೆ. ಈ ಮಳೆಯ ನೀರನ್ನ ಸಣ್ಣ ನೀರಾವರಿ ಕೆರೆಗಳು, ಬ್ಯಾರೇಜ್‌ ಮತ್ತು ಕಿಂಡಿ ಅಣೆಕಟ್ಟುಗಳಲ್ಲಿ ಸಮರ್ಪಕವಾಗಿ ಸಂಗ್ರಹಿಸುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಬೇಕು. ನೀರು ಸೋರಿಕೆಯಿಂದ ಪೋಲಾದರೆ ಸಂಬಂಧಪಟ್ಟ ಅಧಿಕಾರಿಗಳನ್ನು ಹೊಣೆಗಾರನ್ನಾಗಿಸುವುದಾಗಿ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್‌ ಎಸ್‌ ಬೋಸರಾಜು ಖಡಕ್‌ ಸೂಚನೆ ನೀಡಿದರು.

ಇಂದು ವಿಕಾಸಸೌಧಲ್ಲಿ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ದಿ ಇಲಾಖೆಯ ಪ್ರಗತಿ ಪರಿಶೀಲನೆಯನ್ನು ನಡೆಸಿ, ಸಣ್ಣ ನೀರಾವರಿ ಇಲಾಖೆಯ ವ್ಯಾಪ್ತಿಯಲ್ಲಿ 3685 ಕೆರೆಗಳಿವೆ. ವಿಭಾಗವಾರು ಸಣ್ಣ ನೀರಾವರಿ ಕೆರೆಗಳಲ್ಲಿನ ಪ್ರಸ್ತುತ ನೀರಿನ ಸಂಗ್ರಹ ಹಾಗೂ ಕೆರೆಗಳ ಸ್ಥಿತಿಗಳ ಬಗ್ಗೆ ಸಮಗ್ರ ಮಾಹಿತಿ ಪಡೆದುಕೊಂಡು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಮಳೆಯ ನೀರು ಸಂಗ್ರಹಿಸಲು ಆದ್ಯತೆ ನೀಡಿ:

ಬರಗಾಲದಿಂದ ತತ್ತರಿಸಿದ್ದ ರಾಜ್ಯಕ್ಕೆ ಉತ್ತಮ ಮುಂಗಾರಿನ ಪ್ರವೇಶವಾಗಿದೆ. ಈ ನೀರಿನ ಸಮರ್ಪಕ ಸಂಗ್ರಹವನ್ನ ಮಾಡುವ ನಿಟ್ಟಿನಲ್ಲಿ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳು ಆದ್ಯತೆ ನೀಡಬೇಕು. ಹೆಚ್ಚಿನ ಪ್ರಮಾಣದಲ್ಲಿ ನೀರು ಸಂಗ್ರಹವಾಗುವುದರಿಂದ ರೈತಾಪಿ ಜನರಿಗೆ ವರ್ಷಪೂರ್ತಿ ಅನುಕೂಲವಾಗುತ್ತದೆ. ಇದನ್ನ ಗಮನದಲ್ಲಿಟ್ಟುಕೊಂಡು ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಯಾವುದೇ ರೀತಿಯಲ್ಲೂ ಕೆರೆಗಳು, ಬ್ಯಾರೇಜ್‌ ಮತ್ತು ಕಿಂಡಿ ಅಣೆಕಟ್ಟುಗಳಲ್ಲಿ ನೀರು ಸೋರಿಕೆ ಅಗಬಾರದು. ನೀರು ಸೋರಿಕೆಯಿಂದ ಪೋಲಾದಲ್ಲಿ ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನು ನೀಡಿದರು.

ಯಾವುದೇ ಅವಘಡಗಳನ್ನು ನಿರ್ವಹಿಸಲು ಸಜ್ಜಾಗಿ:

ಮಳೆಗಾಲದಲ್ಲಿ ಕೆರೆಗಳ ಕೋಡಿಗಳು ಒಡೆಯುವ, ಬ್ಯಾರೇಜ್‌ ಮತ್ತು ಕಿಂಡಿ ಅಣೆಕಟ್ಟುಗಳಿಂದ ನೀರು ಸೋರಿಕೆ ಆಗುವ ಸಂಧರ್ಭಗಳು ಹೆಚ್ಚಾಗುತ್ತವೆ. ಈಗಾಗಲೇ ಬೀದರ್‌ ಹಾಗೂ ವಿಜಯನಗರ ಜಿಲ್ಲೆಗಳಲ್ಲಿ ಇಂತಹ ಪ್ರಕರಣಗಳು ಎದುರಾಗಿವೆ. ಇವುಗಳ ಬಗ್ಗೆ ಮಾಹಿತಿಯನ್ನು ಸಚಿವರು ಪಡೆದುಕೊಂಡರು.  ಇಂತಹ ಅವಘಡಗಳು ಎದುರಾದ ಸಂಧರ್ಭಗಳಲ್ಲಿ ಅಧಿಕಾರಿಗಳು ತಕ್ಷಣ ಕ್ರಮ ವಹಿಸಲು ಸಜ್ಜಾಗಿರಬೇಕು. ನೀರು ಸೋರಿಕೆಯನ್ನು ಶೀಘ್ರವಾಗಿ ತಡೆಗಟ್ಟುಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.

ನೀರು ಹರಿಯುವ ದಾರಿಯನ್ನು ಸುಗಮಗೊಳಿಸಿ:

ಕೆರೆಗಳು, ಬ್ಯಾರೇಜ್‌ ಮತ್ತು ಕಿಂಡಿ ಅಣೆಕಟ್ಟುಗಳಲ್ಲಿ ನೀರು ಹರಿದು ಬರುವಂತಹ ದಾರಿಗಳನ್ನು ಸುಗುಮಗೊಳೀಸಬೇಕು. ಯಾವುದೇ ಅಡೆತಡೆಗಳಿಂದ ನೀರು ಕೆರೆಗೆ ಸಂಗ್ರಹವಾಗದೇ ಪೊಲಾದರೆ ಮುಂದಿನ ದಿನಗಳಲ್ಲಿ ಆಯಾ ಭಾಗದ ಜನರು ತೊಂದರೆಗೀಡಾಗಬೇಕಾಗುತ್ತದೆ. ಇದನ್ನ ತಪ್ಪಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳೀ ಎಂದು ಸೂಚನೆ ನೀಡಿದರು.

ಆಯವ್ಯಯ ಘೋಷಣೆ ಅನುಷ್ಠಾನಕ್ಕೆ ಸೂಚನೆ:

ಬಾಕಿ ಇರುವ ಕಾಮಗಾರಿಗಳ ಪ್ರಗತಿಯ ಬಗ್ಗೆ ಸಚಿವರು ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ಬಾಕಿ ಇರುವಂತಹ ಕಾಮಗಾರಿಗಳನ್ನು ಚುರುಕುಗೊಳಿಸುವಂತೆ ಸೂಚನೆ ನೀಡಿದರು. ಇದೇ ವೇಳೇ, 2024-25 ಸಾಲಿನ ಆಯವ್ಯಯದಲ್ಲಿ ಸುಮಾರು 8 ಕಾಮಾಗಾರಿಗಳ ಘೋಷಣೆಯನ್ನು ಸಿಎಂ ಮಾಡಿದ್ದಾರೆ. ಈ ತಿಂಗಳಾಂತ್ಯಕ್ಕೆ ಅವುಗಳ ಟೆಂಡರ್‌ ಪ್ರಕ್ರಿಯೆ ಮುಗಿಸುವಂತೆ ಸೂಚನೆ ನೀಡಿದರು.

ಕೇಂದ್ರ ಸರಕಾರಕ್ಕೆ ಸಲ್ಲಿಸಿರುವ ಪ್ರಸ್ತಾವನೆಗಳನ್ನ ಪಾಲೋಅಪ್‌ ಮಾಡಿ:

ಪಿಎಂಕೆಎಸ್‌ಎಸ್‌ವೈ ಹಾಗೂ ಆರ್‌ಆರ್‌ಆರ್‌ ಯೋಜನೆಗಳ ಅಡಿಯಲ್ಲಿ ಈಗಾಗಲೇ ಹಲವಾರು ಪ್ರಸ್ತಾವನೆಗಳು ಕೇಂದ್ರ ಸರಕಾರಕ್ಕೆ ಸಲ್ಲಿಸಲಾಗಿದೆ. ಈ ಪ್ರಸ್ತಾವನೆಗಳ ಈ ಹಂತದ ವಸ್ತುಸ್ತಿತಿಯ ಬಗ್ಗೆ ಮಾಹಿತಿಯನ್ನು ಕ್ರೋಡೀಕರಿಸಬೇಕು. ಪ್ರತಿ ವಿಭಾಗದಿಂದಲೂ ಅಗತ್ಯವಿರುವ ಹೊಸ ಯೋಜನೆಗಳ ಬಗ್ಗೆಯೂ ಹೊಸ ಪ್ರಸ್ತಾವನೆಗಳನ್ನು ಸಲ್ಲಿಸಿ ಕೇಂದ್ರ ಕಚೇರಿಗೆ ಮಾಹಿತಿ ನೀಡುವಂತೆ ಸಚಿವರು ಸೂಚನೆ ನೀಡಿದರು.

ಗುಣಮಟ್ಟದ ಕಾಮಗಾರಿಗೆ ಆದ್ಯತೆ ನೀಡಿ:

ಸೂಪರಿಂಟೆಂಡ್‌ ಇಂಜಿನೀಯರ್‌ಗಳೂ ತಮ್ಮ ವ್ಯಾಪ್ತಿಯಲ್ಲಿ ನಡೆಯುವ ಕಾಮಗಾರಿಗಳ ಗುಣಮಟ್ಟದ ಬಗ್ಗೆ ಖಾತ್ರಿ ಪಡಿಸಿಕೊಳ್ಳಬೇಕು. ಈ ಬಗ್ಗೆ ಪರಿಶೀಲನೆ ನಡೆಸಿ ಆಯಾ ಸಮಯದಲ್ಲಿ ಕೇಂದ್ರ ಕಚೇರಿಗೆ ವರದಿಯನ್ನು ಸಲ್ಲಿಸಬೇಕು ಎಂದು ಸೂಚನೆ ನೀಡಿದರು.

ಕೆಕೆಆರ್‌ಡಿಬಿ ಕಾಮಾಗಾರಿಗಳನ್ನು ಪ್ರಾರಂಭಿಸಲು ತಿಂಗಳ ಗಡುವು:

ಕೆಕೆಆರ್‌ಡಿಬಿ ಅಡಿಯಲ್ಲಿ ಸಣ್ಣ ನೀರಾವರಿ ಇಲಾಖೆಯಿಂದ ಸುಮಾರು 39 ಕಾಮಗಾರಿಗಳನ್ನು ಕೈಗೊಳ್ಳಲು ಅನುಮತಿ ದೊರೆತಿದೆ. ಈ ಕಾಮಗಾರಿಗಳನ್ನು ಟೆಂಡರ್‌ ಪ್ರಕ್ರಿಯೆಗಳನ್ನು ಮುಗಿಸಿ ತಿಂಗಳಾಂತ್ಯಕ್ಕೆ ಕಾಮಗಾರಿಗಳನ್ನು ಪ್ರಾರಂಭಿಸಬೇಕು. ಇಲ್ಲದೇ ಹೋದರೆ ಆಯಾ ವಿಭಾಗದ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.

ಜುಲೈ ಮೊದಲ ವಾರದಲ್ಲಿ ಮತ್ತೊಮ್ಮೆ ಸಭೆ:

ಈ ಎಲ್ಲಾ ಕ್ರಮಗಳ ಬಗ್ಗೆ ಅನುಷ್ಠಾನ ವರದಿಯನ್ನು ಸಂಬಂಧಪಟ್ಟ ಅಧಿಕಾರಿಗಳು ಸರಕಾರಕ್ಕೆ ಸಲ್ಲಿಸಬೇಕು. ಜುಲೈ ಮುಂದಿನ ವಾರದಲ್ಲಿ ಮತ್ತೊಮ್ಮೆ ಪ್ರಗತಿ ಪರಿಶೀಲನಾ ಸಭೆಯನ್ನು ನಡೆಸಿ ಪರಿಶೀಲನೆ ನಡೆಸುವ ಎಚ್ಚರಿಕೆಯನ್ನು ಸಚಿವರು ನೀಡಿದರು.

ಸಭೆಯಲ್ಲಿ ಸಣ್ಣ ನೀರಾವರಿ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular