ಸಭೆಗೆ ಗೈರಾಗಿದ್ದ ಅಧಿಕಾರಿಗಳಿಗೆ ನೋಟಿಸ್ ಜಾರಿಮಾಡುವಂತೆ ಶಾಸಕ ಅನಿಲ್ ಚಿಕ್ಕಮಾದು ಸೂಚನೆ
ವರದಿ: ಎಡತೊರೆ ಮಹೇಶ್
ಎಚ್.ಡಿ.ಕೋಟೆ : ತಾಲ್ಲೂಕಿನಲ್ಲಿ ಶಿಕ್ಷಣದ ಆಡಳಿತದ ಕೊರತೆಯಿಂದಾಗಿ ಎಸ್.ಎಸ್.ಎಲ್.ಸಿ ಯಲ್ಲಿ ಈ ಭಾರಿ ಕೊನೆಯ ಸ್ಥಾನವನ್ನು ಪಡೆದಿದೆ ಎಂದು ಶಾಸಕ ಅನಿಲ್ ಚಿಕ್ಕಮಾದು ಬೇಸರ ವ್ಯಕ್ತಪಡಿಸಿದರು.
ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ತಾಲ್ಲೂಕಿನಲ್ಲಿ ಶಿಕ್ಷಕರು ಮಕ್ಕಳಿಗೆ ಪಾಠ ಪ್ರವಚನ ಮಾಡುವುದರ ಬದಲು ರಾಜಕೀಯ ಮಾಡುತ್ತಿದ್ದಾರೆ, ರಾಜಕೀಯ ಮಾಡುವವರನ್ನು ಕರೆದು ಬುದ್ದಿವಾದ ಹೇಳುವ ಪ್ರಯತ್ನವನ್ನು ಬಿಇಓ ಮಾಡದಿರುವುದೇ ತಾಲ್ಲೂಕು ಈ ಭಾರಿ ಫಲಿತಾಂಶದಲ್ಲಿ ಜಿಲ್ಲೆಯಲ್ಲೇ ತಾಲ್ಲೂಕು ಕೊನೆಯ ಸ್ಥಾನಕ್ಕೆ ತಳ್ಳಲ್ಪಟ್ಟಿದೆ ಎಂದು ಬೇಸರಿಸಿದರಲ್ಲದೇ, ಉತ್ತಮ ಫಲಿತಾಂಶ ಬಾರದ ಕಾರಣ ಬಿಇಓ ಮಾರಯ್ಯರವರಿಗೆ ನೀವು ಬೇರೆಡೆಗೆ ವರ್ಗವಾಗುವಂತೆ ಸೂಚಿಸಿದರು.
ತಾಲ್ಲೂಕಿನ ಹಂಪಾಪುರದಲ್ಲಿ ಬದುಕಿರುವ ವ್ಯಕ್ತಿಗೆ ಮರಣ ದೃಡೀಕರಣ ನೀಡಿ ಖತೆ ಬದಲಾವಣೆಗಳನ್ನು ಮಾಡಿರುವ ಅಧಿಕಾರಿಗಳನ್ನು ತಕ್ಷಣದಲ್ಲೇ ಉದ್ಯೋಗದಿಂದ ವಜಾಗೊಳಿಸುವಂತೆ ತಹಸೀಲ್ದಾರ್ ರವರಿಗೆ ಶಾಸಕರು ಸೂಚಿಸಿದರು.
ಪುರಸಭೆ ವ್ಯಾಪ್ತಿಯಲ್ಲಿ ವಾಹನ ಚಾಲಕರು ಅಡ್ಡಾದಿಡ್ಡಿ ನಿಲ್ಲಿಸುತ್ತಿದ್ದು, ಪುರಸಭೆಯಾಗಲಿ ಪೊಲೀಸ್ ಇಲಾಖೆಯಾಗಲಿ ಸರಿಯಾಗಿ ಕೆಲಸ ನಿರ್ವಹಿಸುತ್ತಿಲ್ಲ ಎಂದು ಶಾಸಕರು ಅಧಿಕಾರಿಗಳ ವಿರುದ್ಧ ಗರಂ ಆದರು.
ಪಟ್ಟಣದ ಸಮೀಪವಿರುವ ಟ್ರೂಶೆಪರ್ಡ್ ಖಾಸಗಿ ಶಾಲೆಯು 28 ಲಕ್ಷ ರೂ ತೆರಿಗೆಯನ್ನು ಉಳಿಸಿಕೊಂಡಿದೆ, ಅದನ್ನು ಕಟ್ಟುವಂತೆ ನೋಟಿಸ್ ನೀಡಲಾಗಿದೆ, ಆದರೂ ಸಹ ಇದುವರೆಗೂ ವಸೂಲಿಯಾಗಿಲ್ಲ ಎಂದು ಪುರಸಭಾ ಮುಖ್ಯಾಧಿಕಾರಿ ಸುರೇಶ್ ತಿಳಿಸಿದರು.
ತಾಲ್ಲೂಕಿನಲ್ಲಿ ಹಾಸ್ಟೆಲ್ ಗಳಲ್ಲಿ ಸ್ವಚ್ಛತೆ ಇಲ್ಲ, ಆಹಾರದ ಗುಣಮಟ್ಟದ ಕೊರತೆಯಿಂದಾಗಿ ವಿದ್ಯಾರ್ಥಿಗಳು ದಾಖಲಾಗುತ್ತಿಲ್ಲ ಎಂಬ ದೂರುಗಳು ಕೇಳಿಬರುತ್ತಿವೆ. ಆಹಾರ ಮತ್ತು ಸ್ವಚ್ಛತೆಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಡಿ.ದೇವರಾಜು ಅರಸು ಹಿಂದುಳಿದ ವರ್ಗಗಳ ಇಲಾಖೆಯ ಸಹಾಯಕ ನಿರ್ದೇಶಕಿ ಶಶಿಕಲಾರವರಿಗೆ ಸೂಚಿಸಿದರು.

ಎಚ್.ಡಿ. ಕೋಟೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಶವ ಬಂದ ತಕ್ಷಣ ಮರಣೋತ್ತರ ಪರೀಕ್ಷೆ ಮಾಡುತ್ತಿಲ್ಲ, ಮರಣೋತ್ತರ ಪರೀಕ್ಷೆ ಮಾಡಿ ಎಂದು ಶಾಸಕರೇ ಕರೆ ಮಾಡಬೇಕಾದ ಸ್ಥಿತಿ ಎದುರಾಗಿದೆ, ಮುಂದಿನ ದಿನಗಳಲ್ಲಿ ಈ ರೀತಿ ಪ್ರಕರಣಗಳು ಕಂಡುಬಂದಲ್ಲಿ ಕಠಿಣ ಕ್ರಮಕ್ಕೆ ಸೂಚಿಸಲಾಗುವುದು ಎಂದು ಆಸ್ಪತ್ರೆ ಆಡಳಿತಾಧಿಕಾರಿ ಸೋಮಣ್ಣರವರಿಗೆ ತಿಳಿಸಿದರು.
ತಾಲ್ಲೂಕು ಆರೋಗ್ಯಾಧಿಕಾರಿ ಟಿ.ರವಿಕುಮಾರ್ ಮಾತನಾಡಿ ತಾಲ್ಲೂಕಿನಲ್ಲಿ ಎಂಟು ಡೆಂಗ್ಯೂ ಪ್ರಕರಣಗಳು ಕಂಡುಬಂದಿದ್ದು ಅವರೆಲ್ಲರೂ ಗುಣಮುಖರಾಗಿದ್ದಾರೆ, ಅಲ್ಲದೇ ಕಳೆದ ಭಾರಿಗೆ ಹೋಲಿಸಿದರೆ ಈ ಭಾರಿ ಆ ಪ್ರಮಾಣ ಕಡಿಮೆಯಾಗಿದೆ ಎಂದರು. ನಿಫಾ ವೈರಸ್ ಮೇಲೆ ನಿಗಾ ವಹಿಸಲಾಗಿದ್ದು, ಕೇರಳ ಗಡಿ ಭಾಗದ ಎಲ್ಲಾ ಗ್ರಾಮ ಮತ್ತು ಹಾಡಿಗಳಿಗೆ ಇಲಾಖೆಯ ಸಿಬ್ಬಂದಿಗಳು ಮತ್ತು ವೈದ್ಯರು ತೆರಳಿ ತಪಾಸಣೆ ನಡೆಸುತ್ತಿದ್ದಾರೆ ಎಂದು ತಿಳಿಸಿದರು.
ಕಾರ್ಯನಿರ್ವಹಣಾಧಿಕಾರಿಗಳಾದ ಸುಷ್ಮಾ, ಧರಣೇಶ್, ತಾಲ್ಲೂಕು ದಂಡಾಧಿಕಾರಿಗಳಾದ ಶ್ರೀನಿವಾಸ್, ರುಕೀಯಾ ಬೇಗಂ, ಬಿಇಓ ಮಾರಯ್ಯ, ಟಿಎಚ್‌ಓ ರವಿಕುಮಾರ್, ಪುರಸಭಾ ಮುಖ್ಯಾಧಿಕಾರಿ ಸುರೇಶ್, ಇಂಜಿನಿಯರ್ಗಳಾದ ನಾಗರಾಜ್ ರಾಮೇಗೌಡ ಬೋರಯ್ಯ ತಾಲೂಕು ಪಂಚಾಯಿತಿಯ ರಂಗಸ್ವಾಮಿ ಮತ್ತು ಅಧಿಕಾರಿಗಳು ಹಾಜರಿದ್ದರು
ಸಭೆ ಗೈರಾಗಿದ್ದ ಅಧಿಕಾರಿಗಳಿಗೆ ನೋಟಿಸ್ ಜಾರಿಮಾಡುವಂತೆ ಶಾಸಕ ಅನಿಲ್ ಚಿಕ್ಕಮಾದು ಸೂಚಿಸಿದರು.