ಧಾರವಾಡ: ಕೇಂದ್ರದಲ್ಲಿ ಮಂತ್ರಿಯಾಗುತ್ತಿದ್ದಂತೆಯೇ ಎಚ್.ಡಿ ಕುಮಾರಸ್ವಾಮಿ ಅವರು ಸಂಡೂರಿನಲ್ಲಿ ಗಣಿಗಾರಿಕೆ ನಡೆಸುವ ಕಡತಕ್ಕೆ ಸಹಿ ಹಾಕಿದ್ದಾರೆ. ಈ ಮೂಲಕ ಈ ಹಿಂದೆ ಆರು ವರ್ಷಗಳ ಹಿಂದೆ ಆಡಿದ್ದ ಮಾತನ್ನು ತಪ್ಪಿದ್ದಾರೆ. ಇನ್ನು ಕುಮಾರಸ್ವಾಮಿ ಅವರ ಈ ನಡೆಗೆ ತೀವ್ರ ಆಕ್ಷೇಪ ವ್ಯಕ್ತವಾಗುತ್ತಿವೆ. ಈ ಹಿನ್ನೆಲೆಯಲ್ಲಿ ಇದಕ್ಕೆ ಸ್ವತಃ ಎಚ್.ಡಿ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದು, ಇದೆಲ್ಲವೂ ಹಿಂದಿನದೇ ಪ್ರಕ್ರಿಯೆ. ನಾನಾಗಿಯೇ ಹೊಸದಾಗಿ ಮಾಡಿದ್ದಲ್ಲ ಎಂದು ಸ್ಪಷ್ಟಪಡಿಸಿದರು.
ಧಾರವಾಡದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, ೨೦೧೬ರಿಂದಲೆ ಈ ಪ್ರಸ್ತಾವನೆ ಇತ್ತು. ಇದು ನನ್ನಿಂದ ಈಗ ಆಗಿರುವುದು ಅಲ್ಲ. ಈ ವಿಷಯ ಪ್ರಾರಂಭ ಆಗಿರೋದು ೨೦೧೬ರಿಂದ. ದೇವದಾರ ಅರಣ್ಯ ಪ್ರದೇಶದಲ್ಲಿ ಗಣಿಗಾರಿಕೆಗೆ ಒಪ್ಪಿಗೆಯ ಪ್ರಸ್ತಾವನೆ ರಾಜ್ಯದಿಂದ ಹೋಗಿತ್ತು. ೨೦೧೭ರಲ್ಲಿ ಕೇಂದ್ರ ಸರ್ಕಾರ ಒಪ್ಪಿಗೆ ಕೊಟ್ಟಿದೆ. ಕೇಂದ್ರದ ಅರಣ್ಯ ಪರಿಸರ ಇಲಾಖೆಯೂ ಒಪ್ಪಿಗೆ ಕೊಟ್ಟಿದೆ. ೨೦೧೬ರಿಂದ ಪ್ರಾರಂಭ ಆಗಿ ಸಹಿ ಹಂತಕ್ಕೆ ನನ್ನ ಮುಂದೆ ಬಂದಿತ್ತು. ಫೈಲ್ ಕ್ಲಿಯರೆನ್ಸ್ ಗೆ ಮಾತ್ರ ನನ್ನ ಬಳಿ ಬಂದಿತ್ತು. ಎರಡು ಫೈನಾನ್ಸಿಯಲ್ ಸಂಸ್ಥೆಗಳಲ್ಲಿ ಸಾಲ ಪಡೆಯಲು ಕೇಂದ್ರ ಸರ್ಕಾರವನ್ನು ಕೇಳಿದ್ದರು. ಗಣಿ ಕಂಪನಿಗಳು ಕೇಳಿದ್ದವು. ಇದೆಲ್ಲವೂ ಹಿಂದಿನದೇ ಪ್ರಕ್ರಿಯೆ. ನಾನಾಗಿಯೇ ಹೊಸದಾಗಿ ಮಾಡಿದ್ದಲ್ಲ ಎಂದು ಸಮಜಾಯಿಷಿ ನೀಡಿದರು.
ಎಸ್.ಆರ್. ಹಿರೇಮಠ ಆರೋಪದ ಬಗ್ಗೆ ಪ್ರತಿಕ್ರಿಯಿಸಿ, ಅವರು ಮಾಧ್ಯಮಗಳ ಮುಂದೆ ಹೇಳಿಕೆ ಕೊಟ್ಟಿದ್ದಾರೆ. ಆದರೆ ಅವರು ನೇರವಾಗಿ ಬಂದು ನನ್ನ ಭೇಟಿಯಾಗಲಿ. ನನ್ನ ಕಚೇರಿ ಯಾವಾಗಲೂ ತೆರೆದಿರುತ್ತದೆ. ಅವರು ಬಂದು ಏನಿದೆ ಅಂತಾ ಚರ್ಚೆ ಮಾಡಲಿ, ಚರ್ಚೆಗೆ ನಾನು ಮುಕ್ತವಾಗಿದ್ದೇನೆ. ಲೋಕಾಯುಕ್ತ, ಕೋರ್ಟ್ ಗೆ ಹೋಗಿ ಮುಗಿದು ಹೋಗಿದೆ. ಅದೇ ಕಾರಣಕ್ಕೆ ನಾನು ಸಹಿ ಮಾಡಿದ್ದು, ಅದಿರು ಉತ್ಪಾದನೆಗೆ ಮಾತ್ರ ಕೊಟ್ಟಿರೋ ಒಪ್ಪಿಗೆ ಇದು. ಇದು ಹೊಸದಾದ ಗಣಿಗಾರಿಕೆ ಅನುಮತಿ ಅಲ್ಲ. ಹಿರೇಮಠರಿಗೆ ಗೊಂದಲಗಳಿದ್ದಲ್ಲಿ ಅವರ ಬಳಿಯ ರೇಕಾರ್ಡ್ಸ್ ತರಗೆದುಕೊಂಡು ಬರಲಿ ಎಂದು ಹೇಳಿದರು.
೨೦೧೮ರ ವಿಧಾನಸಭಾ ಚುನಾವಣೆ ವೇಳೆ ಸಂಡೂರಿಗೆ ತೆರಳಿದ್ದ ವೇಳೆ ಕುಮಾರಸ್ವಾಮಿ ಅವರನ್ನು ಸಾಮಾಜಿಕ ಹೋರಾಟಗಾರ ಎಸ್.ಆರ್ ಹಿರೇಮಠ್ ನೇತೃತ್ವದ ಜನಸಂಗ್ರಾಮ ಪರಿಷತ್? ಕಾರ್ಯಕರ್ತರು ಭೇಟಿ ಮಾಡಿದ್ದು, ದೇವದಾರಿ ಪ್ರದೇಶದ ಕುಮಾರಸ್ವಾಮಿ ದೇವಾಲಯದ ಸುತ್ತಮುತ್ತ ೫ ಕಿ.ಮೀ ವ್ಯಾಪ್ತಿಯಲ್ಲಿ ಗಣಿಗಾರಿಕೆ ನಿಷೇಧಿಸಬೇಕೆಂದು ಮನವಿ ಮಾಡಿದ್ದರು. ಈ ಮನವಿ ಸ್ವೀಕರಿಸಿದ್ದ ಕುಮಾರಸ್ವಾಮಿ, ದೇವಾಲಯದ ಸುತ್ತಮಮುತ್ತಲಿನ ಪ್ರದೇಶದಲ್ಲಿ ಗಣಿಗಾರಿಕೆ ನಡೆಸಲು ಎಂದಿಗೂ ಅವಕಾಶ ನೀಡುವುದಿಲ್ಲ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಈ ಪ್ರದೇಶದಲ್ಲಿ ಗಣಿಗಾರಿಕೆಯನ್ನು ನಿಷೇಧಿಸುತ್ತೇವೆ. ಅಲ್ಲದೇ ಕೇಂದ್ರ ಸರ್ಕಾರದ ಮೇಲೂ ಒತ್ತಡ ಹಾಕುತ್ತೇವೆ ಎಂದು ಭರವಸೆ ನೀಡಿದ್ದರು.