ಮಂಗಳೂರು (ದಕ್ಷಿಣ ಕನ್ನಡ): ಮಂಗಳೂರು ಏರ್ ಪೋರ್ಟ್ ನಿಂದ ಉಮ್ರಾ ಯಾತ್ರೆ ಕೈಗೊಂಡಿದ್ದ 11 ಮಂದಿಗೆ ಸೇರಿದ 6 ಲಕ್ಷ ಹಣ ಕಳವಾಗಿದ್ದು, ವಿಮಾನಯಾನ ಸಂಸ್ಥೆಯ ಸಿಬ್ಬಂದಿಯೇ ಕೃತ್ಯ ಎಸಗಿರುವ ಬಗ್ಗೆ ಅನುಮಾನವಿದೆ ಎಂದು ಹಣ ಕಳೆದುಕೊಂಡವರು ದೂರಿದ್ದಾರೆ.
ಮಂಗಳೂರಿನ ಖಾಸಗಿ ಹೊಟೇಲಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಈ ಆರೋಪ ಮಾಡಿದ ಯಾತ್ರಾರ್ಥಿಯಲ್ಲಿ ಓರ್ವರಾದ ಬದ್ರುದ್ದೀನ್, ಹಣ ಕಳವಾಗಿರುವ ಬಗ್ಗೆ ಬಜ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಿಮಾನಯಾನ ಸಂಸ್ಥೆಯ ಇಬ್ಬರು ಸಿಬ್ಬಂದಿ ಮೇಲೆ ಸಂಶಯದ ಬಗ್ಗೆಯೂ ಪೊಲೀಸರಿಗೆ ತಿಳಿಸಲಾಗಿದೆ. ಆದರೆ ಇದುವರೆಗೂ ನ್ಯಾಯ ಸಿಕ್ಕಿಲ್ಲ ಎಂದರು.
ಘಟನೆಯ ಬಗ್ಗೆ ವಿವರ ನೀಡಿದ ಅವರು, ಎ.30ರಂದು 34 ಮಂದಿ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ದಿಂದ ಮುಂಬೈ ಮಾರ್ಗವಾಗಿ ಸೌದಿ ಅರೇಬಿಯಾ ದೇಶದ ಜಿದ್ದಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಉಮ್ರಾ ಯಾತ್ರೆಗೆ ತೆರಳಿದ್ದರು. ಅದರಲ್ಲಿ 11 ಮಂದಿ ವಯಸ್ಸಾದ ಪ್ರಯಾಣಿಕರನ್ನು ನೋಡಿಕೊಳ್ಳುವ ಜವಾಬ್ದಾರಿ ಮತ್ತು ಅವರ ಖರ್ಚು ವೆಚ್ಚಗಳಿಗೆ 26,432 ಸೌದಿ ರಿಯಾಲ್ (ಸುಮಾರು 6 ಲ.ರೂ.) ಹಣವನ್ನು ಟ್ರಾವೆಲಿಂಗ್ ಸಂಸ್ಥೆ ನನಗೆ ನೀಡಿತ್ತು. ಆ ಹಣವನ್ನು ಟ್ರಾಲಿ ಬ್ಯಾಗ್‌ನಲ್ಲಿ ಇಟ್ಟುಕೊಂಡಿದ್ದೆ. ವಿಮಾನ ನಿಲ್ದಾಣದಲ್ಲಿ 11 ಮಂದಿಯ ಬ್ಯಾಗ್‌ನ್ನು ಕೂಡ ಸ್ಕ್ಯಾನಿಂಗ್ ಮಾಡಿ ಲಗೇಜ್ ಮಾಡಿದ್ದಾರೆ. ಮೇ 1ರಂದು ರಾತ್ರಿ ಜೆದ್ದಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಿ ದ್ದೆವು. ನಿಲ್ದಾಣದಿಂದ ಹೊರಗೆ ಬಂದು ನೋಡಿದಾಗ ಟ್ರಾಲಿ ಬ್ಯಾಗ್‌ನ ಬೀಗ ಮುರಿದು ಅದರಲ್ಲಿದ್ದ ಹಣ ಕಳವಾಗಿರುವುದು ಗಮನಕ್ಕೆ ಬಂದಿತ್ತು ಎಂದರು.
ತುಳುನಾಡ ರಕ್ಷಣಾ ವೇದಿಕೆಯ ಸ್ಥಾಪಕಾಧ್ಯಕ್ಷ ಯೋಗೀಶ್ ಶೆಟ್ಟಿ ಜಪ್ಪು ಅವರು ಮಾತನಾಡಿ, ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂತಹ ಘಟನೆ ನಡೆದಿರುವುದು ಬೇಸರದ ಸಂಗತಿ. ಇದು ಮಂಗಳೂರಿಗೆ ಕಪ್ಪು ಚುಕ್ಕೆ. ಈ ಬಗ್ಗೆ ಜಿಲ್ಲಾಧಿಕಾರಿಯವರಿಗೂ ಮನವಿ ಸಲ್ಲಿಸಲಾಗಿದೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ವಿಮಾನ ನಿಲ್ದಾಣದ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದರು.