ಇಲಾಖಾ ಅಧಿಕಾರಿಗಳೊಂದಿಗೆ ಪರಿಶೀಲನಾ ಸಭೆ
ಮಂಗಳೂರು (ದಕ್ಷಿಣ ಕನ್ನಡ): ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಹೆದ್ದಾರಿಗೆ ಸಂಬಂಧಪಟ್ಟ ಎಲ್ಲಾ ಕಾಮಗಾರಿಗಳನ್ನು ಯೋಜನಾ ಬದ್ಧವಾಗಿ ಮತ್ತು ವ್ಯವಸ್ಥಿತವಾಗಿ ನಡೆಸುವಂತೆ ಲೋಕಸಭಾ ಸದಸ್ಯ ಬ್ರ್ರಿಜೇಶ್ ಚೌಟ ಅವರು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದ್ದಾರೆ.
ಅವರು ಬುಧವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕೇಂದ್ರ ಸರ್ಕಾರದಿಂದ ಅನುಷ್ಟಾನಗೊಳ್ಳುತ್ತಿರುವ ವಿವಿಧ ಯೋಜನೆಗಳಿಗೆ ಸಂಬಂಧಿಸಿದಂತೆ ಇಲಾಖಾ ಅಧಿಕಾರಿಗಳೊಂದಿಗೆ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ಬಿ.ಸಿ.ರೋಡ್-ಅಡ್ಡಹೊಳೆ, ಸಾಣೂರು -ಬಿಕರ್ನಕಟ್ಟೆ, ಪೂಂಜಾಲಕಟ್ಟೆ- ಚಾರ್ಮಾಡಿ ಸೇರಿದಂತೆ ವಿವಿಧ ಮಹತ್ವದ ಹೆದ್ದಾರಿ ಕಾಮಗಾರಿಗಳು ನಡೆಯುತ್ತಿವೆ, ಈ ಯೋಜನೆಗಳು ಪೂರ್ಣಗೊಂಡರೆ ಜಿಲ್ಲೆಯ ಸಂಪರ್ಕ ವ್ಯವಸ್ಥೆಯಲ್ಲಿ ಮಹತ್ವದ ಪ್ರಗತಿ ಆಗಲಿದೆ ಎಂದು ಅವರು ಹೇಳಿದರು.
ಬಿ.ಸಿ.ರೋಡ್ – ಅಡ್ಡಹೊಳೆ ಹೆದ್ದಾರಿ ಕಾಮಗಾರಿ ಪ್ರಗತಿ ಪರಿಶೀಲನೆ ನಡೆಸಿದ ಸಂಸದರು ಕಾಮಗಾರಿಗಳನ್ನು ಅಲ್ಲಲ್ಲಿ ನಡೆಸುವ ಮೊದಲು ವ್ಯವಸ್ಥಿತವಾಗಿ ಸಾರ್ವಜನಿಕರಿಗೆ ಸಮಸ್ಯೆ ಆಗದಂತೆ ನಡೆಸಬೇಕು, ಸಂಪೂರ್ಣ ಕಾಮಗಾರಿಯನ್ನು ಸಂಘಟಿತವಾಗಿ ನಿರ್ವಹಿಸಬೇಕು ಎಂದು ತಾಕೀತು ಮಾಡಿದರು.
ಬಿ.ಸಿ.ರೋಡ್‍ನಿಂದ ಮಾಣಿ ವರೆಗಿನ ಹೆದ್ದಾರಿ ಕಾಮಗಾರಿಯನ್ನು ನಿರ್ವಹಿಸುತ್ತಿರುವ ಶೈಲಿಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಸಂಸದರು, ಸಾರ್ವಜನಿಕರ ತಾಳ್ಮೆ ಪರೀಕ್ಷಿಸಿ ಕಾಮಗಾರಿ ನಡೆಸುವುದು ಬೇಡ, ಕಳೆದ ಹಲವು ತಿಂಗಳಿಂದ ಬಸ್, ದ್ವಿಚಕ್ರ ವಾಹನದಲ್ಲಿ ಸಂಚರಿಸುವ ಸಾರ್ವಜನಿಕರು ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ.
ರಾಷ್ಟ್ರೀಯ ಹೆದ್ದಾರಿ ಇಲಾಖೆಯು ತನ್ನ ಸಂಪೂರ್ಣ ಸಾಮಥ್ರ್ಯ, ಮಾನವ ಸಂಪನ್ಮೂಲ ಹಾಗೂ ಯಂತ್ರೋಪಕರಣಗಳನ್ನು ಬಳಸಿಕೊಂಡು ಕಾಮಗಾರಿ ನಿರ್ವಹಿಸಬೇಕು. ಜುಲೈ 5ರ ಒಳಗೆ ಮೆಲ್ಕಾರ್, ಕಲ್ಲಡ್ಕ, ಮಾಣಿ ಮತ್ತು ಉಪ್ಪಿನಂಗಡಿ ಜಂಕ್ಷನ್‍ನಲ್ಲಿ ಸುಗಮ ಸಂಚಾರಕ್ಕೆ ಮತ್ತು ಸಾರ್ವಜನಿಕರ ಓಡಾಟಕ್ಕೆ ಇರುವ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಬೇಕೆಂದು ಗಡುವು ನೀಡಿದರು. ತಲಪಾಡಿ – ಕಾಸರಗೋಡುವರೆಗೆ ಚತುಷ್ಪಥ ರಾಷ್ಟ್ರೀಯ ಹೆದ್ದಾರಿಯನ್ನು ಯಾವುದೇ ಸಮಸ್ಯೆಗಳಿಲ್ಲದೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ನಿರ್ವಹಿಸಿದೆ. ಇದೇ ಮಾದರಿಯನ್ನು ಅನುಸರಿಸಿ ಕಾಮಗಾರಿ ನಡೆಸುವಂತೆ ಅವರು ಸೂಚಿಸಿದರು.