ಮೈಸೂರು: ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಪತ್ರಕರ್ತ ಐತಿಚಂಡ ರಮೇಶ್ ಉತ್ತಪ್ಪ ಅವರ ‘ಯೋಗ ಸಂಗೀತ’, ‘ಮೈಸೂರು ಪರಂಪರೆ’ ಕೃತಿ ಬಿಡುಗಡೆ, ‘ಯೋಗ ದರ್ಶಿನಿ’ ಪ್ರದರ್ಶನ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭವು ಜೂ. 21 ರಂದು ನಡೆಯಲಿದೆ.
ಮೈಸೂರಿನ ಓದುಗ ಪ್ರಕಾಶನ ಮೈಸೂರು ಕಲ್ಚರಲ್ ಅಸೋಸಿಯೇಷನ್ ಹಾಗೂ ಭಾರತೀ ಯೋಗಧಾಮದ ವತಿಯಿಂದ ಈ ಕಾರ್ಯಕ್ರಮ ನಡೆಯಲಿದೆ. ವಿಜಯಗಿರಿ, ಉತ್ತನಹಳ್ಳಿಯ ಭಾರತೀ ಯೋಗಧಾಮದಲ್ಲಿ ಅಂದು ಬೆಳಗ್ಗೆ 10.30ಕ್ಕೆ ಭಾರತೀಯ ಯೋಗಧಾಮದ ಸಂಸ್ಥಾಪಕ ಡಾ.ಕೆ.ಎಲ್. ಶಂಕರನಾರಾಯಣ ಜೋಯ್ಸ್ ಉದ್ಘಾಟಿಸಲಿದ್ದಾರೆ.
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ‘ಯೋಗ ಸಂಗೀತ’, ‘ಮೈಸೂರು ಪರಂಪರೆ’ ಕೃತಿ ಲೋಕಾರ್ಪಣೆಗೊಳಿಸುವರು. ಎಂಡಿಎ ಮಾಜಿ ಅಧ್ಯಕ್ಷ ಎಚ್.ವಿ. ರಾಜೀವ್ ಮುಖ್ಯ ಅತಿಥಿಯಾಗಿ ಆಗಮಿಸುವರು. ಮೈಸೂರು ಕಲ್ಚರಲ್ ಅಸೋಸಿಯೇಷನ್ ಅಧ್ಯಕ್ಷ ಎ.ಪಿ ನಾಗೇಶ್, ಲೇಖಕ ಐತಿಚಂಡ ರಮೇಶ್ ಉತ್ತಪ್ಪ, ಓದುಗ ಪ್ರಕಾಶನದ ಪ್ರಕಾಶ್ ಚಿಕ್ಕಪಾಳ್ಯ ಪಾಲ್ಗೊಳ್ಳುವರು.
ಕಾರ್ಯಕ್ರಮದಲ್ಲಿ ಇಬ್ಬರು ಹಿರಿಯ ಯೋಗಪಟುಗಳಾದ ಡಾ.ಪಿ.ಎನ್ ಗಣೇಶ್ ಕುಮಾರ್, ಡಾ.ಎ.ಎಸ್ ಚಂದ್ರಶೇಖರ್ ಅವರಿಗೆ ‘ದಿ ಸ್ಟಾರ್ ಆಫ್ ಯೋಗ’ ಪ್ರಶಸ್ತಿ ನೀಡಲಾಗುವುದು. ಯುವ ಪ್ರತಿಭೆಗಳಾದ ಹಾಗೂ ಯೋಗದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶಕ್ಕೆ ಕೀರ್ತಿ ತಂದಿರುವ ಎಚ್. ಖುಷಿ, ಆಮೂಲ್ಯ ನಾರಾಯಣ್, ಆರ್. ಅಂಕಿತಾ ಅವರಿಗೆ ‘ದಿ ರೈಸಿಂಗ್ ಸ್ಟಾರ್ ಆಫ್ ಯೋಗ’ ಪ್ರಶಸ್ತಿ ಪ್ರದಾನ ಮಾಡಲಾಗುವುದು.
ಎಂ.ವಿ. ಯೋಗಾಸ್ ಸಂಸ್ಥೆಯ ಅಂತಾರಾಷ್ಟ್ರೀಯ ಖ್ಯಾತಿಯ ಯೋಗಪಟುಗಳಿಂದ ‘ಯೋಗ ನೃತ್ಯ’ ಹಾಗೂ ಭಾರತೀ ಯೋಗಧಾಮದ ಯೋಗಪಟುಗಳಿಂದ ‘ಯೋಗದರ್ಶಿನಿ’ ಪ್ರದರ್ಶನ ನಡೆಯಲಿದೆ ಎಂದು ಮೈಸೂರು ಕಲ್ಚರಲ್ ಅಸೋಸಿಯೇಷನ್ ಅಧ್ಯಕ್ಷ ಎ ಪಿ ನಾಗೇಶ್ ಹಾಗೂ ಓದುಗ ಪ್ರಕಾಶನದ ಪ್ರಕಾಶ್ ಚಿಕ್ಕಪಾಳ್ಯ ತಿಳಿಸಿದ್ದಾರೆ.