Monday, April 21, 2025
Google search engine

Homeರಾಜ್ಯಸುದ್ದಿಜಾಲನೈಋತ್ಯ ರೈಲ್ವೆಯ ಮೈಸೂರು ವಿಭಾಗದಲ್ಲಿ ಕುಂದುಕೊರತೆಗಳಿಗೆ ಪರಿಹಾರ ಒದಗಿಸಲು ಹಲವು ಕ್ರಮ

ನೈಋತ್ಯ ರೈಲ್ವೆಯ ಮೈಸೂರು ವಿಭಾಗದಲ್ಲಿ ಕುಂದುಕೊರತೆಗಳಿಗೆ ಪರಿಹಾರ ಒದಗಿಸಲು ಹಲವು ಕ್ರಮ

ವಿಭಾಗೀಯ ರೈಲ್ವೆ ವ್ಯವಸ್ಥಾಪಕರಾದ ಶಿಲ್ಪಿ ಅಗರ್ವಾಲ್ ನೇತೃತ್ವದಲ್ಲಿ, ನೈಋತ್ಯ ರೈಲ್ವೆಯ ಮೈಸೂರು ವಿಭಾಗವು ಪ್ರಯಾಣಿಕರ ಪ್ರಯಾಣದ ಅನುಭವವನ್ನು ಗಮನಾರ್ಹವಾಗಿ ಹೆಚ್ಚಿಸಲು ‘ರೈಲ್ ಮದದ್ ವಾರ್ ರೂಮ್’ ಸ್ಥಾಪನೆ, ನಿಯಮಿತ ತಪಾಸಣಾ ವ್ಯವಸ್ಥೆ, ಇತ್ಯಾದಿ ಕ್ರಮಗಳು ಸೇರಿದಂತೆ ಹಲವಾರು ಉಪಕ್ರಮಗಳನ್ನು ಹೊಸದಾಗಿ ಪರಿಚಯಿಸಿದೆ.

ಈ ಉಪಕ್ರಮಗಳು ನೈಜ ಸಮಯದಲ್ಲಿ ಪ್ರಯಾಣಿಕರ ಕುಂದುಕೊರತೆಗಳನ್ನು ಪರಿಹರಿಸಲು ಮತ್ತು ಕಾಯ್ದಿರಿಸಿದ ಕೋಚ್‌ ಗಳಲ್ಲಿ ಪ್ರಯಾಣಿಸಲು ಮಾನ್ಯತೆ ಇಲ್ಲದ ಟಿಕೆಟ್‌ ಗಳನ್ನು ಹೊಂದಿರುವ ಪ್ರಯಾಣಿಕರಿಂದ ಕಾಯ್ದಿರಿಸಿದ ಕೋಚ್‌ ಗಳ ಮಿತಿಮೀರಿದ ದಟ್ಟಣೆಯನ್ನು ತಡೆಯಲು ಉಪಯುಕ್ತವಾಗಿವೆ.

ವಿಭಾಗದ ‘ರೈಲ್ ಮದದ್’ ಅನ್ನು ಟೋಲ್-ಫ್ರೀ ಸಂಖ್ಯೆ 139 ಮೂಲಕ ಮತ್ತು Android ಮತ್ತು iOS ಪ್ಲಾಟ್‌ ಫಾರ್ಮ್‌ ಗಳಲ್ಲಿ ಲಭ್ಯವಿರುವ ‘ರೈಲ್ ಮದದ್’ ಅಪ್ಲಿಕೇಶನ್‌ ಗಳ ಮೂಲಕ ಪ್ರಯಾಣಿಕರಿಗೆ ಲಭ್ಯವಿದೆ.

‘ಸೆಂಟರ್ ಫಾರ್ ರೈಲ್ ಇನ್ಫರ್ಮೇಷನ್ ಸಿಸ್ಟಮ್ಸ್’ ಅಭಿವೃದ್ಧಿಪಡಿಸಿರುವ ಈ ಕೇಂದ್ರೀಕೃತ ಡೇಟಾಬೇಸ್ ನೈಜ-ಸಮಯದಲ್ಲಿಯೇ ಮೇಲ್ವಿಚಾರಣೆಗೆ ಮತ್ತು ಪ್ರಯಾಣಿಕರ ದೂರುಗಳಿಗೆ ಪರಿಹಾರಗಳನ್ನು ಒದಗಿಸಲು ಅನುಕೂಲ ಮಾಡಿಕೊಡುತ್ತದೆ.

ವಿಭಾಗವು 2024 ರ ಏಪ್ರಿಲ್ ನಿಂದ ಜೂನ್ ವರೆಗೆ ಕಳೆದುಹೋದ ವಸ್ತುಗಳು, ಅಸಮರ್ಪಕ ವಿದ್ಯುತ್ ಉಪಕರಣಗಳು, ಕಾಯ್ದಿರಿಸಿದ ಕೋಚ್‌ಗಳಲ್ಲಿ ಅನಧಿಕೃತ ಪ್ರಯಾಣಿಕರು, ಕೋಚ್‌ಗಳು ಮತ್ತು ಶೌಚಾಲಯಗಳಲ್ಲಿನ ಆಶುಚಿತ್ವ ಮತ್ತು ಪ್ರಯಾಣಿಕರ ಸೌಕರ್ಯಗಳಲ್ಲಿನ ಕೊರತೆಗಳು, ಲಗೇಜ್ ಬುಕಿಂಗ್ ಮತ್ತು ಅಹಾರ ಸೇವೆಗಳಿಗೆ ಸಂಬಂಧಿಸಿದ ಕುಂದುಕೊರತೆಗಳಂತಹ ಸಮಸ್ಯೆಗಳಿಗೆ ಸಂಬಂಧಿಸಿದ 5,132 ದೂರುಗಳನ್ನು ಸ್ವೀಕರಿಸಿದೆ. ಮೈಸೂರು ವಿಭಾಗವು ಈ ದೂರುಗಳನ್ನು ತ್ವರಿತವಾಗಿ ಪರಿಹರಿಸಲು ಕ್ರಮ ಕೈಗೊಂಡಿರುವ ಬಗ್ಗೆ ಖಚಿತಪಡಿಸಿಕೊಂಡಿದೆ ಮತ್ತು ಕ್ರಮ ತೆಗೆದುಕೊಂಡ ವರದಿಗಳನ್ನು ಪ್ರಯಾಣಿಕರಿಗೆ ವಿಳಂಬವಿಲ್ಲದೆ ಕಳುಹಿಸಲಾಗಿದೆ.

ಈ ಸಮಯೋಚಿತ ಕ್ರಮಗಳ ಕಾರಣದಿಂದಾಗಿ, ‘ರೈಲ್ ಮದದ್ ವಾರ್ ರೂಮ್’ ನಿರ್ವಹಿಸಿದ ದೂರುಗಳಲ್ಲಿ ಗಮನಾರ್ಹವಾದ ಇಳಿಕೆ ಕಂಡುಬಂದಿದ್ದೂ, ಜೂನ್ 9, 2024 ರಂದು ಇದ್ದ ಸರಾಸರಿ 90 ದೂರುಗಳಿಂದ, ಜೂನ್ 18, 2024 ರ ವೇಳೆಗೆ ಸರಾಸರಿ 38 ದೂರುಗಳಿಗೆ ಇಳಿಕೆಯಾಗಿದೆ.

ಮೈಸೂರು ವಿಭಾಗದ ಕೆಲವು ರೈಲುಗಳು ಜನದಟ್ಟಣೆಗೆ ಗುರಿಯಾಗುತ್ತವೆ ಎಂದು ಗುರುತಿಸಲಾಗಿದ್ದೂ, ಈ ರೈಲುಗಳಲ್ಲಿ ಈಗ ಮಾನ್ಯ ಟಿಕೆಟ್‌ಗಳನ್ನು ಹೊಂದಿರುವ ಪ್ರಯಾಣಿಕರು ಮಾತ್ರ ಕಾಯ್ದಿರಿಸಿದ ಕೋಚ್‌ಗಳಲ್ಲಿ ಪ್ರಯಾಣಿಸುವುದನ್ನು ಖಂಡಿತಪಡಿಸಿಕೊಳ್ಳಲು ಟಿಕೆಟ್ ಪರೀಕ್ಷಕರಿಗೆ (ಟಿಟಿಇ) ಸಹಾಯ ಮಾಡಲು ನಿಗದಿಯಾದ ರೈಲ್ವೆ ಸಂರಕ್ಷಣಾ ದಳದ ಸಿಬ್ಬಂದಿಗಳನ್ನು ಹೊಂದಿದೆ. ಪ್ರಸ್ತುತ ತಿಂಗಳ ಕೆಲ ದಿನಗಳ ಅವಧಿಯಲ್ಲಿಯೇ ಮಾನ್ಯತೆ ಇಲ್ಲದ ಟಿಕೆಟ್‌ಗಳೊಂದಿಗೆ ಕಾಯ್ದಿರಿಸಿದ ಬೋಗಿಗಳಲ್ಲಿ ಪ್ರಯಾಣಿಸುತ್ತಿದ ಸುಮಾರು 624 ಪ್ರಯಾಣಿಕರಿಗೆ ದಂಡವನ್ನು ವಿಧಿಸಲಾಗಿದೆ ಮತ್ತು ತಪ್ಪಿತಸ್ತರಿಂದ ರೂ.3,48,770/-  ದಂಡವನ್ನು ಸಂಗ್ರಹಿಸಲಾಗಿದೆ.

ಕಾಯ್ದಿರಿಸಿದ ಕೋಚ್‌ ಗಳಲ್ಲಿ ಅನಧಿಕೃತ ಪ್ರಯಾಣಿಕರು ಪ್ರಯಾಣಿಸುವುದನ್ನು ತಡೆಯಲು ವಿಭಾಗವು ರೈಲ್ವೆ ಸಂರಕ್ಷಣಾ ದಳ (RPF) ಮತ್ತು ಟಿಕೆಟ್ ತಪಾಸಣೆ ಸಿಬ್ಬಂದಿಯ (TTE) ಜಂಟಿ ತಂಡಗಳನ್ನು ನಿಲ್ದಾಣಗಳಲ್ಲಿ ಮತ್ತು ರೈಲುಗಳಲ್ಲಿ ಆಗಾಗೆ ಯಾದೃಚ್ಛಿಕ ತಪಾಸಣೆ ನಡೆಸಲು ನಿಯೋಜಿಸಿದೆ. ಬೇಸಿಗೆಯ ಹೆಚ್ಚಿನ ಜನದಟ್ಟನೆ ಅವಧಿಯಲ್ಲಿ ಮೈಸೂರು ವಿಭಾಗವು, 100% ಕ್ಕಿಂತ ಹೆಚ್ಚು ಜನಸಂದಣಿ ಇರುವ ವಿವಿಧ ರೈಲುಗಳಿಗೆ ಸುಮಾರು 61 ಹೆಚ್ಚುವರಿ ಕೋಚ್‌ಗಳನ್ನು ಏಪ್ರಿಲ್ 1 ರಿಂದ ಬೇಸಿಗೆಯ ಅವಧಿಯ ಅಂತ್ಯದವರೆಗೆ ಸೇರಿಸಿದೆ. ಇದರೊಂದಿಗೆ, ಹೆಚ್ಚಿದ ಪ್ರಯಾಣಿಕರ ಸಂಖ್ಯೆಯನ್ನು ಸರಿಹೊಂದಿಸಲು ಅಜ್ಮೀರ್, ಮುಜಾಫರ್‌ಪುರ, ರಾಣಿ ಕಮಲಪತಿ ರೈಲು ನಿಲ್ದಾಣ, ಮನಮದುರೈ, ಹೈದರಾಬಾದ್, ಸಿಕಂದರಾಬಾದ್, ಬಿಜಾಪುರ, ಖುರ್ದಾ ರೋಡ್ ನಿಲ್ದಾಣ, ವಾರಣಾಸಿ, ಭುವನೇಶ್ವರ್, ವಿಜಯನಗರ ಮತ್ತು ಹುಬ್ಬಳ್ಳಿಯಂತಹ ವಿವಿಧ ಸ್ಥಳಗಳಿಗೆ 14 ವಿಶೇಷ ರೈಲುಗಳನ್ನು ಸಂಚರಿಸಲಾಯಿತು.

ಇದಲ್ಲದೆ ರೈಲು ಮತ್ತು ನಿಲ್ದಾಣಗಳಲ್ಲಿನ ಸುರಕ್ಷತೆಯು ಯಾವಾಗಲೂ ವಿಭಾಗದ ಪ್ರಮುಖ ಆದ್ಯತೆಯಾಗಿದೆ. ವಿವಿಧ ಇಲಾಖೆಗಳ ಮೇಲ್ವಿಚಾರಕರು ಮತ್ತು ಸಿಬ್ಬಂದಿಗಳು ಸರಿಯಾದ ಹವಾನಿಯಂತ್ರಣ ತಾಪಮಾನ ಸೆಟ್ಟಿಂಗ್‌ಗಳು, ವಿದ್ಯುತ್ ಸರ್ಕ್ಯೂಟ್‌ಗಳನ್ನು ಮಿತಿಮೀರಿ ಉಪಯೋಗಿಸುವ ಬಗ್ಗೆಗಿನ ಅಪಾಯಗಳು ಮತ್ತು ಕಾಯ್ದಿರಿಸುವ ನಿಯಮಗಳ ಪಾಲನೆಯ ಪ್ರಾಮುಖ್ಯತೆಗಳ ಬಗ್ಗೆ ಪ್ರಯಾಣಿಕರಿಗೆ ತಿಳಿಸಲು ನಿಯಮಿತವಾಗಿ ಸಾರ್ವಜನಿಕ ಜಾಗೃತಿ ಅಭಿಯಾನಗಳನ್ನು ನಡೆಸಿದ್ದಾರೆ. ಫ್ಯೂಸ್ ಗಳ ಹಾಳಾಗುವಿಕೆಯನ್ನು ತಡೆಗಟ್ಟಲು ಹೆಚ್ಚಿನ ಸಾಮರ್ಥ್ಯದ ವಿದ್ಯುತ್ ಉಪಕರಣಗಳ ಸೂಕ್ತ ಬಳಕೆಯ ಬಗ್ಗೆ ಪ್ರಯಾಣಿಕರಿಗೆ ತಿಳುವಳಿಕೆ ನೀಡಲಾಗಿದ್ದೂ,  ಇದು ವಿದ್ಯುತ್ ಸಂಬಂಧಿತ ದೂರುಗಳಲ್ಲಿ ಗಮನಾರ್ಹ ಇಳಿಕೆಗೆ ಕಾರಣವಾಗಿದೆ.

ಈ ಹಿಂದೆ ಪದೇ ಪದೇ ದೂರುಗಳು ಬರುತ್ತಿದ್ದ ಅರಸೀಕೆರೆಯಂತಹ ನಿಲ್ದಾಣಗಳಿಗೆ ವಿಶೇಷ ಒತ್ತು ಸೇರಿದಂತೆ ವಿಭಾಗದಾದ್ಯಂತ ವಿಶೇಷ ಸ್ವಚ್ಛತಾ ಉಪಕ್ರಮವನ್ನು ಆರಂಭಿಸಲಾಗಿದೆ. ಈ ತರಹದ ಸಮಸ್ಯೆಗಳನ್ನು ನಿಭಾಯಿಸಲು ಟಿಕೆಟ್ ತಪಾಸಣೆ ಸಿಬ್ಬಂದಿಗಳು ಮತ್ತು ರೈಲ್ವೆ ಸಂರಕ್ಷಣಾ ದಳದ ಸಿಬ್ಬಂದಿಗಳ ಜಂಟಿ ತಂಡಗಳನ್ನು ನಿಯೋಜಿಸಲಾಗಿದ್ದು, ಇದು ಸ್ವಚ್ಛತೆಯ ಗುಣಮಟ್ಟದಲ್ಲಿ ಗಮನಾರ್ಹ ಸುಧಾರಣೆಗಳನ್ನು ಉಂಟುಮಾಡಿದೆ.

ವಿಭಾಗೀಯ ರೈಲ್ವೆ ವ್ಯವಸ್ಥಾಪಕರಾದ ಶ್ರೀಮತಿ ಶಿಲ್ಪಿ ಅಗರ್ವಾಲ್ ರವರು ನೈಋತ್ಯ ರೈಲ್ವೆಯ ಮೈಸೂರು ವಿಭಾಗವು ಪ್ರಯಾಣಿಕರಿಗೆ ಸುರಕ್ಷಿತ, ದಕ್ಷ ಮತ್ತು ಆರಾಮದಾಯಕ ಪ್ರಯಾಣದ ಅನುಭವಗಳನ್ನು ನೀಡಲು ಬದ್ಧವಾಗಿದೆ ಮತ್ತು ಅನಧಿಕೃತ ಪ್ರಯಾಣಿಕರ ಸವಾಲುಗಳು ಕ್ರಿಯಾತ್ಮಕವಾಗಿ ಇರುವ ಕಾರಣ, ನಿರಂತರ ಮೇಲ್ವಿಚಾರಣೆ ಮತ್ತು ಕ್ರಮಗಳ ಅಗತ್ಯವಿದೆ ಎಂದು ಒತ್ತಿ ಹೇಳಿದರು. ಮೈಸೂರು ವಿಭಾಗವು ಈಗ ನಡೆಯುತ್ತಿರುವ ಸಾರ್ವಜನಿಕ ಜಾಗೃತಿ ಅಭಿಯಾನಗಳ ಮೂಲಕ ಮತ್ತು ರೈಲ್ವೆ ಸಂರಕ್ಷಣಾ ದಳ, ವಾಣಿಜ್ಯ ಸಿಬ್ಬಂದಿ ಮತ್ತು ಪ್ರಯಾಣಿಕರ ನಡುವೆ ಉತ್ತಮ ಸಹಯೋಗದೊಂದಿಗೆ ಈ ಸಮಸ್ಯೆಗಳನ್ನು ಪರಿಹರಿಸಲು ಸಮರ್ಪಿತವಾಗಿದೆ.

ಈ ಕ್ರಮಗಳನ್ನು ರೈಲ್ವೆ ನಿಯಮಗಳ ಅನುಸರಣೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಕಾನೂನುಸಮ್ಮತ ಪ್ರಯಾಣಿಕರಿಗೆ ಒಟ್ಟಾರೆ ಪ್ರಯಾಣದ ಅನುಭವವನ್ನು ಹೆಚ್ಚಿಸಲು ವಿನ್ಯಾಸಗೊಳಿಸಲಾಗಿದೆ ಹಾಗು ವಿಭಾಗವು ನಿರಂತರವಾಗಿ ಸೇವೆಯ ಗುಣಮಟ್ಟ ಮತ್ತು ಪ್ರಯಾಣಿಕರ ತೃಪ್ತಿಯನ್ನು ಸುಧಾರಿಸಲು ಪ್ರಯತ್ನಿಸುತ್ತದೆ.

RELATED ARTICLES
- Advertisment -
Google search engine

Most Popular