ನವದೆಹಲಿ: ಕಳೆದ 24 ಗಂಟೆಗಳಲ್ಲಿ ದೆಹಲಿಯ ರಾಮ್ ಮನೋಹರ್ ಲೋಹಿಯಾ( ಆರ್‌ಎಂಎಲ್) ಹಾಗೂ ಸಫ್ದರ್‌ಜಂಗ್ ಆಸ್ಪತ್ರೆಗಳಲ್ಲಿ ಶಾಖಾಘಾತದಿಂದ ಒಟ್ಟು 17 ಮಂದಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.
ಕಳೆದ ಕೆಲ ದಿನಗಳಿಂದ ದೆಹಲಿಯಲ್ಲಿ ಬಿಸಿಗಾಳಿ ತೀವ್ರತೆ ಹೆಚ್ಚಿತ್ತು. ಇಂದು (ಗುರುವಾರ) ಬೆಳಗ್ಗೆ ಸಾಧಾರಣ ಮಳೆಯಾಗಿದ್ದು, ಕೊಂಚ ನೆಮ್ಮದಿ ಸಿಕ್ಕಿದೆ.
ಅಧಿಕ ತಾಪಮಾನದಿಂದ ದೆಹಲಿಯ ಆಸ್ಪತ್ರೆಗಳಲ್ಲಿ ಸಾವುನೋವು ಮತ್ತು ರೋಗಿಗಳ ಸಂಖ್ಯೆಯಲ್ಲಿ ಏರಿಕೆಯಾಗಿದೆ. ಬಿಸಿಗಾಳಿಯಿಂದಾಗಿ ಅಸ್ವಸ್ಥಗೊಂಡು 33 ಮಂದಿ ಆಸ್ಪತ್ರೆಗೆ ದಾಖಲಾಗಿದ್ದರು. ಅವರಲ್ಲಿ 13 ಮಂದಿ ಕಳೆದ 24 ಗಂಟೆಗಳಲ್ಲಿ ಮೃತಪಟ್ಟಿದ್ದಾರೆ ಎಂದು ಸಫ್ದರ್‌ಜಂಗ್ ಆಸ್ಪತ್ರೆಯ ಅಧಿಕಾರಿಗಳು ತಿಳಿಸಿದ್ದಾರೆ.
ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಯಲ್ಲಿ ಕಳೆದ 24 ಗಂಟೆಗಳಲ್ಲಿ 22 ಮಂದಿ ದಾಖಲಾಗಿದ್ದು, ಅವರಲ್ಲಿ ನಾಲ್ವರು ಮೃತಪಟ್ಟಿದ್ದಾರೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.