Sunday, April 20, 2025
Google search engine

Homeರಾಜ್ಯಸುದ್ದಿಜಾಲಮಕ್ಕಳ ರಕ್ಷಣೆಯಲ್ಲಿ ಇಲಾಖೆಗಳು ಸಮನ್ವಯತೆಯಿಂದ ಕಾರ್ಯ ನಿರ್ವಹಿಸಿ : ಅಪರ್ಣಾ ಎಂ ಕೊಳ್ಳ

ಮಕ್ಕಳ ರಕ್ಷಣೆಯಲ್ಲಿ ಇಲಾಖೆಗಳು ಸಮನ್ವಯತೆಯಿಂದ ಕಾರ್ಯ ನಿರ್ವಹಿಸಿ : ಅಪರ್ಣಾ ಎಂ ಕೊಳ್ಳ

ಶಿವಮೊಗ್ಗ: ಮಕ್ಕಳ ರಕ್ಷಣೆಯಲ್ಲಿ ಜಿಲ್ಲೆಯ ವಿವಿಧ ಇಲಾಖೆಗಳ ಅಧಿಕಾರಿಗಳು ಸಮನ್ವಯತೆಯಿಂದ ಮತ್ತು ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸಬೇಕೆಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರಾದ ಅಪರ್ಣಾ ಎಂ ಕೊಳ್ಳ ಸೂಚನೆ ನೀಡಿದರು.

ಆರ್‍ಟಿಇ-2009, ಪೋಕ್ಸೋ-2012 ಹಾಗೂ ಬಾಲನ್ಯಾಯ ಕಾಯ್ದೆ-2015 ರ ಅನುಷ್ಟಾನ ಕುರಿತು ಭಾಗೀದಾರರೊಂದಿಗೆ ಜೂ.21 ರಂದು ಜಿ.ಪಂ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ಬಾಲ್ಯವಿವಾಹ, ಪೋಕ್ಸೋ ಮತ್ತು ಶಾಲೆ ಬಿಟ್ಟ ಮಕ್ಕಳ ಸಂಖ್ಯೆ ಹೆಚ್ಚಿದ್ದು ಇದು ಆಘಾತಕಾರಿ ವಿಷಯವಾಗಿದೆ. ಮಕ್ಕಳನ್ನು ಈ ಎಲ್ಲ ಪಿಡುಗುಗಳಿಂದ ರಕ್ಷಿಸಲು ಸಂಬಂಧಿಸಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಶಿಕ್ಷಣ ಇಲಾಖೆ, ಕಾರ್ಮಿಕ ಇಲಾಖೆ, ಪೊಲೀಸ್ ಇಲಾಖೆ, ಆರ್‍ಡಿಪಿಆರ್ ಸೇರಿದಂತೆ 10 ಇಲಾಖೆಗಳು ಅತ್ಯಂತ ಜವಾಬ್ದಾರಿಯಿಂದ ಮತ್ತು ಸಮನ್ವಯತೆ ಸಾಧಿಸಿ, ಕಾಳಜಿಯಿಂದ ಕಾರ್ಯ ನಿರ್ವಹಿಸಬೇಕು.

ಜಿಲ್ಲೆಯಲ್ಲಿ ಇಲಾಖೆಗಳ ನಡುವೆ ಸಮನ್ವಯತೆಯ ಕೊರತೆಯಿಂದಾಗಿಯೇ ಮಕ್ಕಳ ವಿರುದ್ದ ಪ್ರಕರಣಗಳ ಸಂಖ್ಯೆ ಹೆಚ್ಚಿದೆ. ಆದ್ದರಿಂದ ಮಕ್ಕಳ ರಕ್ಷಣೆ ಸಂಬಂಧ ಈ ಹತ್ತೂ ಇಲಾಖೆಗಳು ಪ್ರತಿ ತಿಂಗಳಿಗೆ ಓರ್ವ ಇಲಾಖೆ ನೋಡಲ್ ಇಲಾಖೆಯಾಗಿ ಸಕ್ರಿಯವಾಗಿ ಕಾರ್ಯ ನಿರ್ವಹಿಸಬೇಕೆಂದು ಸೂಚಿಸಿದರು.

ಶಾಲೆ ಬಿಟ್ಟ ಮಕ್ಕಳ ಸಂಖ್ಯೆ 112, ಇದರಲ್ಲಿ 15 ವರ್ಷ ಮೀರಿದವರು 58 ವಿದ್ಯಾರ್ಥಿಗಳು ಇದ್ದಾರೆ. ಕಳೆದ 20 ದಿನಗಳಲ್ಲಿ 80 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇದ್ದಾರೆ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ನಾನು ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಗಳ ಹಾಸ್ಟೆಲ್‍ಗಳು, ಬಾಲ ಮಂದಿರ ಮತ್ತು ಅಂಗನವಾಡಿಗಳನ್ನು ಭೇಟಿ ನೀಡಿದ್ದೇನೆ. ಶಾಲೆ ಬಿಟ್ಟ ಮಕ್ಕಳ ಸಂಖ್ಯೆ ಹೆಚ್ಚಿದೆ. ಸರ್ಕಾರಿ ವಿದ್ಯಾರ್ಥಿನಿಲಯಗಳ ವಿದ್ಯಾರ್ಥಿಗಳ ಹಾಜರಾತಿ ಕುರಿತು ಸಮರ್ಪಕವಾದ ಮಾಹಿತಿಯನ್ನು ಶಿಕ್ಷಣ ಇಲಾಖೆಗೆ ನೀಡಬೇಕು. ಡ್ರಾಪ್‍ಔಟ್ ಮಕ್ಕಳನ್ನು ಶಾಲೆಗೆ ಬರುವಂತೆ ಮಾಡಬೇಕು. ಆಗ ಮಕ್ಕಳ ವಿರುದ್ದದ ಪ್ರಕರಣಗಳು ಕಡಿಮೆ ಆಗಲು ಸಾಧ್ಯವಾಗುತ್ತದೆ. ಆದ್ದರಿಂದ ಮಕ್ಕಳ ಹಾಜರಾತಿಯನ್ನು ಪ್ರಾಮಾಣಿಕವಾಗಿ ಮತ್ತು ಸಮರ್ಪಕವಾಗಿ ನೀಡಬೇಕೆಂದು ಎಚ್ಚರಿಸಿದರು.

ಹಾಸ್ಟೆಲ್ ಭೇಟಿ ವೇಳೆ ವಿದ್ಯಾರ್ಥಿಗಳಿಗೆ ಸಮರ್ಪಕವಾದ ಮತ್ತು ಗುಣಮಟ್ಟದ ಆಹಾರ ಸೇರಿದಂತೆ ಇತರೆ ಮೂಲಭೂತ ಸೌಕರ್ಯಗಳು ನೀಡದಿರುವುದು ಕಂಡು ಬಂದಿದೆ. ಸ್ವಚ್ಚತೆ ಇಲ್ಲ. ಸರ್ಕಾರಿ ಶಾಲೆ ದಾಖಲಾತಿ ಕಡಿಮೆ ಆಗುತ್ತಿದ್ದು, ಮಧ್ಯಾಹ್ನದ ಬಿಸಿಯೂಟ ಗುಣಮಟ್ಟದಿಂದ ಕೂಡಿಲ್ಲ. ಮಕ್ಕಳ ಸ್ಯಾಟ್ಸ್, ಹೆಡ್ ಕೌಂಟ್, ಮಿಡ್ ಡೇ ಮೀಲ್ ವ್ಯತ್ಯಾಸ ಇದ್ದು, ಇದನ್ನೆಲ್ಲ ಗಂಭೀರವಾಗಿ ಪರಿಗಣಿಸಿ ಸರಿಪಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಸಾಗರದ ವನಶ್ರೀ ವಸತಿ ಶಾಲೆಯಲ್ಲಿ ಮಕ್ಕಳು ಓದುವಂತಹ ವಾತಾವರಣ ಇಲ್ಲ. ಮೂಲಭೂತ ಸೌಕರ್ಯಗಳು ಇಲ್ಲ. ಈ ಶಾಲೆಗೆ ದಾಖಲಾತಿ ನಿಲ್ಲಿಸಲಾಗಿತ್ತು. ಆದರೂ 21 ಮಕ್ಕಳನ್ನು ದಾಖಲಿಸಲಾಗಿದೆ. ಇದಕ್ಕೆ ಹೇಗೆ ಅನುಮತಿ ಲಭಿಸಿತು. 24 ಗಂಟೆಯೊಳಗೆ ಮಾಹಿತಿ ನೀಡಬೇಕು ಹಾಗೂ ತ್ವರಿತ ಕ್ರಮ ಕೈಗೊಂಡು ಮಕ್ಕಳನ್ನು ರಕ್ಷಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲಾ ಕಾರ್ಮಿಕ ಅಧಿಕಾರಿ ವೇಣುಗೋಪಾಲ್ ಮಾತನಾಡಿ ಜಿಲ್ಲೆಯಲ್ಲಿ ಈವರೆಗೆ 1606 ಬಾಲ ಕಾರ್ಮಿಕ ತಪಾಸಣೆ ಕೈಗೊಳ್ಳಲಾಗಿದ್ದು 14 ಪ್ರಕರಣ ಪತ್ತೆ ಹಚ್ಚಿದ್ದು ಎಫ್‍ಐಆರ್ ಆಗಿದೆ. 12 ಮಕ್ಕಳಿಗೆ ಪುನರ್ವಸತಿ ಕಲ್ಪಿಸಿ ಶಾಲೆಗೆ ಸೇರಿಸಲಾಗಿದೆ. ಹೊರರಾಜ್ಯದ ಮಕ್ಕಳಿಗೆ ಅವರ ಮನೆಗೆ ಸೇರಿಸಲಾಗಿದೆ ಎಂದು ಮಾಹಿತಿ ನೀಡಿದರು.

ಜಿ.ಪಂ. ಉಪ ಕಾರ್ಯದರ್ಶಿ ಸುಜಾತ ಮಾತನಾಡಿ, ಮಕ್ಕಳ ರಕ್ಷಣೆ ಸಂಬಂಧ ಜಿಲ್ಲೆಯಲ್ಲಿ ಇಲಾಖೆಗಳು ಸಮನ್ವಯತೆಯಿಂದ ಕಾರ್ಯ ನಿರ್ವಹಿಸಬೇಕು. ಬಾಲ್ಯ ವಿವಾಹ, ಶಾಲೆ ಬಿಟ್ಟ ಮಕ್ಕಳು ಸೇರಿದಂತೆ ಮಕ್ಕಳ ಸಂರಕ್ಷಣೆಗೆ ಸಂಬಂಧಿಸಿದಂತೆ ಸರಿಯಾಗಿ ಮಾಹಿತಿ ಒದಗಿಸಿ, ಸಮಸ್ಯೆಯನ್ನು ಸಮರ್ಪಕವಾಗಿ ಬಗೆಹರಿಸಬೇಕೆಂದರು.

ಸಭೆಯಲ್ಲಿ ಜಿಲ್ಲಾ ನಿರೂಪಣಾಧಿಕಾರಿ ಡಾ.ಸಂತೋಷ್ ಕುಮಾರ್, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮಂಜುನಾಥ್, ಡಿವೈಎಸ್‍ಪಿ ಹಾಗೂ ಹಿರಿಯ ಮಕ್ಕಳ ಪೊಲೀಸ್ ಅಧಿಕಾರಿ ಬಾಬು ಅಂಜನಪ್ಪ, ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.

RELATED ARTICLES
- Advertisment -
Google search engine

Most Popular