ಶಿವಮೊಗ್ಗ: ಸ್ವಸ್ಥ ಸಮಾಜ ನಿರ್ಮಾಣಕ್ಕೆ ಯೋಗ ಅತ್ಯಂತ ಸಹಕಾರಿಯಾಗಿದ್ದು ಇಡೀ ಜಗತ್ತಿಗೆ ಯೋಗ ಪರಿಚಯಿಸಿದ ಹೆಮ್ಮೆ ನಮ್ಮ ದೇಶದ್ದಾಗಿದೆ ಎಂದು ಶಾಸಕರಾದ ಎಸ್ ಎನ್ ಚನ್ನಬಸಪ್ಪ ನುಡಿದರು.
ಭಾರತ ಸರ್ಕಾರ, ಆಯುಷ್ ಮಂತ್ರಾಲಯ, ಕರ್ನಾಟಕ ಸರ್ಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆಯುಷ್ ಇಲಾಖೆ, ಶಿವಮೊಗ್ಗ ಹಾಗೂ ಸರ್ಕಾರಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಬೋಧನ ಆಸ್ಪತ್ರೆ ಶಿವಮೊಗ್ಗ ಇವರ ಸಹಯೋಗದಲ್ಲಿ ಜೂ.21 ರಂದು ನೆಹರು ಸ್ಟೇಡಿಯಂ ಒಳಾಂಗಣ ಕ್ರೀಡಾಂಗಣದಲ್ಲಿ ಏರ್ಪಡಿಸಲಾಗಿದ್ದ 10 ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಸ್ವಯಂ ಮತ್ತು ಸಮಾಜಕ್ಕಾಗಿ ಯೋಗ ಎಂಬ ಘೋಷವಾಕ್ಯದೊಂದಿಗೆ ಯೋಗ ದಿನಾಚರಣೆ ಹಮ್ಮಿಕೊಳ್ಳಲಾಗಿದೆ. ಆಯುರ್ವೇದದಿಂದ ಜಗತ್ತು ಉಳಿಯುತ್ತದೆ. ಜಗತ್ತಿನ ಪ್ರತಿಯೊಬ್ಬರ ಆರೋಗ್ಯ ಉತ್ತಮವಾಗಿರಬೇಕೆಂಬ ನಂಬಿಕೆ ಹೊಂದಿದ ದೇಶ ನಮ್ಮದಾಗಿದ್ದು, ಇದೇ ಉದ್ದೇಶದಿಂದ ನಮ್ಮ ಪ್ರಧಾನಿಯವರು ಜಗತ್ತಿಗೇ ಯೋಗ ಪರಿಚಯಿಸಿದ್ದಾರೆ. ಎಲ್ಲರೂ ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಯೋಗಾಭ್ಯಾಸವನ್ನು ಅಳವಡಿಸಿಕೊಳ್ಳಬೇಕು. ಅಂತರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ಆಯುಷ್ ಇಲಾಖೆ ಉತ್ತಮ ಕಾರ್ಯಕ್ರಮಗಳನ್ನು ಕೈಗೊಂಡಿದ್ದು ನಾವೆಲ್ಲ ಕೈಜೋಡಿಸೋಣ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಮಹಾನಗರಪಾಲಿಕೆ ಆಯುಕ್ತರಾದ ಡಾ.ಕವಿತಾ ಯೋಗಪ್ಪನವರ್ ಮಾತನಾಡಿ, ಬದಲಾಗುತ್ತಿರರುವ ಜೀವನ ಶೈಲಿ ಮತ್ತು ಆಹಾರ ಪದ್ದತಿ ಹಾಗೂ ಒತ್ತಡದ ಬದುಕಿನ ಈ ಕಾಲ ಘಟ್ಟದಲ್ಲಿ ಯೋಗಾಭ್ಯಾಸ ನಮಗೆ ಅತ್ಯಂತ ಸಹಕಾರಿದೆ. ನಿಯಮಿತವಾಗಿ ಒಂದು ಗಂಟೆ ಅವಧಿಯನ್ನು ಯೋಗಾಭ್ಯಾಸಕ್ಕಾಗಿ ಮುಡಿಪಾಗಿಟ್ಟರೆ ಒತ್ತಡ ಮತ್ತು ಉತ್ತಮ ಜೀವನ ನಿರ್ವಹಣೆಗೆ ಅನುಕೂಲವಾಗುತ್ತದೆ. ದಿನನಿತ್ಯ ಸರಳ ಆಸನಗಳನ್ನು ಅಭ್ಯಾಸ ಮಾಡುವ ಮೂಲಕ ಉತ್ತಮ ಜೀವನ ಕ್ರಮ ನಮ್ಮದಾಗಿಸಿಕೊಳ್ಳೋಣ ಎಂದರು.
ಡಿಹೆಚ್‍ಓ ಡಾ.ನಟರಾಜ್ ಮಾತನಾಡಿ, ಯೋಗಿ ಎಂದು ಕರೆಸಿಕೊಳ್ಳುವುದು ಸುಲಭ ಅಲ್ಲ. ಯೋಗಾಭ್ಯಾಸವು ದೈಹಿಕ ಮತ್ತು ಮಾನಸಿಕವಾಗಿ ಬಲ ನೀಡುತ್ತದೆ. ಆಧುನಿಕ ಯುಗದಲ್ಲಿ ಮಾನಸಿಕ ಒತ್ತಡಕ್ಕೆ ಉತ್ತಮ ಮದ್ದು ಯೋಗ. ಮಾನವ ಮಾನಸಿಕವಾಗಿ ಕುಗ್ಗಿದರೆ ಗುಣವಾಗುವುದು ಕಷ್ಟ. ಹಾಗಾಗಿ ಯೋಗದಿಂದ ದೇಹ ಮತ್ತು ಮನಸ್ಸಿನ ಆರೋಗ್ಯ ಸಾಧ್ಯವಾಗುತ್ತದೆ. ಯುವ ಪೀಳಿಗೆ ಯೋಗಾಭ್ಯಾಸ ರೂಢಿಸಿಕೊಂಡು, ಪೌಷ್ಟಿಕ ಆಹಾರ ಅಭ್ಯಾಸ ಮಾಡಿಕೊಳ್ಳಬೇಕು ಎಂದ ಅವರು ಯೋಗ ಮಾಡಿ ಮಾನಸಿಕ-ದೈಹಿಕವಾಗಿ ಸದೃಢರಾಗಿರಿ ಎಂದು ಕರೆ ನೀಡಿದರು.
ಇದೇ ವೇಳೆ ಅಂತರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ಪ್ರಬಂಧ ಮತ್ತು ಯೋಗ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಜಿಲ್ಲಾ ಆಯುಕ್ತ ಅಧಿಕಾರಿ ಡಾ.ಲಿಂಗರಾಜ್ ಎಸ್ ಹಿಂಡಸಗಟ್ಟಿ, ಸರ್ಕಾರಿ ಆಯುರ್ವೇದ ಕಾಲೇಜಿನ ಪ್ರಾಚಾರ್ಯ ಡಾ.ಎಂ.ಎಸ್.ದೊಡ್ಡಮನಿ, ಬಾಪೂಜಿ ಆಯುರ್ವೇದ ಮಹಾ ವಿದ್ಯಾಲಯ ಪ್ರಾಚಾರ್ಯ ಪಂಕಜ್ ಕುಮಾರ್, ಡಾ.ಮೊಹಮ್ಮದ್ ಗೌಸ್, ದೈಹಿಕ ಶಿಕ್ಷಣ ನಿರ್ದೇಶಕ ನಿರಂಜನ ಮೂರ್ತಿ, ಎಎಓಫ್‍ಐ ಶ್ರೀನಿವಾಸ ರೆಡ್ಡಿ, ಕೆಎಸ್‍ಆರ್‍ಪಿ ಸಬ್ ಇನ್ಸ್‍ಪೆಕ್ಟರ್ ಜಗದೀಶ್, ಡಾ.ಸಿ.ಎ.ಹಿರೇಮಠ್, ಡಾ.ರಾಘವೇಂದ್ರ, ಡಾ.ಚಿತ್ರಲೇಖ ಇತರೆ ವೈದ್ಯರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಮಂಜುನಾಥ್, ಇತರೆ ಅಧಿಕಾರಿಗಳು, ವಿವಿಧ ಯೋಗ ಸಂಸ್ಥೆಗಳ ಪದಾಧಿಕಾರಿಗಳು, ಸದಸ್ಯರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.