ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿತರಾಗಿರುವ ನಟ ದರ್ಶನ್ ಅವರನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಿದಾಗ ಜೈಲಿನಲ್ಲಿ ಯಾವುದೇ ಹೆಚ್ಚುವರಿ ಸೌಲಭ್ಯಗಳನ್ನು ನೀಡಲಾಗುವುದಿಲ್ಲ ಎಂದು ಗೃಹ ಸಚಿವ ಜಿ ಪರಮೇಶ್ವರ ಶುಕ್ರವಾರ ಹೇಳಿದ್ದಾರೆ.
ಜೂನ್ 22 ರವರೆಗೆ ದರ್ಶನ್ ಮತ್ತು ಇತರ ಮೂವರು ಪೊಲೀಸ್ ಕಸ್ಟಡಿಯಲ್ಲಿದ್ದಾರೆ. ಈ ಪ್ರಕರಣದಲ್ಲಿ ದರ್ಶನ್ ಅವರ ಆಪ್ತ ಗೆಳತಿ ಪವಿತ್ರಾ ಗೌಡ ಸೇರಿದಂತೆ ಇತರ 13 ಆರೋಪಿಗಳನ್ನು ಜೈಲಿಗೆ ಕಳುಹಿಸಲಾಗಿದೆ. ಚಿತ್ರದುರ್ಗ ಮೂಲದ 33 ವರ್ಷದ ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಅವರನ್ನು ನ್ಯಾಯಾಲಯ 2 ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ. ‘ಅಷ್ಟರೊಳಗೆ ತನಿಖೆ ಪೂರ್ಣಗೊಂಡರೆ, ದರ್ಶನ್ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗುವುದು’ ಎಂದು ಹೇಳಿದರು.
ದರ್ಶನ್ ಪ್ರಕರಣದಲ್ಲಿ ಯಾವುದೇ ಪ್ರತಿಕ್ರಿಯೆ ನೀಡದಂತೆ ಅಥವಾ ಮಧ್ಯಪ್ರವೇಶಿಸದಂತೆ ಸಿಎಂ ಸಿದ್ದರಾಮಯ್ಯ ಸಚಿವರಿಗೆ ಸೂಚನೆ ನೀಡಿದ್ದಾರೆ ಎಂಬ ವರದಿಗಳ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ನನಗೆ ತಿಳಿದಂತೆ ಯಾವುದೇ ಸಚಿವರು ಈ ವಿಷಯದಲ್ಲಿ ಹಸ್ತಕ್ಷೇಪ ಮಾಡಿಲ್ಲ. ಅಧಿಕಾರಿಗಳು ನಮಗೆ ಮಾಹಿತಿ ನೀಡುತ್ತಾರೆ ಮತ್ತು ಯಾವುದೇ ಹಸ್ತಕ್ಷೇಪ ಅಗತ್ಯವಿಲ್ಲ. ಮುಖ್ಯಮಂತ್ರಿಯಾಗಲಿ, ನಾನಾಗಲಿ ಯಾರನ್ನೂ ಸಂಪರ್ಕಿಸಿಲ್ಲ ಮತ್ತು ಯಾರೂ ಈ ನಿಟ್ಟಿನಲ್ಲಿ ನಮ್ಮನ್ನು ಸಂಪರ್ಕಿಸಿಲ್ಲ’ ಎಂದರು.
ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಬಿಜೆಪಿ ಶಾಸಕರ ಹತ್ತಿರದ ಸಂಬಂಧಿಯೊಬ್ಬರು ಶಾಮೀಲಾಗಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ನಾವು ರಾಜಕೀಯ ಪಕ್ಷಪಾತದ ಆಧಾರದ ಮೇಲೆ ಪ್ರಕರಣವನ್ನು ನಿಭಾಯಿಸುತ್ತಿಲ್ಲ. ತಪ್ಪಿತಸ್ಥರು ಯಾರೇ ಆಗಿರಲಿ, ತಮ್ಮ ಪಕ್ಷದವರಾಗಿದ್ದರೂ ಅವರನ್ನು ತಪ್ಪಿತಸ್ಥರೆಂದು ಪರಿಗಣಿಸಲಾಗುವುದು. ಆರೋಪಿಗಳು ಎಸಗಿದ ಅಪರಾಧದ ಆಧಾರದ ಮೇಲೆ ತನಿಖೆಯನ್ನು ಮುಂದುವರಿಸುತ್ತೇವೆ, ಅದು ಪಕ್ಷಕ್ಕೆ ಸಂಬಂಧಿಸಿರುವುದಿಲ್ಲ ಎಂದರು.