Monday, April 21, 2025
Google search engine

Homeಸ್ಥಳೀಯಸಂವಿಧಾನ ಎಂದರೆ ಸಂಪತ್ತಿನ ದಾನ

ಸಂವಿಧಾನ ಎಂದರೆ ಸಂಪತ್ತಿನ ದಾನ

ಪ್ರತಿಭಾ ಪುರಸ್ಕಾರದಲ್ಲಿ ಶ್ರೀ ಜ್ಞಾನಪ್ರಕಾಶ ಸ್ವಾಮೀಜಿ ವಿಶ್ಲೇಷಣೆ

ಮೈಸೂರು : ಸಂವಿಧಾನ ಎಂದರೆ ಸಂಪತ್ತಿನ ದಾನ, ದೇಶದ ಎಲ್ಲ ಸಂಪತ್ತು ಸಮಾನವಾಗಿ ಎಲ್ಲರಿಗೂ ಹಂಚಿಕೆಯಾಗಬೇಕು ಎನ್ನುವುದು ಸಂವಿಧಾನದ ಧ್ಯೇಯವಾಗಿದೆ ಎಂದು ಉರಿಲಿಂಗಿ ಪೆದ್ದಿಮಠದ ಶ್ರೀ ಜ್ಞಾನಪ್ರಕಾಶ ಸ್ವಾಮೀಜಿ ಹೇಳಿದರು.

ನಗರದ ಪುರಭವನದಲ್ಲಿ ಕರ್ನಾಟಕ ಭೀಮ್ ಸೇನೆ ತನ್ನ ಎರಡನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಏರ್ಪಡಿಸಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ೧೪೦ನೇ ಜಯಂತಿ, ಡಾ.ಬಿ.ಆರ್.ಅಂಬೇಡ್ಕರ್ ಅವರ ೧೩೩ನೇ ಜಯಂತಿ, ದಲಿತ ಮುಖಂಡರಾದ ಮಾಜಿ ಸಂಸದರಾದ ವಿ.ಶ್ರೀನಿವಾಸ ಪ್ರಸಾದ್, ಆರ್.ಧ್ರುವನಾರಾಯಣ, ನಿವೃತ್ತ ಐಎಎಸ್ ಅಧಿಕಾರಿ ದಿ.ಕೆ.ಶಿವರಾಮ್, ಹೋರಾಟಗಾರ ದಿ.ಮಂಟೇಲಿಂಗಯ್ಯ ಅವರಿಗೆ ನುಡಿನಮನ ಮತ್ತು ಪ್ರತಿಭಾವಂತ ಎಸ್‌ಎಸ್‌ಎಲ್‌ಸಿ, ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಮಾಜಕ್ಕೆ ಶಿಕ್ಷಣದ ಮಹತ್ವವನ್ನು ತೋರಿಸಿಕೊಟ್ಟ ಡಾ.ಬಿ.ಆರ್.ಅಂಬೇಡ್ಕರ್, ದಲಿತರು ಮತ್ತು ಹಿಂದುಳಿದವರಿಗೆ ಮೀಸಲಾತಿ ಕಲ್ಪಿಸಿಕೊಟ್ಟ ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ಸಮುದಾಯದ ಕಣ್ಮಣಿಗಳಾದ ಕೆ.ಶಿವರಾಮ್ ಮತ್ತು ಮಂಟೇಲಿಂಗಯ್ಯ ಅವರನ್ನು ಈ ಕಾರ್ಯಕ್ರಮದ ಮೂಲಕ ನೆನಪಿಸಿಕೊಳ್ಳುತ್ತಿರುವುದು ಸ್ವಾಗತಾರ್ಹ ಎಂದರು.

ಸುಮಾರು ೫ಸಾವಿರ ವರ್ಷಗಳಿಂದ ಶಿಕ್ಷಣ, ಆರ್ಥಿಕತೆ, ಸಮಾನತೆಯಿಂದ ವಂಚಿತವಾಗಿದ್ದ ಒಂದು ಸಮುದಾಯ ಇಂದು ಸಂವಿಧಾನದ ಸಹಾಯದಿಂದ ಸಾಕಷ್ಟು ಸುಧಾರಿಸಿದೆ. ಈ ಪೀಳಿಗೆಯ ಯುವ ಜನಾಂಗ ಉನ್ನತ ಶಿಕ್ಷಣವನ್ನು ಪಡೆಯುವ ಮೂಲಕ ಸಂವಿಧಾನದ ಆಶಯವನ್ನು ಸಮರ್ಥವಾಗಿ ಬಳಸಿಕೊಳ್ಳಬೇಕು. ಇಂದು ಇಲ್ಲಿ ಭಾಗವಹಿಸಿರುವ ಎಲ್ಲ ಯುವಕ ಯುವತಿಯರೂ ಸಮಾಜದಲ್ಲಿ ಉನ್ನತ ಸ್ಥಾನ ಪಡೆಯುವ ಬಗ್ಗೆ ಗುರಿಯನ್ನು ಹೊಂದಬೇಕು. ಸಂವಿಧಾನ ಬರೆಯುವಷ್ಟು ಸಮರ್ಥರಾಗಲು ಅಂಬೇಡ್ಕರ್ ತಮ್ಮ ಇಡೀ ಬದುಕನ್ನು ಸವೆಸಿದ್ದಾರೆ ಎಂದರು.

ಅಂಬೇಡ್ಕರ್ ಅವರು ಜಗತ್ತಿನ ಜ್ಞಾನಿಯಾಗಿದ್ದಾರೆ. ೫೦ ಸಾವಿರ ಪುಸ್ತಕಗಳನ್ನು ಹೊಂದಿದ್ದರು. ಅವರು ಕಾನೂನು ಸಚಿವರಾಗಿದ್ದಾಗ ಹೆಣ್ಣುಮಕ್ಕಳಿಗೆ ಅನುಕೂಲವಾಗುವ ಕಾನೂನು ರಚಿಸಲು ಸರ್ಕಾರ ನಿರಾಕರಿಸಿದಾಗ ತಮ್ಮ ಕಾನೂನು ಸಚಿವರ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದಂತಹ ಸ್ವಾಭಿಮಾನಿ ನಾಯಕರಾಗಿದ್ದವರು. ಅವರ ಮಾರ್ಗದರ್ಶನ ಇಂದಿನ ಯುವ ಸಮುದಾಯಕ್ಕೆ ಅಗತ್ಯವಾಗಿದೆ ಎಂದರು.
ಮಾಜಿ ಮೇಯರ್ ಪುರುಷೋತ್ತಮ್ ಮಾತನಾಡಿ, ದಲಿತರ ಮಕ್ಕಳ ಶಿಕ್ಷಣಕ್ಕೆ ನೆರವಾದವರು ಅಕ್ಷರದ ಅವ್ವ ಸಾವಿತ್ರಿ ಬಾಫುಲೇ, ಜ್ಯೋತಿಬಾಫುಲೇ ಮತ್ತು ಅವರಿಗೆ ಬೆನ್ನೆಲುಬಾಗಿ ನಿಂತ ಫಾತೀಮಾ ಶೇಖ್ ಅವರೇ ನಮ್ಮ ಶಿಕ್ಷಣದ ರೂವಾರಿಗಳು. ಇಂದು ದಲಿತರು ಮತ್ತು ಅಲ್ಪಸಂಖ್ಯಾತರು ಒಂದಾಗಿ ಹೊಸ ಭಾರತ ದೇಶದ ಮುನ್ನುಡಿ ಬರೆಯಬೇಕಿದೆ ಎಂದರು.

ಮಾಜಿ ಶಾಸಕ ಎಲ್.ನಾಗೇಂದ್ರ ಅವರು ಮಾತನಾಡಿ, ಕರ್ನಾಟಕ ಭೀಮ್ ಸೇನೆ ಇಂದು ನೂರಾರು ಪ್ರತಿಭಾ ಪುರಸ್ಕಾರ ನೀಡುವ ಮೂಲಕ ಮಕ್ಕಳ ಶಿಕ್ಷಣಕ್ಕೆ ಬೆನ್ನೆಲುಬಾಗಿ ನಿಂತಿದೆ ಎಂದು ಶ್ಲಾಘಿಸಿದರು.

ಕಾರ್ಯಕ್ರಮದಲ್ಲಿ ೧೫೦ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಜತೆಗೆ ವೇದಿಕೆಯಲ್ಲಿದ್ದ ಗಣ್ಯರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಕರ್ನಾಟಕ ಭೀಮ್ ಸೇನೆ ಮೈಸೂರು ಜಿಲ್ಲಾಧ್ಯಕ್ಷ ಎಸ್.ಸರ್ವೇಶ್, ವಿವಿಧ ಪದಾಧಿಕಾರಿಗಳಾದ ಮಲ್ಲೇಶ್, ಸುರೇಶ್, ಚಿಕ್ಕಣ್ಣ, ಮಧುಕುಮಾರ್, ಗೋಪಾಲ, ಸ್ವಾಮಿನಾಯಕ್, ಸಂಪತ್ ಕುಮಾರ್, ಮಧು ಹೊಲೆಯರ್, ಮಂಜುನಾಥ್, ನರಸಿಂಹಮೂರ್ತಿ, ಲೋಕೇಶ್, ವಿಜಯಲಕ್ಷ್ಮಿ, ಪದ್ಮಾವತಿ, ಮಲ್ಲೇಶ್, ಕಾಂತರಾಜು, ಗೋಪಾಲಕೃಷ್ಣ ಮುಂತಾದವರು ಇದ್ದರು.


ಕಳೆದ ಎರಡು ವರ್ಷಗಳಿಂದ ನಮ್ಮ ಸಂಘಟನೆ ಸಮಾಜಮುಖಿಯಾಗಿ ಕೆಲಸ ಮಾಡುತ್ತಿದೆ. ಮಕ್ಕಳನ್ನು ಶಿಕ್ಷಣಕ್ಕೆ ಪ್ರೋತ್ಸಾಹ ಮಾಡುವುದು ನಮ್ಮ ಉದ್ದೇಶವಾಗಿಗೆ. ನಮ್ಮವರೇ ಕೆಲವರು ನಮ್ಮ ಸಂಘಟನೆಯ ಅಭಿವೃದ್ಧಿ ಸಹಿಸದೆ ಕಾಲೆಳೆಯುವ ಕೆಲಸ ಮಾಡುತ್ತಿದ್ದಾರೆ. ಆದರೇ, ನಾವು ಅದಕ್ಕೆಲ್ಲಾ ಸೊಪ್ಪು ಹಾಕದೆ. ಜನಪರವಾದ ಕೆಲಸಗಳಲ್ಲಿ ನಮ್ಮನ್ನು ತೊಡಗಿಸಿಕೊಳ್ಳುತ್ತೇವೆ.
ಶಂಕರ್ ರಾಮಲಿಂಗಯ್ಯ, ಸಂಸ್ಥಾಪಕ ಅಧ್ಯಕ್ಷ

RELATED ARTICLES
- Advertisment -
Google search engine

Most Popular