ಕೆ.ಆರ್.ಪೇಟೆ : ತಾಲ್ಲೂಕಿನ ಬಂಡಿಹೊಳೆ ಗ್ರಾಮದಲ್ಲಿ ದುಷ್ಕರ್ಮಿಗಳು ಅಂಗಡಿ ಮಳಿಗೆಗಳ ರೋಲಿಂಗ್ ಶಟರ್‌ಗಳನ್ನು ಮೀಟಿ, ಶಾಲೆ ಮತ್ತು ಹೋಟೆಲ್‌ಗಳ ಬಾಗಿಲು ಮುರಿದು ಸರಣಿ ಕಳ್ಳತನ ಮಾಡಿರುವ ಘಟನೆ ನಡೆದಿದೆ.
ಘಟನೆಯಲ್ಲಿ ಕಂಪ್ಯೂಟರ್, ಲ್ಯಾಪ್‌ಟಾಪ್, ಮೊಬೈಲ್‌ಗಳು ಸೇರಿದಂತೆ ಲಕ್ಷಾಂತರ ರೂ ಮೌಲ್ಯದ ವಿವಿಧ ಮಾರಾಟದ ವಸ್ತುಗಳನ್ನು ಕಳ್ಳರು ಕಳವು ಮಾಡಿಕೊಂಡು ಪರಾರಿಯಾಗಿದ್ದಾರೆ. ಬಂಡಿಹೊಳೆ ಗ್ರಾಮದ ಮಂಬೈ ಮಂಜುನಾಥ್ ಕಾಂಪ್ಲೆಕ್ಸ್ ನಲ್ಲಿರುವ ಐಯ್ಯಂಗಾರ್‍ಸ್ ಬೇಕರಿಯ ರೋಲಿಂಗ್ ಶೆಲ್ಟರ್ ಮುರಿದು ಒಳನುಗ್ಗಿ ೧೫ಸಾವಿರ ರೂ ನಗದು, ಬೇಕರಿ ಐಟಂಗಳನ್ನು ಕಳವು ಮಾಡಿದ್ದಾರೆ.
ಶಿವರಾಂ ಎಂಬುವವರ ಮೊಬೈಲ್ ಅಂಗಡಿಗೆ ನುಗ್ಗಿ ಲಕ್ಷಾಂತರ ರೂ ಮೌಲ್ಯದ ಏಳೆಂಟು ಮೊಬೈಲ್‌ಗಳನ್ನು ಕಳ್ಳತನ ಮಾಡಿದ್ದಾರೆ. ನಾಗೇಶ್ ಎಂಬುವವರ ಚಿಲ್ಲರೆ ಅಂಗಡಿಗೆ ನುಗ್ಗಿ ೧೫ಸಾವಿರ ರೂ ನಗದು, ಸಿಗರೇಟ್ ಪ್ಯಾಕ್‌ಗಳು, ಮಸಾಲೆ ಪದಾರ್ಥಗಳ ಪ್ಯಾಕ್‌ಗಳನ್ನು ಕಳವು ಮಾಡಿದ್ದಾರೆ. ಪ್ರಸನ್ನ ಎಂಬುವವರ ಹೋಟೆಲ್‌ಗೆ ನುಗ್ಗಿ ೮ಸಾವಿರ ರೂ ನಗದು ಹಾಗೂ ಅಡುಗೆ ಪದಾರ್ಥಗಳನ್ನು ಕಳವು ಮಾಡಿದ್ದಾರೆ. ಬಂಡಿಹೊಳೆ ಸುಮೇಧ ಕಾನ್ವೆಂಟ್ ಬಾಗಿಲು ಬೀಗ ಮುರಿದು ಒಳ ನುಗ್ಗಿರುವ ದುಷ್ಕರ್ಮಿಗಳು ಶಾಲೆಯಲ್ಲಿದ್ದ ಕಂಪ್ಯೂಟರ್‌ಗಳು ಹಾಗೂ ಲ್ಯಾಪ್‌ಟಾಪ್‌ಗಳನ್ನು ಕಳ್ಳತನ ಮಾಡಿಕೊಂಡು ಪರಾರಿಯಾಗಿದ್ದಾರೆ.
ಕಳವು ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ:
ದುಷ್ಕರ್ಮಿಗಳು ಕಳ್ಳತನ ಮಾಡುತ್ತಿರುವ ದೃಶ್ಯವು ಮಂಜುನಾಥ್ ಕಾಂಪ್ಲೆಕ್ಸ್ ನಲ್ಲಿರುವ ಸಿಸಿ ಟಿವಿ ಕ್ಯಾಮರಾಗಳಲ್ಲಿ ಸೆರೆಯಾಗಿದ್ದು ಕೂಡಲೇ ಆರೋಪಿಗಳನ್ನು ಬಂಧಿಸಬೇಕು ಎಂದು ಬಂಡಿಹೊಳೆ ಗ್ರಾಮಸ್ಥರು ಪೊಲೀಸ್ ಅಧಿಕಾರಿಗಳನ್ನು ಒತ್ತಾಯ ಮಾಡಿದ್ದಾರೆ. ಘಟನಾ ಸ್ಥಳಕ್ಕೆ ವೃತ್ತ ನಿರೀಕ್ಷಕ ಆನಂದೇಗೌಡ, ಸಬ್ ಇನ್ಸ್ಪೆಕ್ಟರ್ ಸುಬ್ಬಯ್ಯ ಇತರರು ಭೇಟಿ ನೀಡಿ ಪರಿಶೀಲನೆ ನಡೆಸಿದರು.