ಅಯೋಧ್ಯೆ: ಕಳೆದ ವರ್ಷ ಜನವರಿ ೨೨ರಂದು ಲೋಕಾರ್ಪಣೆಗೊಂಡ ಅಯೋಧ್ಯೆಯ ರಾಮ ಮಂದಿರದ ಗರ್ಭಗುಡಿಯಲಿ ಭಾರೀ ಮಳೆಗೆ ಸೋರಿಕೆ ಕಂಡುಬಂದಿದೆ. ಪ್ರಧಾನ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್ ಅವರು ಮಳೆ ನೀರು ಸೋರಿಕೆ ಖಚಿತಪಡಿಸಿದ್ದು, ದೇವಸ್ಥಾನ ನಿರ್ಮಾಣ ಕಾರ್ಯದಲ್ಲಿ ಲೋಪವಾಗಿದೆ ಎಂದು ಆರೋಪಿಸಿದ್ದಾರೆ.
ಈ ಕುರಿತು ಮಾತನಾಡಿರುವ ಅವರು, ರಾಮಮಂದಿರ ನಿರ್ಮಾಣ ಕಾರ್ಯದಲ್ಲಿ ನಿರ್ಲಕ್ಷ್ಯ ವಹಿಸಲಾಗಿದೆ. ಮಳೆಗೆ ದೇವಾಲಯದ ಗರ್ಭಗುಡಿಯ ಮೇಲ್ಛಾವಣಿಯಿಂದ ಭಾರೀ ನೀರು ಸೋರಿಕೆಯಾಗಿದೆ. ಮಳೆಗೆ ದೇವಸ್ಥಾನದ ಪವಿತ್ರ ಗರ್ಭಗುಡಿಯ ಚಾವಣಿಯಿಂದ ತೀವ್ರ ಸೋರಿಕೆಯಾಗಿದೆ. ಬಾಲರಾಮನ ವಿಗ್ರಹದ ಮುಂದೆ ಅರ್ಚಕರು ಕೂರುವ ಸ್ಥಳದಲ್ಲಿ, ವಿಐಪಿ ದರ್ಶನಕ್ಕಾಗಿ ಜನರು ಬರುವ ಸ್ಥಳದಲ್ಲಿಯೂ ನೀರು ಬೀಳುತ್ತಿದೆ. ಮಳೆಯ ನೀರು ಹೋಗಲು ಸರಿಯಾದ ಚರಂಡಿ ವ್ಯವಸ್ಥೆಯೂ ಇಲ್ಲ. ಹಿರಿಯ ಅಧಿಕಾರಿಗಳು ಸರಿಪಡಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಆಚಾರ್ಯ ಸತ್ಯೇಂದ್ರ ದಾಸ್ ಆಗ್ರಹಿಸಿದ್ದಾರೆ.