ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ: ಸಾ.ರಾ.ಮಹೇಶ್ ಅವರು ಶಾಸಕರಾಗಿದ್ದ ಅವಧಿಯಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ನೇಮಕಗೊಂಡಿದ್ದ ಸಮುದಾಯದ ಕುರುಬ ಹಲವರನ್ನು ಕೆಲಸದಿಂದ ವಜಾ ಮಾಡಲಾಗಿತ್ತು. ಹಾಗೆ ವಜಾ ಆದವರನ್ನು ಮತ್ತೆ ಕೆಲಸಕ್ಕೆ ಸೇರ್ಪಡೆ ಮಾಡಿಕೊಳ್ಳಬೇಕು’ ಎಂದು ತಾಲ್ಲೂಕು ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷ ದೆಗ್ಗನಹಳ್ಳಿ ಆನಂದ್ ಸರ್ಕಾರವನ್ನು ಒತ್ತಾಯಿಸಿದರು.
ಕೆ.ಆರ್.ನಗರ ತಾಲ್ಲೂಕು ಆಡಳಿತ ಸೌಧದಲ್ಲಿ ತಹಶೀಲ್ದಾರ್ ಸಿ.ಎಸ್. ಪೂರ್ಣಿಮಾ ಅವರಿಗೆ ಸೋಮವಾರ ಮನವಿ ಸಲ್ಲಿಸಿ ಮಾತನಾಡಿದ ಅವರು, “ಕುರುಬ ಸಮುದಾಯದವರು ಎನ್ನುವ ಕಾರಣಕ್ಕೆ 2020, 2021ನೇ ಸಾಲಿನಲ್ಲಿ ತಾಲ್ಲೂಕಿನ ಸರ್ಕಾರಿ ಕಚೇರಿಗಳಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿದ್ದ ಡಿ.ಗ್ರೂಪ್ ನೌಕರರು, ಲ್ಯಾಬ್ ಟೆಕ್ನಿಶಿಯನ್, ಸೆಕ್ಯೂರಿಟಿ ಗಾರ್ಡ್, ನರ್ಸ್ ಸೇರಿದಂತೆ ಹಲವು ನೌಕರರನ್ನು ಕೆಲಸದಿಂದ ವಜಾ ಮಾಡಲಾಗಿದೆ. ಅವರ ಕುಟುಂಬಗಳು ಇಂದು ಬೀದಿ ಪಾಲಾಗಿವೆ’ ಎಂದು ಆರೋಪಿಸಿದರು.
‘ಸರ್ಕಾರ ಇತ್ತ ಗಮನ ಹರಿಸಿ ಕೆಲಸದಿಂದ ವಜಾಗೊಂಡ ಹೊರಗುತ್ತಿಗೆ ನೌಕರರನ್ನು ಮತ್ತೆ ಕೆಲಸಕ್ಕೆ ನೇಮಿಸಿಕೊಳ್ಳಬೇಕು. ಕೆಲಸದಿಂದ ವಜಾಗೊಂಡವರ ಪಟ್ಟಿಯನ್ನೂ ಸಲ್ಲಿಸಲಾಗಿದೆ’ ಎಂದರು.
ಈ ಸಂದರ್ಭದಲ್ಲಿ ಕೆ.ಆರ್.ನಗರ ಯೋಜನಾ ಪ್ರಾಧಿಕಾರದ ಸದಸ್ಯೆ ಸರಿತಾ ಜವರಪ್ಪ, ರಾಮಾಚಾರಿ, ಜಗದೀಶ್ ಬ್ಯಾಡರಹಳ್ಳಿ ಕುಮಾರ್ ವಕೀಲ ವಿಜಯ್ ಕುಮಾರ್, ಪ್ರಜ್ವಲ್, ಎಸ್.ಕೆ.ಕಿರಣ್, ಪ್ರೀತಿ, ಮೋಹನ್, ಪ್ರವೀಣ್, ಗೋವರ್ಧನ್, ಐಶ್ವರ್ಯ ಇದ್ದರು.