ಯಳಂದೂರು: ಮೈಸೂರಿನ ಜೆ.ಎಸ್.ಎಸ್. ಮಹಾವಿದ್ಯಾಪೀಠದ ವತಿಯಿಂದ ಪಟ್ಟಣದ ಅಂಬೇಡ್ಕರ್ ಭವನದಲ್ಲಿ 18ನೇ ವರ್ಷದ ಉಚಿತ ಕುಡಿತ ಬಿಡಿಸುವ ಶಿಬಿರವನ್ನು ಜುಲೈ 25 ರಿಂದ ಆಗಸ್ಟ್ 03 ರವರೆಗೆ ನಡೆಸಲು ಉದ್ದೇಶಿಸಲಾಗಿದೆ ಎಂದು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ದುಗ್ಗಹಟ್ಟಿ ರಾಜೇಶ್ ಮಾಹಿತಿ ನೀಡಿದರು.
ಅವರ ಪಟ್ಟಣದ ಜೆ.ಎಸ್.ಎಸ್. ಕಾಲೇಜಿನಲ್ಲಿ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮೈಸೂರಿನ ಜೆ.ಎಸ್.ಎಸ್. ಮಹಾವಿದ್ಯಾಪೀಠವು ಇದುವರೆಗೆ 17 ಉಚಿತ ಕುಡಿತ ಬಿಡಿಸುವ ಶಿಬಿರಗಳನ್ನು ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಭಾಗಗಳಲ್ಲಿ ನಡೆಸಿತು, 18 ನೇ ವಿವಿಧ ಶಿಬಿರವನ್ನು ಯಳಂದೂರು ಪಟ್ಟಣದ ಅಂಬೇಡ್ಕರ್ ಭವನದಲ್ಲಿ ನಡೆಸಲು ತೀರ್ಮಾನಿಸಲಾಗಿದೆ. ತಾಲೂಕಿನ ಪ್ರತಿ ಗ್ರಾಮದಲ್ಲಿ ಪರಿಣಾಮಕಾರಿ ಪ್ರಚಾರ ನಡೆಸಿ ಅರ್ಹ ಶಿಬಿರಾರ್ಥಿಗಳನ್ನು ಗುರುತಿಸಿ ಶಿಬಿರಕ್ಕೆ ಸೇರಿಸಲು ಸಾರ್ವಜನಿಕರ ಸಹಕಾರ. ಈ ಮೂಲಕ ಶಿಬಿರವು ಯಶಸ್ವಿಯಾಗಿ ನಡೆಯಲಿದೆ ಎಂದು ಮನವಿ ಮಾಡಿದರು.
ಕ.ಸಾ.ಪ. ಮಾಜಿ ಅಧ್ಯಕ್ಷರು ಮದ್ದೂರು ವಿರೂಪಾಕ್ಷ ಮಾತನಾಡಿ ಕುಡಿತ ಒಂದು ಸಾಮಾಜಿಕ ಪಿಡುಗಾಗಿದ್ದು ಸಮಾಜದ ತಳವರ್ಗದ ಜನರೇ ಹೆಚ್ಚಾಗಿ ಕುಡಿತದ ಚಟಕ್ಕೆ ಬಲಿಯಾಗಿ ಅವರ ಕುಟುಂಬಗಳು ನಾಶವಾಗುತ್ತಿವೆ. ಇಂತಹ ಸಂದರ್ಭದಲ್ಲಿ ಪಟ್ಟಣದಲ್ಲಿ ಜೆ.ಎಸ್.ಎಸ್. ಮಹಾವಿದ್ಯಾಪೀಠವು ಕುಡಿತ ಬಿಡಿಸುವ ಶಿಬಿರವನ್ನು ಉಚಿತವಾಗಿ ನಡೆಸುತ್ತಿದ್ದು ಈ ಶಿಬಿರಕ್ಕೆ ಪೀಡಿತರನ್ನು ಸೇರಿಸಿ ಅವರ ಚಟವನ್ನು ಬಿಡಿಸಿ ಅವರನ್ನು ಮುಖ್ಯವಾಹಿನಿಗೆ ತರಲು ಅವರಿಗೆ ಪುನರ್ವಸತಿ ಕಲ್ಪಿಸಲು ಶಿಬಿರವನ್ನು ಆಯೋಜಿಸಿರುವ ಪರಮಪೂಜ್ಯ ಶ್ರೀಗಳಿಗೆ ತಾಲ್ಲೂಕಿನ ಜನತೆಯ ಪರವಾಗಿ ಕೃತಜ್ಞತೆಯನ್ನು ಸಲ್ಲಿಸಲಾಗುವುದು ಎಂದರು.
ಸಭೆಯಲ್ಲಿ ವೈ.ಎನ್. ಪ್ರಕಾಶ್, ರೋಟರಿ ಅಧ್ಯಕ್ಷರಾದ ಸಾಗರ್, ಗೌಡಹಳ್ಳಿ ಬಸವಣ್ಣ, ಡಿ.ಪಿ. ಪ್ರಭುಶಂಕರ್, ಮೆಳ್ಳಹಳ್ಳಿ ಮಲ್ಲು, ಪಟ್ಟಣ ಪಂಚಾಯಿತಿ ಸದಸ್ಯರು ಬಿ. ರವಿ, ಮದ್ದೂರು ಚಕ್ರವರ್ತಿ, ವೈ.ಎನ್. ನಾಗಣ್ಣ, ಕಟ್ಲವಾಡಿ ಸಿದ್ದರಾಜು, ಎಂ.ಪಿ. ಪುಟ್ಟಣ್ಣ ಸೇರಿದಂತೆ ಇತರರು ಹಾಜರಿದ್ದರು.