Sunday, April 20, 2025
Google search engine

Homeಸ್ಥಳೀಯಜಾನಪದ ಕ್ಷೇತ್ರದಲ್ಲಿ ಹೆಣ್ಣು ಮಕ್ಕಳು ವಿಜೃಂಭಿಸಬೇಕು

ಜಾನಪದ ಕ್ಷೇತ್ರದಲ್ಲಿ ಹೆಣ್ಣು ಮಕ್ಕಳು ವಿಜೃಂಭಿಸಬೇಕು


ಮೈಸೂರು: ಜಾನಪದ ಕಲೆ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಹೆಣ್ಣು ಮಕ್ಕಳ ಪಾತ್ರ ಬಹುಮುಖ್ಯವಾಗಿದ್ದು, ಜಾನಪದ ಕ್ಷೇತ್ರದಲ್ಲಿ ಹೆಣ್ಣು ಮಕ್ಕಳು ಇನ್ನಷ್ಟು ವಿಜೃಂಭಿಸಬೇಕು ಎಂದು ಮಹಾರಾಜ ಕಾಲೇಜಿನ ಜಾನಪದ ವಿಭಾಗದ ಪ್ರಾಧ್ಯಾಪಕಿ ಡಾ.ವಿಜಯಲಕ್ಷ್ಮೀ ಹೇಳಿದರು.
ಕಲಾಮಂದಿರದ ಕಿರುರಂಗ ಮಂದಿರದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಚಾರಿಟಬಲ್ ಟ್ರಸ್ಟ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಜಾನಪದ ಕಲಾ ಪ್ರಕಾರಗಳ ಪ್ರದರ್ಶನದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಜಾನಪದ ಕಲೆಯನ್ನು ಉಳಿಸಿ, ಬೆಳೆಸಿ ಮುಂದಿನ ಪೀಳಿಗೆಗೆ ಕೊಂಡೊಯ್ಯುವ ನಿಟ್ಟಿನಲ್ಲಿ ಸಾಕಷ್ಟು ಜನ ನಿರಂತರವಾಗಿ ಪ್ರಯತ್ನಿಸುತ್ತಾ ಇದ್ದಾರೆ. ಕಾಲೇಜು ಹಾಗೂ ವಿವಿಗಳಲ್ಲಿ ಜಾನಪದವನ್ನು ಬೋಧಿಸುವ ಕಾಯಕದಲ್ಲಿ ಹಲವು ಮಂದಿ ತೊಡಗಿಸಿಕೊಂಡಿದ್ದಾರೆ. ಇಂತಹ ಸಂದರ್ಭದಲ್ಲಿ ಗ್ರಾಮೀಣ ಪ್ರದೇಶ ಸೇರಿದಂತೆ ವಿವಿಧ ಹಂತಗಳಲ್ಲಿ ಮಹಿಳೆಯರು ಜಾನಪದ ಕಲೆ ಬೆಳೆಸುವ ಕಾಯಕದಲ್ಲಿ ನಿರಂತವಾಗಿ ತೊಡಗಿಸಿಕೊಂಡಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು.
ರೈತರು ಬೆಳೆದ ಫಸಲಿನ ಒಕ್ಕಣೆ ಕಾರ್ಯದಲ್ಲೂ ಜಾನಪದ ಕಲೆ ಕಾಣಬಹುದಾಗಿದೆ. ದವಸ-ಧಾನ್ಯ ಸಂಗ್ರಹಿಸುವ, ಅದನ್ನು ಮುಂದಿನ ವರ್ಷಕ್ಕೆ ಭಿತ್ತನೆಗೆ ಬಳಸಲು ಸಂರಕ್ಷಿಸುವ ಎಲ್ಲಾ ಕಲೆಯೂ ಮಹಿಳೆಯರಲ್ಲೇ ಅಡಗಿದೆ. ಹೆಣ್ಣು ಮಕ್ಕಳು ಜಾನಪದ ಉಳಿಸುವ ಕೆಲಸ ಮಾಡುತ್ತಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಹೆಣ್ಣು ಕಥೆ ಕಟ್ಟುವ ಹಾಗೂ ಕಥೆ ಹೇಳುವ, ಗಾದೆ ಕಟ್ಟುವ, ಪ್ರದರ್ಶಿಸುವ ಕೆಲಸ ಹೆಣ್ಣು ಮಕ್ಕಳು ಮಾಡುತ್ತಿದ್ದಾರೆ. ಮುಂದಿನ ತಲೆ ಮಾರಿಗೆ ರವಾನೆ ಮಾಡುತ್ತಿದ್ದಾರೆ. ಇದರೊಂದಿಗೆ ಮನೆ ಮುಂದೆ ರಂಗೋಲಿ ಬಿಡಿಸುವುದು ಸೇರಿದಂತೆ ವಿವಿಧ ಆಚರಣೆ ಮೂಲಕ ಗ್ರಾಮೀಣ ಪ್ರದೇಶದಲ್ಲಿ ಜಾನಪದ ಕಲೆ ಸಂರಕ್ಷಣೆಗೆ ಮಹಿಳೆಯರ ಕೊಡುಗೆ ಅಪಾರ ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ವಿ.ಎನ್.ಮಲ್ಲಿಕಾರ್ಜುನಸ್ವಾಮಿ ಮಾತನಾಡಿ, ಮೈಸೂರಿನ ಮಹಾರಾಜ ಕಾಲೇಜಿನ ಜಾನಪದ ವಿಭಾಗ ಗಟ್ಟಿಯಾಗಿದೆ. ಮೈಸೂರು ವಿಶ್ವವಿದ್ಯಾನಿಲಯದ ಜಾನಪದ ವಸ್ತು ಸಂಗ್ರಹಾಲಯದಲ್ಲಿ ಹಲವು ವಸ್ತುಗಳನ್ನು ಸಂಗ್ರಹಿಸಿಡಲಾಗಿದೆ. ಆ ವಸ್ತು ಸಂಗ್ರಹಾಲಯಕ್ಕೆ ವಿದ್ಯಾರ್ಥಿಗಳು ಭೇಟಿ ನೀಡಿ, ವೀಕ್ಷಿಸಬೇಕು. ಅಲ್ಲಿರುವ ವಸ್ತುಗಳನ್ನು ಈ ಹಿಂದೆ ಅಜ್ಜ-ಅಜ್ಜಿಯರ ಕಾಲದಲ್ಲಿ ಬಳಸುತ್ತಿದ್ದುದ್ದಾಗಿದೆ. ಈ ಹಿನ್ನೆಲೆಯಲ್ಲಿ ಪ್ರತಿಯೊಂದು ವಸ್ತುಗಳು ಜಾನಪದ ಹೇಳುತ್ತವೆ ಎಂದರು.
ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಎಂ.ಡಿ.ಸುದರ್ಶನ್, ಕರ್ನಾಟಕ ಜಾನಪದ ವಿಶ್ವವಿದ್ಯಾನಿಲಯದ ಪ್ರಾದೇಶಿಕ ಕೇಂದ್ರದ ಸಂಯೋಜನಾಧಿಕಾರಿ ಕೆ.ಕೆ.ದೇವಾನಂದ ವರಪ್ರಸಾದ್, ವಾಲ್ಮೀಕಿ ಟ್ರಸ್ಟ್ ಅಧಕ್ಷೆ ಎಸ್.ರಮ್ಯ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular