ಬೆಂಗಳೂರು: ಬಿಜೆಪಿ ಹಿರಿಯ ನಾಯಕ ಬಿ ಎಸ್ ಯಡಿಯೂರಪ್ಪಗೆ ಪೋಕ್ಸೋ ಪ್ರಕರಣ ಬಿಟ್ಟುಬಿಡದೆ ಕಾಡುತ್ತಿದೆ. ಪೋಕ್ಸೋ ಪ್ರಕರಣದಲ್ಲಿ ಬಿಜೆಪಿಯ ಹಿರಿಯ ನಾಯಕ ಬಿಎಸ್ ಯಡಿಯೂರಪ್ಪ ಸೇರಿ ನಾಲ್ವರ ವಿರುದ್ಧ ಸಿಐಡಿ ಅಧಿಕಾರಿಗಳು ಕೋರ್ಟಗೆ ಚಾರ್ಜ್ ಶೀಟ್ ಸಲ್ಲಿಸಿದೆ.
ಪ್ರಕರಣಕ್ಕೆ ಸಂಬಂಧಿಸಿ ಜೂನ್ ೧೫ರೊಳಗೆ ಚಾರ್ಜ್ ಶೀಟ್ ಸಲ್ಲಿಸಬೇಕು ಎಂದು ಕೋರ್ಟ್ ಆದೇಶಿತ್ತು. ಆದರೆ ಯಡಿಯೂರಪ್ಪ ತನಿಖೆಗೆ ಹಾಜರಾಗದ ಹಿನ್ನಲೆ ಚಾರ್ಜ್ ಶೀಟ್ ಸಲ್ಲಿಕೆ ಆಗಿರಲಿಲ್ಲ. ನಂತರ ಕೋರ್ಟ್ ಯಡಿಯೂರಪ್ಪ ಬಂಧನ ಮಾಡದಂತೆ ಹಾಗೂ ಜೂನ್ ೧೭ಕ್ಕೆ ತಪ್ಪದೆ ತನಿಖೆಗೆ ಹಾಜರಾಗುವಂತೆ ಸೂಚನೆ ನೀಡಿತ್ತು. ಆದೇಶ ನೀಡಿದ ಬೆನ್ನಲ್ಲೇ ಸಿಐಡಿ ತನಿಖೆಗೆ ಸಹಕರಿಸಿದ್ದರು. ಈಗ ೭೫೦ ಪುಟಗಳ ಚಾರ್ಜ್ ಶೀಟ್ ಅನ್ನು ಒಂದನೇ ತ್ವರಿತಗತಿ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಲಾಗಿದೆ.
ಈ ಪ್ರಕರಣದಲ್ಲಿ ೭೫ ಮಂದಿಯನ್ನ ಸಾಕ್ಷಿಗಳಾಗಿ ಪರಿಗಣಿಸಿ ಪ್ರಕರಣದ ತನಿಖೆ ಮುಕ್ತಾಯ ಮಾಡಿ ಚಾರ್ಜ್ ಶೀಟ್ ಸಲ್ಲಿಕೆ ಮಾಡಿರುವ ಮಾಹಿತಿ ತಿಳಿದುಬಂದಿದೆ. ೨೦೨೪ರ ಫೆಬ್ರವರಿ ೨ರಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ೧೭ ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಮಾರ್ಚ್ ೧೪ರಂದು ಪೋಕ್ಸೊ ಕಾಯ್ದೆ ಅಡಿಯಲ್ಲಿ ಬೆಂಗಳೂರಿನ ಸದಾಶಿವನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೂನ್ ೧೨ರಂದೇ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗಬೇಕು ಎಂಬುದಾಗಿ ಜೂನ್ ೧೧ರಂದೇ ಸಿಐಡಿ ಅಧಿಕಾರಿಗಳು ನೋಟಿಸ್ ನೀಡಿದ್ದರು. ಆದರೆ ತನಿಖೆಗೆ ಹಾಜರಾಗಿರಲಿಲ್ಲ. ಬಂಧನದ ವಾರೆಂಟ್ ಸಹ ಜಾರಿ ಮಾಡಲಾಗಿತ್ತು. ನಂತರ ಬೆಂಗಳೂರಿನ ವಿಶೇಷ ಕೋರ್ಟ್ ಯಡಿಯೂರಪ್ಪ ಅವರನ್ನು ಬಂಧಿಸದಂತೆ ಹಾಗೂ ಜೂ ೧೭ ಕ್ಕೆ ವಿಚಾರಣೆಗೆ ಹಾಜರಾಗುವಂತೆ ಆದೇಶ ಹೊರಡಿಸಿತ್ತು.