ವರದಿ : ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ಬೆಂಗಳೂರಿನ ನಿರ್ಮಾತೃ ನಾಡ ಪ್ರಭು ಕೆಂಪೇಗೌಡರ ದೂರದೃಷ್ಟಿಯಿಂದ ಇಂದು ವಿದ್ಯಾವಂತರಿಗೆ, ಅವಿದ್ಯಾವಂತ ನಿರುದ್ಯೋಗಿಗಳಿಗೆ ಕೈ ಬೀಸಿ ಕರೆದು ಉದ್ಯೋಗ ನೀಡುವುದರ ಜತೆಗೆ ರಾಜಕೀಯ, ವಾಣಿಜ್ಯ ಸೇರಿದಂತೆ ಎಲ್ಲಾ ವರ್ಗದ ಜನತೆಗೆ ಆಸರೆಯಾಗುತ್ತಿದೆ ಬೆಂಗಳೂರು ಎಂದು ಶಾಸಕ ಡಿ.ರವಿಶಂಕರ್ ಹೇಳಿದರು.
ಸಾಲಿಗ್ರಾಮ ಪಟ್ಟಣದಲ್ಲಿ ತಾಲೂಕು ಆಡಳಿತ ವತಿಯಿಂದ 515ನೇ ನಾಡಪ್ರಭು ಕೆಂಪೇಗೌಡರ ಜಯಂತ್ಯುತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಪಟ್ಟಣ್ಣದಲ್ಲಿ ತಾಲೂಕು ಒಕ್ಕಲಿಗ ಸಮುದಾಯ ಭವನ ಅರ್ಧಕ್ಕೆ ನಿಂತಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಸರಕಾರದ ವತಿಯಿಂದ ಭವನದ ನಿರ್ಮಾಣ ಹಾಗೂ ಇನ್ನಿತರ ಅಭಿವೃದ್ಧಿ ಕಾಮಗಾರಿಗೆ ಅನುದಾನ ಬಿಡುಗಡೆ ಮಾಡಿಸಿ ಆದಷ್ಟೂ ಬೇಗ ಭವನ ನಿರ್ಮಾಣದ ಜತೆಗೆ ಉದ್ಘಾಟನೆ ಮಾಡಿಸುವುದಾಗಿ ನಿಮ್ಮೆಲ್ಲರ ಸಮ್ಮುಖದಲ್ಲಿ ಭರವಸೆ ನೀಡುತ್ತೇನೆ ಎಂದು ಹೇಳಿದರು.
ತಾಲೂಕಿಗೆ ಮಿನಿ ವಿಧಾನ ಸೌಧ ನಿರ್ಮಾಣ ಮಾಡಲು ಸಚಿವ ಕೃಷ್ಣಭೈರೇಗೌಡ ಅವರಿಗೆ ಮನವಿ ನೀಡಿದ್ದು, ಎಲ್ಲಾ ಹೊಸ ತಾಲೂಕು ಕೇಂದ್ರಗಳಲ್ಲಿ ಮಿನಿ ವಿಧಾನ ಸೌಧ ನಿರ್ಮಾಣ ಮಾಡಲು ಮುಂದಿನ ಬಜೆಟ್ ನಲ್ಲಿ ಅನುದಾನ ನೀಡುವುದಾಗಿ ತಿಳಿಸಿದ್ದಾರೆ. ಜೊತೆಗೆ ಸಾಲಿಗ್ರಾಮ ಹಾಗೂ ಭೇರ್ಯ ಆರೋಗ್ಯ ಕೇಂದ್ರ ಗಳನ್ನು ಮೇಲ್ದರ್ಜೆಗೇರಿಸುವ ಬಗ್ಗೆ ಆರೋಗ್ಯ ಸಚಿವರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರಲ್ಲದೆ, ಪಟ್ಟಣಕ್ಕೆ ಅಗತ್ಯತೆ ಮೂಲ ಭೂತ ಸೌಲಭ್ಯಗಳ ಬಗ್ಗೆ ಈಗಾಗಲೇ ಅಂದಾಜು ಪಟ್ಟಿ ತಯಾರಿಸಲಾಗಿದೆ. ಅದರಂತೆ ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಎಲ್ಲಾ ರೀತಿಯ ಅಭಿವೃದ್ಧಿ ಕೆಲಸ ಕಾರ್ಯಗಳನ್ನು ಮಾಡುವುದಾಗಿ ಹೇಳಿದ ಅವರು, ನನ್ನ ರಾಜಕೀಯ ಭವಿಷ್ಯ ರೂಪಿಸಿದ್ದು ಈ ಸಾಲಿಗ್ರಾಮದ ಜನತೆ. ಅವರು ಅಂದು ಕೊಟ್ಟ ಮತ ಬಿಕ್ಷೆಯಿಂದ ಇಂದು ಈ ಕೃಷ್ಣರಾಜನಗರ ಕ್ಷೇತ್ರದ ಶಾಸಕನಾಗಿ ಅವಳಿ ತಾಲೂಕಿನ ಜನ ಸೇವೆ ಮಾಡಲು ಅವಕಾಶ ಸಿಕ್ಕಿದ್ದು. ನನ್ನೆರೆಡು ಕಣ್ಣುಗಳಾಗಿರುವ ಈ ಅವಳಿ ತಾಲೂಕಿನ ಸರ್ವತೋಮುಖ ಅಭಿವೃದ್ಧಿಗಾಗಿ ಪ್ರಾಮಾಣಿಕವಾಗಿ ಶಕ್ತಿ ಮೀರಿ ಕೆಲಸ ಮಾಡುವ ಮೂಲಕ ನಿಮ್ಮ ಋಣ ತೀರಿಸುವೆ ಎಂದು ಹೇಳಿದರು.
ಇದಕ್ಕೂ ಮೊದಲು ಪಟ್ಟಣದ ಶ್ರೀಯೋಗನರಸಿಂಹ ದೇಗುಲದಲ್ಲಿ ಪೂಜೆ ಸಲ್ಲಿಸಿ ಬೆಳ್ಳಿ ರಥದ ಮೇಲಿದ್ದ ನಾಡಪ್ರಭು ಕೆಂಪೇಗೌಡರ ಭಾವಚಿತ್ರಕ್ಕೆ ಶಾಸಕ ಡಿ.ರವಿಶಂಕರ್ ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡರು. ಪಟ್ಟಣ ಪ್ರಮುಖ ರಸ್ತೆಯಲ್ಲಿ ಕಲಸಹೊತ್ತ ಮಹಿಳೆಯರು, ಡೊಳ್ಳುಕುಣಿತ, ವೀರಗಾಸೆ, ನಗಾರಿಯೊಂದಿಗೆ ಅದ್ದೂರಿ ಮೆರವಣಿಗೆ ನಡೆಸಿದರು.
ಈ ಸಂದರ್ಭದಲ್ಲಿ ಸಾಲಿಗ್ರಾಮ ತಹಸೀಲ್ದಾರ್ ಎಸ್.ಎನ್ ನರಗುಂದ, ಕೆ.ಆರ್ ನಗರ ತಹಸೀಲ್ದಾರ್ ಪೂರ್ಣಿಮಾ, ತಾಲೂಕು ಆರೋಗ್ಯಾಧಿಕಾರಿ ಡಾ. ಡಿ. ನಟರಾಜು, ತಾಲೂಕು ಪಂಚಾಯಿತಿ ಕಾರ್ಯನಿರ್ವಣಾಧಿಕಾರಿ ಹರೀಶ್, ಸರ್ಕಲ್ ಇನ್ಸ್ಪೆಕ್ಟರ್ ಕೃಷ್ಣರಾಜು, ಸಹಾಯಕ ನಿರ್ದೇಶಕ ಪಶುಪಾಲನಾ ಇಲಾಖೆ ಡಾ.ಬಿ.ಮಂಜುನಾಥ್, ಬನ್ನೂರು ರಾಜು, ಒಕ್ಕಲಿಗ ಸಂಘದ ಅಧ್ಯಕ್ಷ ಅಣ್ಣೇಗೌಡ, ಮಧುಚಂದ್ರ, ಗ್ರಾ.ಪಂ ಅಧ್ಯಕ್ಷೆ ಫಾತಿಮಾ ಉನ್ನಿಸ್, ಕೆ.ವಿ ರಮೇಶ್, ಶಿರಸ್ತೇದಾರು ಶಿವಕುಮಾರ್, ಅಂಕನಹಳ್ಳಿ ಗೋವಿಂದೇಗೌಡ ,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಉದಯ್ ಶಂಕರ್, ಜಾಬಿರ್, ರಮೇಶ್, ವಿನಯ್, ಡೇರಿ ಮಾದು, ಕಂಠೀಕುಮಾರ್, ಚಂದ್ರು, ಪುರಿಗೋವಿಂದ, ಚಂದ್ರು, ಪ್ರಭಾ, ಮಂಜು, ಪ್ರಭಾಕರ್ ಜೈನ್, ಎಲ್.ಐ. ಸಿ ಜಗದೀಶ್ ಸೇರಿದಂತೆ ಮತ್ತಿತರರು ಇದ್ದರು.
