Sunday, April 20, 2025
Google search engine

Homeಅಪರಾಧಕಾನೂನುಬಿ.ಎಸ್. ಯಡಿಯೂರಪ್ಪ ವಿರುದ್ಧ ಚಾರ್ಜ್‌ ಶೀಟ್ ಸಲ್ಲಿಕೆ

ಬಿ.ಎಸ್. ಯಡಿಯೂರಪ್ಪ ವಿರುದ್ಧ ಚಾರ್ಜ್‌ ಶೀಟ್ ಸಲ್ಲಿಕೆ

ಬೆಂಗಳೂರು: ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ ಸೇರಿದಂತೆ ನಾಲ್ವರ ವಿರುದ್ಧ  ಹದಿನೇಳು ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ಸಿಐಡಿ ಅಧಿಕಾರಿಗಳು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ (ಚಾರ್ಜ್‌ಶೀಟ್) ಸಲ್ಲಿಸಿದ್ದಾರೆ.

ಬಾಲಕಿ ತಾಯಿ ನೀಡಿದ್ದ ದೂರಿನಡಿ ಸದಾಶಿವನಗರ ಠಾಣೆಯಲ್ಲಿ ಮಾರ್ಚ್‌ 14ರಂದು ದಾಖಲಾಗಿದ್ದ ಪ್ರಕರಣದ ವಿಚಾರಣೆ ನಡೆಸಿದ್ದ ಸಿಐಡಿ ಅಧಿಕಾರಿಗಳು, ಇತ್ತೀಚೆಗಷ್ಟೇ ಯಡಿಯೂರಪ್ಪ ಅವರನ್ನು ವಿಚಾರಣೆಗೆ ಒಳಪಡಿಸಿ ಹೇಳಿಕೆ ಪಡೆದಿದ್ದರು. ಬಾಲಕಿಯ ಹೇಳಿಕೆಯನ್ನೂ ಸಿಆರ್‌ಪಿಸಿ 164 ಅಡಿ ನ್ಯಾಯಾಧೀಶರ ಎದುರು ದಾಖಲಿಸಿಕೊಂಡಿದ್ದರು.

ಯಡಿಯೂರಪ್ಪ ಅವರ ಮೇಲಿನ ಆರೋಪಕ್ಕೆ ಸಂಬಂಧಪಟ್ಟಂತೆ ಹಲವು ಪುರಾವೆಗಳನ್ನು ಸಂಗ್ರಹಿಸಿರುವ ಸಿಐಡಿ ಅಧಿಕಾರಿಗಳು, ತ್ವರಿತಗತಿಯ ವಿಶೇಷ ನ್ಯಾಯಾಲಯ-1ಕ್ಕೆ ಗುರುವಾರ ದೋಷಾರೋಪ ಪಟ್ಟಿ ಸಲ್ಲಿಸಿರುವುದಾಗಿ ಮೂಲಗಳು ಹೇಳಿವೆ.

ಪ್ರಕರಣದ ಮೊದಲ ಆರೋಪಿ ಬಿ.ಎಸ್. ಯಡಿಯೂರಪ್ಪ, ಎರಡನೇ ಆರೋಪಿ ಅರುಣ್ ವೈ.ಎಂ, ಮೂರನೇ ಆರೋಪಿ ರುದ್ರೇಶ್ ಎಂ. ಹಾಗೂ ನಾಲ್ಕನೇ ಆರೋಪಿ ಜಿ. ಮರಿಸ್ವಾಮಿ ವಿರುದ್ಧ ಆರೋಪ ಪಟ್ಟಿ ಸಲ್ಲಿಸಲಾಗಿದೆ. ಆರೋಪಿಗಳ ವಿರುದ್ಧ ದೋಷಾರೋಪ ಹೊರಿಸಿರುವ ನ್ಯಾಯಾಧೀಶ ಎನ್.ಎಂ. ರಮೇಶ್ ಅವರು, ವಿಚಾರಣೆಯನ್ನು ಮುಂದೂಡಿದ್ದಾರೆ. ಮುಂದಿನ ವಿಚಾರಣೆ ಸಂದರ್ಭದಲ್ಲಿ ಆರೋಪಿಗಳ ಪರ ವಕೀಲರು ಹಾಜರಾಗುವ ಸಾಧ್ಯತೆ ಇದೆ ಎಂದು ಸಿಐಡಿ ಮೂಲಗಳು ಹೇಳಿವೆ.

₹2 ಲಕ್ಷ ನೀಡಿದ್ದ ಆರೋಪಿಗಳು

ಬಾಲಕಿಯ ತಾಯಿ ಕೃತ್ಯಕ್ಕೆ ಸಂಬಂಧಿಸಿದಂತೆ ಫೋಟೊ ಹಾಗೂ ವಿಡಿಯೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅಪಲೋಡ್‌ ಮಾಡಿದ್ದರು. ಅದನ್ನು ಗಮನಿಸಿದ್ದ ಬಿ.ಎಸ್.ಯಡಿಯೂರಪ್ಪ, ಇತರೆ ಆರೋಪಿಗಳ ಸಹಾಯದಿಂದ ಬಾಲಕಿ ಹಾಗೂ ತಾಯಿಯನ್ನು ತಮ್ಮ ಮನೆಗೆ ಕರೆಯಿಸಿಕೊಂಡಿದ್ದರು. ಸಾಮಾಜಿಕ ಮಾಧ್ಯಮಗಳಲ್ಲಿ ಅಪ್‌ಲೋಡ್‌ ಮಾಡಿದ್ದ ವಿಡಿಯೊ ಮತ್ತು ಫೋಟೊಗಳನ್ನು ಅಳಿಸಿ ಹಾಕಿಸಿದ್ದರು. ನಂತರ ಮೊಬೈಲ್‌ನಲ್ಲಿರುವ ವಿಡಿಯೊ ಹಾಗೂ ಪೋಟೊಗಳನ್ನು ಸಹ ಅಳಿಸಿದ್ದರು. ಇದೇ ಸಂದರ್ಭದಲ್ಲಿ ಆರೋಪಿಗಳು, ಬಾಲಕಿಯ ತಾಯಿಗೆ ₹2 ಲಕ್ಷ ನಗದು ನೀಡಿದ್ದರು ಎಂಬ ಮಾಹಿತಿಯೂ ಆರೋಪ ಪಟ್ಟಿಯಲ್ಲಿದೆ.

354ಎ (ಲೈಂಗಿಕ ಕಿರುಕುಳ), 204 (ಸಾಕ್ಷ್ಯ ನಾಶ) ಹಾಗೂ 214 (ಪ್ರಕರಣ ಮುಚ್ಚಿ ಹಾಕಲು ಆಮಿಷ) ಮತ್ತು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ (ಪೋಕ್ಸೊ) ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ಇದಕ್ಕೆ ಸಂಬಂಧಪಟ್ಟಂತೆ ಪ್ರತಿಯೊಂದು ಪುರಾವೆಯನ್ನೂ ಆರೋಪ ಪಟ್ಟಿ ಜೊತೆ ಲಗತ್ತಿಸಲಾಗಿದೆ ಎಂದು ಗೊತ್ತಾಗಿದೆ. ಯಡಿಯೂರಪ್ಪ ವಿರುದ್ಧ ದೂರು ನೀಡಿದ್ದ ಬಾಲಕಿಯ ತಾಯಿ ಆರೋಗ್ಯ ಸಮಸ್ಯೆಯಿಂದ ತೀರಿಕೊಂಡಿದ್ದಾರೆ.

ಪ್ರಕರಣದ ವಿವರ

‌ಫೆ.2ರಂದು ನ್ಯಾಯ ಕೇಳಿ ಬಿ.ಎಸ್​.ಯಡಿಯೂರಪ್ಪ ಮನೆಗೆ ತೆರಳಿದ್ದ ಸಂತ್ರಸ್ತೆ ಹಾಗೂ ಆಕೆಯ ತಾಯಿ ಮಾ. 3ರಂದು ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಸಂತ್ರಸ್ತೆಯ ತಾಯಿಯಿಂದ ದೂರು ದಾಖಲು ಮಾ. 14ರಂದು ಸದಾಶಿವನಗರ ಠಾಣೆಯಲ್ಲಿ ಬಿಎಸ್​​​ವೈ ವಿರುದ್ಧ ಪೋಕ್ಸೊ ಪ್ರಕರಣ ದಾಖಲು. ನಂತರ ಎಸಿಎಂಎಂ 25ನೇ ನ್ಯಾಯಾಧೀಶರ ಎದುರು ಸಂತ್ರಸ್ತೆಯ ಹೇಳಿಕೆ ದಾಖಲು ಮಾ. 14ರಂದೇ ಪ್ರಕರಣವನ್ನು ಸಿಐಡಿಗೆ ಹಸ್ತಾಂತರಿಸಿದ್ದ ಸರ್ಕಾರ ಏ. 12ರಂದು ವಿಚಾರಣೆಗೆ ಹಾಜರಾಗುವಂತೆ ಬಿಎಸ್​ವೈಗೆ ಸಿಐಡಿ ನೋಟಿಸ್ ನಂತರ ತನಿಖಾಧಿಕಾರಿಗಳು ಧ್ವನಿ ಮಾದರಿ ಸಂಗ್ರಹಿಸಿದ್ದರು ಏ. 27ರಂದು ಬಿಎಸ್‌ವೈ ವಿರುದ್ದ ದೂರು ನೀಡಿದ್ದ ಸಂತ್ರಸ್ತೆಯ ತಾಯಿ ಮೃತಪಟ್ಟಿದ್ದರು ಜೂನ್‌. 12ರಂದು ಬಂಧನ ವಾರಂಟ್‌ ಜಾರಿಗೊಂಡಿತ್ತು ಜೂನ್‌. 14ರಂದು ಮುಂದಿನ ವಿಚಾರಣೆ ನಡೆಯುವವರೆಗೂ ಯಡಿಯೂರಪ್ಪ ಅವರನ್ನು ಬಂಧಿಸದಂತೆ ಸೂಚಿಸಿದ್ದ ಹೈಕೋರ್ಟ್‌ ಸಿಐಡಿ ವಿಚಾರಣೆಗೆ ಹಾಜರಾಗಲು ಸೂಚಿಸಿತ್ತು ಜೂನ್‌ 17ರಂದು ಹೈಕೋರ್ಟ್‌ ಸೂಚನೆ ಮೇರೆಗೆ ಬಿಎಸ್‌ವೈ ಅವರು ಸಿಐಡಿ ವಿಚಾರಣೆಗೆ ಹಾಜರಾಗಿದ್ದರು.

ಹಣ ಕೊಡಿಸಿದ್ದ ಮೂವರು ‘ಆರೋಪಿಗಳಾದ ಅರುಣ್ ರುದ್ರೇಶ್ ಹಾಗೂ ಮರಿಸ್ವಾಮಿ ಕೃತ್ಯಕ್ಕೆ ಸಂಬಂಧಪಟ್ಟ ವಿಡಿಯೊವನ್ನು ನೋಡಿದ್ದರು. ಯಡಿಯೂರಪ್ಪ ಹೇಳಿದರೆಂಬ ಕಾರಣಕ್ಕೆ ದೂರುದಾರ ಮಹಿಳೆಯನ್ನು ಸಂಪರ್ಕಿಸಿದ್ದರು. ನಂತರ ಅವರನ್ನು ಯಡಿಯೂರಪ್ಪ ಬಳಿ ಕರೆಸಿದ್ದರು. ಅವರ ಮನೆಯಲ್ಲಿ ಮಾತುಕತೆ ಆಗಿತ್ತು. ನಂತರ ದೂರುದಾರ ಮಹಿಳೆಗೆ ಮೂವರು ಆರೋಪಿಗಳು ₹2 ಲಕ್ಷ ಕೊಡಿಸಿ ಕಳುಹಿಸಿದ್ದರು’ ಎಂಬ ಮಾಹಿತಿ ಆರೋಪ ಪಟ್ಟಿಯಲ್ಲಿದೆ.

RELATED ARTICLES
- Advertisment -
Google search engine

Most Popular