ಯಳಂದೂರು: ತಾಲೂಕಿನ ಉಪ್ಪಿನಮೋಳೆ ಗ್ರಾಮದಲ್ಲಿ ಇಬ್ಬರು ಮಹಿಳೆಯರು ಹಣವನ್ನು ದ್ವಿಗುಣ ಮಾಡಿಕೊಡುವುದಾಗಿ ವಂಚಿಸಿ ೨.೫೦ ಕೋಟಿ ರೂ. ಗೂ ಅಧಿಕ ಹಣವನ್ನು ಗ್ರಾಮದ ನೂರಾರು ಜನರಿಗೆ ವಂಚಿಸಿದ್ದಾರೆ ಎಂದು ಗ್ರಾಮಸ್ಥರು ಶನಿವಾರ ಪಟ್ಟಣ ಪೊಲೀಸ್ ಠಾಣೆಯಲ್ಲಿ ಆರೋಪಿಸಿದರು.
ಉಪ್ಪಿನಮೋಳೆ ಗ್ರಾಮದ ಸರಸ್ವತಿ ಹಾಗೂ ಚೌಡಮ್ಮ ಎಂಬ ಇಬ್ಬರು ಮಹಿಳೆಯರು ಗ್ರಾಮದ ನೂರಾರು ಮಂದಿಯಿಂದ ಹಣವನ್ನು ದ್ವಿಗುಣ, ತ್ರಿಗುಣ ಮಾಡುವ ಆಮಿಷವೊಡ್ಡಿ ಇವರಿಂದ ಲಕ್ಷಾಂತರ ರೂಪಾಯಿ ಕಟ್ಟಿಸಿಕೊಂಡು ಒಂದು ಬಿಳಿ ಚೀಟಿಯಲ್ಲಿ ಬರೆದುಕೊಟ್ಟಿದ್ದಾರೆ. ಹಲವರಿಗೆ ಇವರು ವರ್ಷಕ್ಕೆ ಹಣವನ್ನು ದ್ವಿಗುಣಗೊಳಿಸಿ ನೀಡಿ ಗ್ರಾಮಸ್ಥರ ವಿಶ್ವಾಸವನ್ನು ಗಳಿಸಿಕೊಂಡಿದ್ದಾರೆ. ಇದನ್ನು ನಂಬಿದ ಹಲವರು ಇವರಿಗೆ ಮತ್ತಷ್ಟು ಹಣವನ್ನು ಕಟ್ಟಿದ್ದಾರೆ. ಇದೆ ಹಣದಿಂದ ಇವರು ಐಷರಾಮಿ ಜೀವನ ನಡೆಸುತ್ತಿದ್ದರು. ಹಣ ಹೆಚ್ಚುತ್ತಿದ್ದಂತೆಯೇ ಇವರು ತಮ್ಮ ಸ್ವಂತಕ್ಕೆ ಚಿನ್ನಾಭರಣ, ಮನೆ, ಆಸ್ತಿಯನ್ನು ಮಾಡಿದ್ದಾರೆ ಎಂದು ಗ್ರಾಮದ ಕೆಲವರು ಆರೋಪಿಸಿದ್ದಾರೆ.
ಹಣ ಹೆಚ್ಚಾಗುತ್ತಿದ್ದಂತೆಯೇ ಇದನ್ನು ಮರುಪಾವತಿಸಲು ಇವರಿಂದ ಸಾಧ್ಯವಾಗದೆ ಪರಿಸ್ಥಿತಿ ಬಿಗಡಾಯಿಸಿದೆ. ಹಣವನ್ನು ಕಟ್ಟಿರುವ ಇವರಿಬ್ಬರ ಮನೆಗೆ ಹಲವರು ಭೇಟಿ ನೀಡಿ ತಮ್ಮ ಹಣವನ್ನು ಮರುಪಾವತಿ ಮಾಡುವಂತೆ ಒತ್ತಡ ಹೇರಿದ್ದಾರೆ. ಆದರೆ ಇವರು ಹಣವನ್ನು ನೀಡಿಲ್ಲ. ಹಣ ಕಟ್ಟಿರುವರಲ್ಲಿ ಹೆಚ್ಚಿನ ಮಹಿಳೆಯರೇ ಇದ್ದಾರೆ. ನಂತರ ಇವರೆಲ್ಲಾ ಒಗ್ಗೂಡಿ ಶನಿವಾರ ಪಟ್ಟಣದ ಪೊಲೀಸ್ ಠಾಣೆಯ ಮುಂಭಾಗ ಜಮಾವಣೆಗೊಂಡಿದ್ದಾರೆ.
ನಂತರ ಪೊಲೀಸರು ಸರಸ್ವತಿ ಹಾಗೂ ಚೌಡಮ್ಮ ಎಂಬ ಇದೇ ಗ್ರಾಮದ ಇಬ್ಬರನ್ನು ಠಾಣೆಗೆ ಕರೆಯಿಸಿಕೊಂಡು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಇವರಿಬ್ಬರೂ ನಮ್ಮ ಬಳಿ ಈಗ ಇಷ್ಟು ಹಣವಿಲ್ಲ, ಮುಂದಿನ ದಿನಗಳಲ್ಲಿ ಹಂತಹಂತವಾಗಿ ಎಲ್ಲರ ಹಣವನ್ನೂ ವಾಪಸ್ಸು ಮಾಡುವ ಭರವಸೆ ನೀಡಿದ್ದಾರೆ. ನಂತರ ಇಲ್ಲಿಂದ ಗ್ರಾಮಸ್ಥರು ವಾಪಸ್ಸಾಗಿರುವ ಘಟನೆ ಜರುಗಿದೆ.