ಶಿವಮೊಗ್ಗ: ಭದ್ರಾವತಿಯಲ್ಲಿರುವ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಗೆ ಭಾನುವಾರ ಕೇಂದ್ರದ ಭಾರೀ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಭೇಟಿ ನೀಡಿ ಖುದ್ದು ಪರಿಶೀಲನೆ ನಡೆಸಿದರು.
ನವದೆಹಲಿಯಿಂದ ಬೆಳಗ್ಗೆಯೇ ಭದ್ರಾವತಿಯ ಕಾರ್ಖಾನೆ ತಲುಪಿದ ಕೇಂದ್ರ ಸಚಿವರು ಬಹಳ ಹೊತ್ತು ಇಡೀ ಕಾರ್ಖಾನೆಯನ್ನು ಸುತ್ತು ಹಾಕಿ ಪರಿಶೀಲನೆ ನಡೆಸಿದರು. ಮುಖ್ಯವಾಗಿ ಯಂತ್ರೋಪಕರಣಗಳ ಕ್ಷಮತೆ, ಅವುಗಳ ಸದ್ಯದ ಸ್ಥಿತಿ, ಆಡಳಿತ ವ್ಯವಸ್ಥೆ, ಕಾರ್ಮಿಕರ ಸ್ಥಿತಿಗತಿಗಳ ಬಗ್ಗೆ ಬಗ್ಗೆ ಸುದೀರ್ಘ ಪರಿಶೀಲನೆ ನಡೆಸಿದರು.
ಭಾರತೀಯ ಉಕ್ಕು ಪ್ರಾಧಿಕಾರದ ಅಧ್ಯಕ್ಷ ಅಮರೆಂದು ಪ್ರಕಾಶ್ ಸೇರಿದಂತೆ ಉಕ್ಕು ಸಚಿವಾಲಯದ ಉನ್ನತ ಅಧಿಕಾರಿಗಳ ಜತೆ ಕೇಂದ್ರ ಸಚಿವರು ಕಾರ್ಖಾನೆಯ ವಿಸ್ತೃತ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಕಾರ್ಖಾನೆಯ ಹಿರಿಯ ಅಧಿಕಾರಿಗಳು, ತಾಂತ್ರಿಕ ಸಿಬ್ಬಂದಿ ಸಚಿವರಿಗೆ ಯಂತ್ರಗಳ ಸದ್ಯದ ಪರಿಸ್ಥಿತಿಯ ಬಗ್ಗೆ ಮಾಹಿತಿ ನೀಡಿದರು.
ಬಳಿಕ ಈ ಬಗ್ಗೆ ಮಾಹಿತಿ ನೀಡಿದ ಉಕ್ಕು ಸಚಿವರು; ಹಿಂದೆ ಭದ್ರಾವತಿ, ಶಿವಮೊಗ್ಗ ಜಿಲ್ಲೆಗೆ ಮಾತ್ರವಲ್ಲ, ಇಡೀ ಕರ್ನಾಟಕದ ಕೀರ್ತಿ, ಗರಿಮೆಗೆ ಹೆಗ್ಗುರುತಾಗಿತ್ತು ಈ ಕಾರ್ಖಾನೆ. ಸರ್ ಎಂ ವಿಶ್ವೇಶ್ವರಯ್ಯ ಅವರು ಸ್ಥಾಪನೆ ಮಾಡಿದ ಕಾರ್ಖಾನೆ ಇದು.ಮೈಸೂರು ಮಹಾರಾಜರ ಕೊಡುಗೆ ಇದು. ಮೈಸೂರು ಮಹಾರಾಜರಾಗಿದ್ದ ಕೃಷ್ಣರಾಜ ಒಡೆಯರ್ ಅವರ ಮಾರ್ಗದರ್ಶನದಲ್ಲಿ ಸರ್ ಎಂ ವಿಶ್ವೇಶ್ವರಯ್ಯ ಅವರು ೧೯೨೩ರಲ್ಲಿ ಸ್ಥಾಪನೆ ಮಾಡಿದ್ದರು. ಇಂತಹ ಪರಂಪರೆ ಇರುವ ಕಾರ್ಖಾನೆ, ಲಕ್ಷಾಂತರ ಜನರಿಗೆ ಅನ್ನ ಕೊಟ್ಟ ಕಾರ್ಖಾನೆ, ಶಿವಮೊಗ್ಗ ಮತ್ತು ಕರ್ನಾಟಕದ ಹೆಮ್ಮೆ ಆಗಿದ್ದ ಈ ಕಾರ್ಖಾನೆಯನ್ನು ಉಳಿಸಲು ಪ್ರಯತ್ನ ಆಗಬೇಕಿದೆ ಎಂದು ಹೇಳಿದರು.