ಬೆಂಗಳೂರು: ನಮ್ಮ ಪಕ್ಷ ಇಷ್ಟು ಹಾಳಾಗಲು ಕಾರಣ ಪಕ್ಷ ವಿರೋಧಿ ಚಟುವಟಿಕೆ ಮಾಡಿದವರ ಮೇಲೆ ಕ್ರಮ ತೆಗೆದುಕೊಳ್ಳದಿರುವುದು. ಪಕ್ಷ ವಿರೋಧಿಗಳಿಗೆ ಮಣೆ ಹಾಕುತ್ತಾರೆ ಎಂದು ಮಾಜಿ ಸಿಎಂ ಸದಾನಂದ ಗೌಡ ಕಿಡಿಕಾರಿದ್ದಾರೆ.
ಪಕ್ಷ ವಿರೋಧಿಗಳನ್ನು ಪಕ್ಷದಿಂದ ದೂರ ಇಡಬೇಕು. ನಾನು ಪಕ್ಷದ ಅಧ್ಯಕ್ಷನಾಗಿದ್ದ ಜನಾರ್ದನ ರೆಡ್ಡಿ, ರೇಣುಕಾಚಾರ್ಯ, ಯತ್ನಾಳ್ ಅವರನ್ನ ಸಸ್ಪೆಂಡ್ ಮಾಡಿದ್ದೇನೆ. ಎಷ್ಟು ದೊಡ್ಡವರಾಗಿದ್ರೂ ಪಕ್ಷ ವಿರೋಧಿ ಆದವರನ್ನು ಬಿಡಬೇಕು ಎಂದು ಅವರು ಹೇಳಿದರು.
ನಾನು ಮೊನ್ನೆ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರ ಜೊತೆ ಇದೇ ವಿಚಾರ ಚರ್ಚೆ ಮಾಡಿದ್ದೇನೆ. ತಪ್ಪು ಮಾಡಿದವರ ವಿರುದ್ಧ ಕ್ರಮ ತೆಗೆದುಕೊಳ್ಳುವುದರಿಂದ ಪಕ್ಷದ ಸಂಘಟನೆಗೆ ಆಕ್ಸಿಲರೇಟರ್ ಕೊಟ್ಟಂತೆ ಆಗ್ತಿತ್ತು. ನಾನು ಅಧ್ಯಕ್ಷ ಆಗಿದ್ದಾಗ ಯಡಿಯೂರಪ್ಪ ಅವರದ್ದು ಒಂದು ಗುಂಪು, ಅನಂತ್ ಕುಮಾರ್ ಅವರದ್ದು ಒಂದು ಗುಂಪು ಇತ್ತು. ನಾನು ಯಾವ ಗುಂಪನ್ನೂ ಸೇರದೆ ಕೆಲಸ ಮಾಡಿದೆ. ನನ್ನನ್ನು ದೂರ ಮಾಡಿದರು ಎಂದು ಹೇಳಿದರು.
ನಾನು ಭ್ರಷ್ಟಾಚಾರ ರಹಿತ ಆಡಳಿತ ಮಾಡಿದೆ. ಸಕಾಲವನ್ನು ಜಾರಿಗೆ ತಂದು ಕೆಲಸ ಮಾಡಿದೆ. ಜನರಿಗೆ ಸಕಾಲದಲ್ಲಿ ಸೇವೆ ಸಿಗುವ ಕೆಲಸ ಮಾಡಿದೆ. ಆದರೆ ನಂತರ ಬಂದ ಬಿಜೆಪಿಯವರು, ಕಾಂಗ್ರೆಸ್ ಅವರು ಅದನ್ನು ಮಾಡಿದ್ರಾ ಇವರಿಂದಲೇ ಭ್ರಷ್ಟಾಚಾರ ಆಡಳಿತ ಆರಂಭವಾಯಿತು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.