ಶ್ರೀನಗರ: ಅಮರನಾಥ ಯಾತ್ರೆಗೆ ಮೊದಲ ತಂಡ ಕಾಶ್ಮೀರದ ಗಂಡೇರಬಾಲ್ ಜಿಲ್ಲೆಯ ಬಾಲ್ಟಾಲ್ ಬೇಸ್ ಕ್ಯಾಂಪ್ ನಿಂದ ಇಂದು ಬೆಳಿಗ್ಗೆ ಪ್ರಯಾಣ ಆರಂಭಿಸಿದೆ.
ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಶುಕ್ರವಾರ, ಭಗವತಿ ನಗರದಲ್ಲಿರುವ ಶಿಬಿರದಲ್ಲಿ ಚಾಲನೆ ನೀಡಿದ್ದರು.
ದಕ್ಷಿಣ ಕಾಶ್ಮೀರದಲ್ಲಿನ ಹಿಮಾಲಯ ಪರ್ವತದ 3,880 ಮೀಟರ್ ಎತ್ತರದಲ್ಲಿನ ಗುಹೆಯೊಳಗಿರುವ ಶಿವನ ದರ್ಶನ ಪಡೆಯಲು 3,400 ಯಾತ್ರಿಗಳ ಮೊದಲ ತಂಡ, ಭಾರಿ ಭದ್ರತೆಯೊಂದಿಗೆ ಬಾಲ್ಟಾಲ್ ಬೇಸ್ ಕ್ಯಾಂಪ್ ನಿಂದ ಪ್ರಯಾಣ ಆರಂಭಿಸಿತು.
ಈ ಕುರಿತು ಟ್ವೀಟ್ ಮಾಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ಗೃಹ ಇಲಾಖೆ ಭಕ್ತಾಧಿಗಳಿಗೆ ಅಗತ್ಯ ಎಲ್ಲ ಸೌಕರ್ಯಗಳನ್ನು ಗೃಹ ಇಲಾಖೆ ಮಾಡಿದೆ. ಶುಭಾಶಯಗಳು ಎಂದು ಹೇಳಿದ್ದಾರೆ.
62 ದಿನದ ಈ ಯಾತ್ರೆಯಲ್ಲಿ ಒಂದು ಕ್ಯಾಂಪ್ ನಿಂದ ಯಾತ್ರಾರ್ಥಿಗಳು 13 ಕಿಲೋ ಮೀಟರ್ ದುರ್ಗಮ ಪರ್ವತ ಹಾದಿಯನ್ನು ಕ್ರಮಿಸಬೇಕಿದೆ. ಇನ್ನೊಂದು ಅನಂತನಾಗ್ ಜಿಲ್ಲೆಯ ನೂನ್ವಾನ್–ಪಹಲ್‌ಗಾಮ್ ನ ಸಾಂಪ್ರದಾಯಿಕ 48 ಕಿ.ಮೀ. ದೂರದ ಮಾರ್ಗ ಕ್ರಮಿಸಬೇಕಿದೆ.
ಸಿಆರ್ ಪಿಎಫ್ ಪೊಲೀಸರು ಯಾತ್ರಿಗಳ ತಂಡಕ್ಕೆ ಬೆಂಗಾವಲಾಗಿ ಭದ್ರತೆ ಒದಗಿಸಿದ್ದಾರೆ. ಸೇನೆ, ಜಮ್ಮು ಮತ್ತು ಕಾಶ್ಮೀರದ ಪೊಲೀಸರು ಯಾತ್ರೆ ಸಾಗುವ ಹಾದಿಯುದ್ದಕ್ಕೂ ರಕ್ಷಣೆಗೆ ಸಜ್ಜಾಗಿದ್ದಾರೆ.