ಮೈಸೂರು: ವೈದ್ಯರು ತುಂಬಾ ಒತ್ತಡದಿಂದ ಕೆಲಸ ಮಾಡುತ್ತಿದ್ದು ಸಾಮಾನ್ಯ ಮನುಷ್ಯರಿಗಿಂತ ವೈದ್ಯರ ಆಯಸ್ಸು ೫ ರಿಂದ ೧೦ ವರ್ಷ ಕಡಿಮೆಯಾಗುತ್ತಿದೆ ಎಂದು ಜಯದೇವ ಹೃದ್ರೋಗ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಕೆ.ಎಸ್. ಸದಾನಂದ್ ಆತಂಕ ವ್ಯಕ್ತಪಡಿಸಿದರು.
ಮೈಸೂರು ಜಯದೇವ ಆಸ್ಪತ್ರೆಯಲ್ಲಿ ವೈದ್ಯರ ದಿನಾಚರಣೆ ಅಂಗವಾಗಿ ಕೇಕ್ ಕತ್ತರಿಸಿ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು ಬಹುತೇಕ ವೈದ್ಯರು ದಿನದಲ್ಲಿ ೧೨ ಗಂಟೆಗಿಂತಲೂ ಹೆಚ್ಚು ಸಮಯ ಕೆಲಸ ಮಾಡುತ್ತಾರೆ.
ಹಲವಾರು ವೈದ್ಯರು ಮಾನಸಿಕ ಒತ್ತಡಕ್ಕೆ ಒಳಗಾಗಿ ಅಧಿಕ ರಕ್ತದೊತ್ತಡ, ಸಕ್ಕರೆ ಖಾಯಿಲೆಯಿಂದ ಬಳಲುತ್ತಿದ್ದಾರೆ. ಕೆಲವು ವೈದ್ಯರು ಆರೋಗ್ಯ ತಪಾಸಣೆಯನ್ನು ಮಾಡಿಸಿಕೊಳ್ಳದೆ ಖಾಯಿಲೆ ಬಂದಾಗ ಬರುತ್ತಾರೆ. ವೈದ್ಯರ ವೈಯಕ್ತಿಕ ಬದುಕಿಗೆ ಸಮಯವೇ ಇಲ್ಲದಂತಾಗಿದೆ. ವೈದ್ಯರು ಮೊದಲು ನಿಮ್ಮ ನಿಮ್ಮ ಆರೋಗ್ಯದ ಕಡೆ ಗಮನವಿಟ್ಟು ವ್ಯಾಯಾಮ, ಯೋಗ, ನಿಗದಿತ ಸಮಯಕ್ಕೆ ಊಟ ಮಾಡುವುದರೊಂದಿಗೆ ಆಗಾಗ್ಗೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು.
ಪ್ರತಿಯೊಬ್ಬ ವೈದ್ಯರು ರೋಗಿಯ ಪ್ರಾಣ ಉಳಿಸಲು ಪ್ರಯತ್ನ ಪಡುತ್ತಾರೆ. ರೋಗಿಗಳಿಗೂ ಸಹ ವೈದ್ಯರ ಮೇಲೆ ಹೆಚ್ಚು ನಿರೀಕ್ಷೆ ಇರುತ್ತದೆ. ಆದರೆ ರೋಗಿ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟರೆ ಸಂಬಂಧಿಕರು ವೈದ್ಯರ ಮೇಲೆ ಹಲ್ಲೆ ಮಾಡುವುದು, ಕೋರ್ಟಿಗೆ ಎಳೆಯುವುದು ಸರಿಯಲ್ಲ. ಆದ್ದರಿಂದ ರೋಗಿಗಳು ವೈದ್ಯರ ಇತಿಮಿತಿಗಳನ್ನು ಅರ್ಥ ಮಾಡಿಕೊಂಡು ಸಹಕರಿಸಬೇಕು. ರೋಗಿ ಮತ್ತು ವೈದ್ಯರ ನಡುವೆ ಉತ್ತಮ ಭಾಂದವ್ಯ ಇರಬೇಕು ಎಂದರು.
ಈ ಸಂದರ್ಭದಲ್ಲಿ ಡಾ. ದಿನೇಶ್, ಡಾ. ಹರ್ಷಬಸಪ್ಪ, ಡಾ. ರಜಿತ್, ಡಾ. ಶ್ರೀನಿಧಿ ಹೆಗ್ಗಡೆ, ಡಾ. ಜಯಪ್ರಕಾಶ್, ಡಾ. ಕುಮಾರ್, ಡಾ. ಶ್ರೀಮಂತ್, ಡಾ. ಅಶ್ವಿನಿ, ಡಾ. ಸ್ನೇಹಲ್, ಡಾ. ರಾಘವೇಂದ್ರ, ಹಿರಿಯ ಶುಶ್ರೂಷಾಧಿಕಾರಿ ಹರೀಶ್‌ಕುಮಾರ್, ನರ್ಸಿಂಗ್ ಅಧೀಕ್ಷಕಿ ಯೋಗಲಕ್ಷ್ಮಿ, ಯೋಗಾನಂದ, ರಮೇಶ್ ಹಾಜರಿದ್ದರು.