ಹೊಸದಿಲ್ಲಿ : ಕೇಂದ್ರ ಸರ್ಕಾರ ಮೂರು ಹೊಸ ಕ್ರಿಮಿನಲ್ ಕಾನೂನುಗಳು ಜಾರಿಗೊಂಡಿರುವ ಬೆನ್ನಿಗೇ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿರುವ ಹಿರಿಯ ಕಾಂಗ್ರೆಸ್ ನಾಯಕ ಪಿ.ಚಿದಂಬರಂ ಅವರು, ಇದು ಅಸ್ತಿತ್ವದಲ್ಲಿರುವ ಕಾನೂನುಗಳ ಬುಲ್ಡೋಜಿಂಗ್‌ನ ಮತ್ತು ಅವುಗಳ ಬದಲಿಗೆ ಸಾಕಷ್ಟು ಚರ್ಚೆಯಿಲ್ಲದೆ ಹೊಸ ಮೂರು ಮಸೂದೆಗಳನ್ನು ತಂದಿರುವ ಇನ್ನೊಂದು ಪ್ರಕರಣವಾಗಿದೆ ಎಂದು ಹೇಳಿದ್ದಾರೆ.
ದೀರ್ಘಾವಧಿಯಲ್ಲಿ ಈ ಕಾನೂನುಗಳನ್ನು ಸಂವಿಧಾನ ಮತ್ತು ಕ್ರಿಮಿನಲ್ ನ್ಯಾಯಶಾಸ್ತ್ರದ ಆಧುನಿಕ ತತ್ವಗಳಿಗೆ ಅನುಗುಣವಾಗಿಸಲು ಮತ್ತಷ್ಟು ಬದಲಾವಣೆಗಳನ್ನು ಮಾಡಬೇಕಾಗುತ್ತದೆ ಎಂದು ಚಿದಂಬರಂ ‘ಎಕ್ಸ್’ ನಲ್ಲಿ ಪೋಸ್ಟ್ ಮಾಡಿದ್ದಾರೆ.
ಹೊಸ ಕಾನೂನುಗಳು ಎಂದು ಹೇಳಿಕೊಳ್ಳಲಾಗಿರುವ ಇವು ಶೇ.೯೦ರಷ್ಟು ಕಟ್,ಕಾಪಿ ಅಂಡ್ ಪೇಸ್ಟ್ ಕೆಲಸವಾಗಿವೆ. ಅಸಿತ್ವದಲ್ಲಿದ್ದ ಮೂರು ಕಾನೂನುಗಳಿಗೆ ಕೆಲವು ತಿದ್ದುಪಡಿಗಳನ್ನು ತಂದು ಮಾಡಬಹುದಾಗಿದ್ದ ಕೆಲಸದ ಬದಲು ವ್ಯರ್ಥ ಕಸರತ್ತು ನಡೆಸಲಾಗಿದೆ ಎಂದಿದ್ದಾರೆ.
ಹೊಸ ಕಾನೂನುಗಳಲ್ಲಿ ಕೆಲವು ಸುಧಾರಣೆಗಳಿವೆ ಮತ್ತು ನಾವು ಅವುಗಳನ್ನು ಸ್ವಾಗತಿಸಿದ್ದೇವೆ. ಅವುಗಳನ್ನು ತಿದ್ದುಪಡಿಗಳನ್ನಾಗಿ ತರಬಹುದಿತ್ತು.ಇನ್ನೊಂದೆಡೆ ಈ ಕಾನೂನುಗಳಲ್ಲಿ ಹಿನ್ನಡೆಯನ್ನುಂಟು ಮಾಡುವ ಹಲವಾರು ನಿಬಂಧನೆಗಳಿವೆ. ಕೆಲವು ಬದಲಾವಣೆಗಳು ಪ್ರಾಥಮಿಕವಾಗಿ ಅಸಾಂವಿಧಾನಿಕವಾಗಿವೆ ಎಂದೂ ಚಿದಂಬರಂ ಹೇಳಿದ್ದಾರೆ.