Sunday, April 20, 2025
Google search engine

Homeಸ್ಥಳೀಯಕುಡಿಯುವ ನೀರು, ಮೇವಿಗೆ ತೊಂದರೆಯಾಗಬಾರದು

ಕುಡಿಯುವ ನೀರು, ಮೇವಿಗೆ ತೊಂದರೆಯಾಗಬಾರದು


ಮೈಸೂರು: ಮುಂದಿನ ದಿನಗಳಲ್ಲಿ ಮುಂಗಾರು ಮಳೆ ಕೈಕೊಟ್ಟರೆ ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಬೇಕು. ಮೇವು, ಕುಡಿಯುವ ನೀರಿನ ಲಭ್ಯತೆಗೆ ತಕ್ಕಂತೆ ಮಧ್ಯಂತರ ಪ್ಲಾನ್ ಮಾಡಿಕೊಂಡು ನಿರ್ವಹಣೆ ಮಾಡಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯೂ ಆದ ಸರ್ಕಾರದ ಪ್ರಧಾನ ಕಾರ್ಯದರ್ಶಿ ಎಸ್.ಸೆಲ್ವಕುಮಾರ್ ಸೂಚಿಸಿದರು.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ನಡೆದ ಜಿಲ್ಲಾ ಮಟ್ಟದ ಮಾಸಿಕ ಕೆಡಿಪಿ ಸಭೆ, ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಮುಂಗಾರು ಮಳೆ ಬರುವ ಮುನ್ಸೂಚನೆ ಇದ್ದು, ಒಂದು ವೇಳೆ ಕೈಕೊಟ್ಟರೆ ಬೇರೆ ಬೇರೆ ಪರ್ಯಾಯ ಕ್ರಮ ಕೈಗೊಳ್ಳಬೇಕು. ಯಾವುದೇ ಪಟ್ಟಣ, ಹಳ್ಳಿಗಳಲ್ಲಿ ನೀರಿನ ಹಾಹಾಕಾರ ಇರದಂತೆ ನೋಡಿಕೊಳ್ಳಬೇಕು ಎಂದು ತಾಕೀತು ಮಾಡಿದರು.ಜಿಲ್ಲಾಧಿಕಾರಿ ಕೆ.ವಿ.ರಾಜೇಂದ್ರ ಮಾತನಾಡಿ, ಜಿಲ್ಲೆಯಲ್ಲಿ ೧೩ ಸ್ಥಳೀಯ ಸಂಸ್ಥೆಗಳು, ಒಂದು ನಗರಪಾಲಿಕೆ, ೨೫೦ ಗ್ರಾಪಂಗಳಿದ್ದು, ಆ.೧೫ರೊಳಗೆ ನೀರಿನ ಸಮಸ್ಯೆ ಉಂಟಾಗಲ್ಲ. ಒಂದು ವೇಳೆ ಮಳೆ ಬಾರದಿದ್ದರೆ ಕಬಿನಿ ಮತ್ತು ಕೆಆರ್‌ಎಸ್ ಡೆಡ್‌ಸ್ಟೋರೇಜ್‌ನಲ್ಲಿ ನೀರು ಪಂಪಿಂಗ್ ಮಾಡಬಹುದು. ಹಾಗಾಗಿ, ಸಾರ್ವಜನಿಕರಲ್ಲಿ ನೀರು ಬಳಕೆ ಕುರಿತು ಜಾಗೃತಿ ಮೂಡಿಸಲಾಗುವುದು. ಏಪ್ರಿಲ್, ಮೇ ತಿಂಗಳಲ್ಲಿ ಶೇ.೩೫ರಷ್ಟು ಮಳೆ ಕೊರತೆಯಾಗಿರುವ ಕಾರಣ ನೀರಿನ ಪ್ರಮಾಣ ಕಡಿಮೆಯಾಗಿದೆ. ಮೇವು ಸಾಕಷ್ಟು ಇರುವ ಕಾರಣ ಸಮಸ್ಯೆಯಾಗಲ್ಲ ಎಂದರು.
ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ ಕಾರ್ಯಪಾಲಕ ಅಭಿಯಂತರ ವಿ.ಸುರೇಶ್‌ಬಾಬು ಮಾತನಾಡಿ, ಮುಂದಿನ ೧ ದಿನಗಳು ಮಳೆ ಬರದಿದ್ದಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಪರ್ಯಾಯ ವ್ಯವಸ್ಥೆ ಮಾಡಲು ಸ್ಥಳ ಪರಿಶೀಲನೆ ನಡೆಸಿ ಕುಡಿಯುವ ನೀರಿಗೆ ತೊಂದರೆಯಾಗದಂತೆ ತುರ್ತು ೭೯ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ೧೧೦.೬೨ ಕೋಟಿ ರೂ.ವೆಚ್ಚದ ಕ್ರಿಯಾಯೋಜನೆ ತಯಾರು ಮಾಡಲಾಗಿದೆ. ಜಲಜೀವನ್ ಮಿಷನ್ ಯೋಜನೆಯಡಿ ೧೯೦೬ ಕಾಮಗಾರಿಗಳಿಗೆ ಟೆಂಡರ್ ಕರೆದು, ೧೯೨೧ ಕಾಮಗಾರಿಗಳಿಗೆ ವರ್ಕ್ ಆರ್ಡರ್ ಕೊಡಲಾಗಿದೆ. ಈಗಾಗಲೇ ೧೨೧೫ ಕಾಮಗಾರಿ ಪ್ರಾರಂಭವಾಗಿ, ೬೫೦ ಮುಗಿದಿದೆ ಎಂದರು.
ಶೇ.೮ರಷ್ಟು ಮಳೆ ಕೊರತೆ: ಕೃಷಿ ಇಲಾಖೆ ಜಂಟಿ ನಿರ್ದೇಶಕರು ಮಾತನಾಡಿ, ಜಿಲ್ಲೆಯಲ್ಲಿ ಜೂನ್ ತಿಂಗಳಲ್ಲಿ ೨೯೦ ಮಿ.ಮೀನಲ್ಲಿ ೨೬೭.೩ ಮಿ.ಮೀ ಆಗಿದ್ದು, ೨೨.೮ ಕೊರತೆಯಾಗಿದೆ. ಶೇಖಡವಾರು ಶೇ.೮ರಷ್ಟು ಮಳೆ ಕೊರತೆಯಾಗಿದೆ. ಹುಣಸೂರು, ಮೈಸೂರು, ಪಿರಿಯಾಪಟ್ಟಣ, ಸರಗೂರು ಭಾಗಗಳಲ್ಲಿ ಮಳೆ ಕೊರತೆಯಾಗಿರುವ ಕಾರಣ ಹೊಗೆಸೊಪ್ಪು ಬೆಳೆ ಮೇಲೆ ತೊಂದರೆಯಾಗಬಹುದು. ಕಳೆದ ಬಾರಿಯಂತೆ ಈ ಬಾರಿ ಜ್ಯೋತಿ ಭತ್ತಕ್ಕೆ ಬೇಡಿಕೆ ಇರುವ ಕಾರಣ ೧೦ ಸಾವಿರ ಕ್ವಿಂಟಾಲ್ ಭತ್ತಕ್ಕೆ ಇಂಡೆಂಟ್ ಹಾಕಲಾಗಿದೆ. ನಕಲಿ ಬಿತ್ತನೆ ಬೀಜ ಮಾರಾಟ ಮಾಡದಂತೆ ಅಗತ್ಯ ಕ್ರಮಕೈಗೊಳ್ಳಲಾಗಿದೆ. ವಿಚಕ್ಷಣ ದಳದವರು ಪರಿಶೀಲಿಸಿ ಪತ್ತೆ ಹಚ್ಚುತ್ತಿದ್ದಾರೆ. ಯೂರಿಯಾ, ಡಿಎಪಿ, ಎನ್‌ಪಿಕೆ ಕಾಂಪ್ಲೆಕ್ಸ್ ರಸಗೊಬ್ಬರಗಳ ಕೊರತೆ ಇಲ್ಲವೆಂದು ತಿಳಿಸಿದರು.
ಆರು ತಿಂಗಳ ಮುನ್ನವೇ ನೇಮಕ ಮಾಡಿ: ಜಿಲ್ಲೆಯ ಯಾವುದೇ ಅಂಗನವಾಡಿ ಕೇಂದ್ರಗಳಲ್ಲಿ ಕಾರ್ಯಕರ್ತೆಯರು, ಸಹಾಯಕಿಯರ ಹುದ್ದೆ ಖಾಲಿ ಇರದಂತೆ ನೋಡಿಕೊಳ್ಳಲು ಆರು ತಿಂಗಳ ಮುನ್ನವೇ ನಿವೃತ್ತಿಯಾಗುವವರ ಪಟ್ಟಿ ತಯಾರಿಸಿ ನೇಮಕಾತಿಗೆ ಕ್ರಮವಹಿಸಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದರು.
ಶೀಘ್ರದಲ್ಲೇ ಸಭೆ: ಡಾ.ಬಿ.ಆರ್.ಅಂಬೇಡ್ಕರ್ ಭವನ ಕಾಮಗಾರಿ ಪೂರ್ಣಗೊಳಿಸಲು ಅಗತ್ಯವಿರುವ ೨೦.೬೬ ಕೋಟಿ ರೂ.ಅನುದಾನ ಬೇಕಿದ್ದು, ಇದನ್ನು ನಿರ್ವಹಣೆ ಮಾಡುವುದು ಸೇರಿದಂತೆ ಯಾವ ರೀತಿ ಮಾಡಬೇಕೆಂಬುದರ ಬಗ್ಗೆ ಶೀಘ್ರದಲ್ಲೇ ಸಭೆ ನಡೆಸಲು ಸಚಿವರ ಗಮನಕ್ಕೆ ತರಲಾಗಿದೆ. ಈಗಾಗಲೇ ೧೪.೬೬ ಕೋಟಿ ರೂ.ಖರ್ಚಾಗಿದ್ದು, ಇನ್ನೂ ೨೦.೬೬ ಕೋಟಿ ರೂ.ಅಗತ್ಯವಿದೆ. ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರು ಬೆಂಗಳೂರಿನ ಅಂಬೇಡ್ಕರ್ ಭವನದಲ್ಲಿ ಇರುವ ಮ್ಯೂಸಿಯಂ ಮಾದರಿಯಲ್ಲಿ ಇಲ್ಲಿಯೂ ಮಾಡುವ ಕುರಿತು ಹೇಳಿದ್ದಾರೆ. ಅದಕ್ಕಾಗಿ ಇಲಾಖೆ ಕಾರ್ಯದರ್ಶಿ, ಆಯುಕ್ತರು, ಮುಖ್ಯ ಇಂಜಿನಿಯರ್ ಸೇರಿದಂತೆ ಸಂಬಂಧಿಸಿದ ಅಧಿಕಾರಿಗಳ ಸಭೆ ನಡೆಸಿ ಮುಂದಿನ ಕ್ರಮಕೈಗೊಳ್ಳಬೇಕಿದೆ ಎಂದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕೆ.ಎಂ.ಗಾಯತ್ರಿ, ನಗರಪಾಲಿಕೆ ಆಯುಕ್ತ ಜಿ.ಲಕ್ಷ್ಮೀಕಾಂತ್ ರೆಡ್ಡಿ, ಡಿಸಿಎಫ್ ಬಿ.ಬಸವರಾಜ ಹಾಜರಿದ್ದರು.

೫೭ ಲಕ್ಷ ಮಂದಿ ಉಚಿತ ಪ್ರಯಾಣ: ಗೃಹಶಕ್ತಿ ಯೋಜನೆಯಡಿ ಜಿಲ್ಲೆಯಲ್ಲಿ ಜೂ.೧೧ರಿಂದ ಈವರೆಗೆ ೫೭ ಲಕ್ಷ ಮಹಿಳಾ ಪ್ರಯಾಣಿಕರು ಸೌಲಭ್ಯ ಪಡೆದಿದ್ದಾರೆ. ೧೦೭೧ ಬಸ್‌ಗಳಲ್ಲಿ ೭೯೦ ಬಸ್‌ಗಳನ್ನು ಗೃಹಶಕ್ತಿಗೆ ಬಳಸಿಕೊಂಡಿದ್ದು, ೧೨.೫೭ ಕೋಟಿ ರೂ. ಹಣ ಬರಬೇಕಿದೆ ಎಂದು ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಶ್ರೀನಿವಾಸ್ ಹೇಳಿದರೆ, ಜಿಲ್ಲೆಯಲ್ಲಿ ೭,೧೧,೩೧೪ ಬಿಪಿಎಲ್ ಕಾರ್ಡುಗಳಿದ್ದು, ೨೨,೯೯,೬೨೫ ಯೂನಿಟ್‌ಗೆ ಪ್ರತಿ ತಿಂಗಳು ೧೨ ಸಾವಿರ ಮೆಟ್ರಿಕ್ ಟನ್ ಅಗತ್ಯವಿದೆ. ಕಳೆದ ತಿಂಗಳು ಬಂದಿರುವ ಪದಾರ್ಥವನ್ನು ವಿತರಿಸಲಾಗಿದೆ. ಫಲಾನುಭವಿಗಳ ಕಾರ್ಡ್‌ಗಳು ಆಧಾರ್ ಕಾರ್ಡ್‌ಗೆ ಶೇ.೧೦೦ರಷ್ಟು ಲಿಂಕ್ ಆಗಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಜಂಟಿ ನಿರ್ದೇಶಕಿ ಕುಮುದಾ ಶರತ್ ಹೇಳಿದರು.

RELATED ARTICLES
- Advertisment -
Google search engine

Most Popular