ಮಂಡ್ಯ : ಉಚ್ಛ ನ್ಯಾಯಾಲಯದ ಆದೇಶಾನುಸಾರ ಮಂಡ್ಯ ಜಿಲ್ಲಾಡಳಿತ ಪಾಂಡವಪುರ ತಾಲ್ಲೂಕು ಬೇಬಿ ಬೆಟ್ಟದ ಕಲ್ಲು ಗಣಿಗಾರಿಕೆ ಪ್ರದೇಶದಲ್ಲಿ ನಡೆಸಲು ಉದ್ದೇಶಿಸಿರುವ ಟ್ರಯಲ್ ಬ್ಲಾಸ್ಟ್ (ಪ್ರಾಯೋಗಿಕ ಸ್ಪೋಟ) ಬೆಂಬಲಿಸಿ ಕರ್ನಾಟಕ ರಾಜ್ಯ ರೈತಸಂಘ (ರೈತಬಣ) ಇಂದು ಬುಧವಾರ ಕೆಆರ್‌ಎಸ್ ನೀರಾವರಿ ಇಲಾಖೆ ಕಚೇರಿ ಎದುರು ಪ್ರತಿಭಟನೆ ನಡೆಸಲಿದೆ.
ಟ್ರಯಲ್ ಬ್ಲಾಸ್ಟ್ ನಡೆಸುವುದರಿಂದ ಕೆಆರ್‌ಎಸ್ ಜಲಾಶಯದ ಭದ್ರತೆಯ ಬಗ್ಗೆ ತಾಂತ್ರಿಕ ಮಾಹಿತಿಗಳು ದೊರೆಯುತ್ತವೆ. ತಂತ್ರಜ್ಞರು ಮತ್ತು ನ್ಯಾಯಾಲಯದ ಆದೇಶವನ್ನು ವಿನಾ ಕಾರಣ ವಿರೋಧಿಸುವುದು ಸರಿಯಲ್ಲ. ಟ್ರಯಲ್ ಬ್ಲಾಸ್ಟ್‌ನಿಂದ ಸಿಗುವ ಸ್ಪೋಟದ ಪರಿಣಾಮ ಕುರಿತ ಅಂಕಿ ಅಂಶಗಳನ್ನು ನ್ಯಾಯಾಲಯದ ಮುಂದೆ ಇಡಬೇಕು. ಇದರಿಂದ ಸಾರ್ವಜನಿಕರು ಹಾಗೂ ರೈತರಿಗೆ ಸ್ಪಷ್ಟವಾದ ಮಾಹಿತಿ ಸಿಗುತ್ತದೆ. ಯಾವುದೇ ಕಾರಣಕ್ಕೂ ಟ್ರಯಲ್ ಬ್ಲಾಸ್ಟ್‌ನಿಂದ ಹಿಂದೆ ಸರಿಯಬಾರದು. ಇದಕ್ಕೆ ನಮ್ಮ ಸಂಘಟನೆ ಸಂಪೂರ್ಣ ಬೆಂಬಲ ನೀಡುತ್ತದೆ ಎಂದು ಸಂಘಟನೆ ರಾಜ್ಯಾಧ್ಯಕ್ಷ ಇಂಗಲಗುಪ್ಪೆ ಕೃಷ್ಣೇಗೌಡ ತಿಳಿಸಿದ್ದಾರೆ.