ಹತ್ರಾಸ್: ಉತ್ತರ ಪ್ರದೇಶದ ಹತ್ರಾಸ್ ಜಿಲ್ಲೆಯಲ್ಲಿ ಭೋಲೆ ಬಾಬಾ ಸತ್ಸಂಗ ಕಾರ್ಯಕ್ರಮದ ವೇಳೆ ನೂಕುನುಗ್ಗಲಿನಿಂದ ಸಂಭವಿಸಿದ ಕಾಲ್ತುಳಿತದಲ್ಲಿ ಮೃತರ ಸಂಖ್ಯೆ ೧೨೧ಕ್ಕೆ ಏರಿಕೆಯಾಗಿದೆ. ಘಟನೆಯಲ್ಲಿ ೨೮ ಮಂದಿ ಗಾಯಗೊಂಡಿದ್ದಾರೆ.
ಮೃತಪಟ್ಟವರ ಪೈಕಿ ೧೯ ಮಂದಿಯ ಗುರುತು ಇನ್ನಷ್ಟೇ ಪತ್ತೆಯಾಗಬೇಕಿದೆ. ಉತ್ತರ ಪ್ರದೇಶ ಪೊಲೀಸರು ಜು.೦೩ ರಂದು ಘಟನೆ ಸಂಬಂಧ FIR ದಾಖಲಿಸಿದ್ದಾರೆ.
ಘಟನೆ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿರುವ ಉತ್ತರ ಪ್ರದೇಶದ ಮುಖ್ಯ ಕಾರ್ಯದರ್ಶಿ ಮನೋಜ್ ಕುಮಾರ್ ಸಿಂಗ್, ಕಾಲ್ತುಳಿತ ಸಂಭವಿಸಿದ್ದಕ್ಕೆ ಜನದಟ್ಟಣೆಯೂ ಪ್ರಮುಖ ಕಾರಣ ಎಂದು ಹೇಳಿದ್ದಾರೆ.
ಸತ್ಸಂಗ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಸರ್ಕಾರ್ ವಿಶ್ವಹರಿ ಭೋಲೆಬಾಬಾ ಅವರ ಬೆಂಗಾವಲು ವಾಹನಗಳ ಸಂಚಾರಕ್ಕಾಗಿ ಒಂದು ದ್ವಾರವನ್ನು ಆಯೋಜಕರು ಮುಚ್ಚಿದ್ದರಿಂದ ಮತ್ತೊಂದು ದ್ವಾರದ ಮೇಲೆ ಒತ್ತಡ ಹೆಚ್ಚಾಯಿತು. ಜತೆಗೆ, ಭೋಲೆಬಾಬಾ ಅವರಿದ್ದ ವಾಹನದ ಹಿಂದೆ ಭಕ್ತರು ಓಡುತ್ತಿದ್ದರು. ಕೆಲವರು ಸ್ಥಳದಿಂದ ಮಣ್ಣು ಸಂಗ್ರಹಿಸಲು ಮುಗಿಬಿದ್ದಿದ್ದು ಕೂಡ ಕಾಲ್ತುಳಿತಕ್ಕೆ ಕಾರಣವಾಯಿತು ಎಂದು ಸಿಂಗ್ ಹೇಳಿದ್ದಾರೆ.