ಮೈಸೂರು: ಪೊಲೀಸರ ಅನುಕೂಲಕ್ಕಾಗಿ ಔರಾದ್‌ಕರ್ ವರದಿಯನ್ನು ಆದಷ್ಟು ಜಾರಿಗೆ ತರಲು ಪ್ರಯತ್ನಿಸಲಾಗುವುದು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು.
ಕುಟುಂಬ ಸಮೇತ ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿ ಚಾಮುಂಡೇಶ್ವರಿ ದರ್ಶನ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಔರಾದ್ಕರ್ ವರದಿಯನ್ನು ಸಂಪೂರ್ಣವಾಗಿ ಅನುಷ್ಠಾನಗೊಳಿಸಲು ಸಾಧ್ಯವಾಗದು. ಆದರೆ, ಅದರಲ್ಲಿನ ಕೆಲ ಅಂಶಗಳನ್ನು ಸರ್ಕಾರ ಪರಿಗಣಿಸಿ ಜಾರಿಗೆ ತರಲಾಗುವುದು. ಹಿರಿಯ ಪೊಲೀಸ್ ಅಧಿಕಾರಿಗಳಿಗೆ ವಾರದ ರಜೆ ನೀಡುವ ಬಗ್ಗೆ ಪರಿಶೀಲಿಸಿ ಮುಂದಿನ ದಿನಗಳಲ್ಲಿ ಅದನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲಾಗುವುದು.
ರಾತ್ರಿ ಪಾಳಿ ಮಾಡಿದವರಿಗೆ ವಿಶೇಷ ಭತ್ಯೆ ಕೊಡುವ ವಿಚಾರದಲ್ಲೂ ಅದಷ್ಟು ಬೇಗ ತೀರ್ಮಾನ ಕೈಗೊಳ್ಳುತ್ತೇವೆ. ಎಪಿಎಂಸಿ ಕಾಯ್ದೆ ತಿದ್ದುಪಡಿ ವಾಪಾಸ್ ತೆಗೆದು ಕೊಳ್ಳುತ್ತೇವೆ ಎಂದು ತಿಳಿಸಿದರು.
ಬೆಂಗಳೂರು-ಮೈಸೂರು ಹೈವೆಯಲ್ಲಿ ಸುಗಮ-ಸುರಕ್ಷಿತ ಸಂಚಾರಕ್ಕೆ ಯಾವುದೇ ಕ್ರಮವನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ತೆಗೆದು ಕೊಂಡಿಲ್ಲ. ಹೈವೆಯಲ್ಲಿ ಸಂಚಾರ ಸೂಚನ ಫಲಕ ಯಾವುದೂ ಅಳವಡಿಕೆ ಆಗಿಲ್ಲ. ಬೇರೆ ಹೈವೆಗಳ ರೀತಿ ಇಲ್ಲಿ ವ್ಯವಸ್ಥಿತವಾಗಿ ಏನೂ ಮಾಡಿಲ್ಲ. ರಾಜ್ಯದ ಸಂಚಾರ ವಿಭಾಗದ ಎಡಿಜಿಪಿ ನನಗೆ ಈ ಬಗ್ಗೆ ಮೌಖಿಕವಾಗಿ ವರದಿ ಕೊಟ್ಟಿದ್ದಾರೆ. ಹೆದ್ದಾರಿಯಲ್ಲಿ ದರೋಡೆ ಕೂಡ ನಡೆಯುತ್ತಿವೆ. ಇದನ್ನು ತಡೆಯೋಕೆ ಕ್ರಮವಹಿಸಿದ್ದೇವೆ ಎಂದರು.
ಹೆದ್ದಾರಿ ಪ್ರಾಧಿಕಾರಕ್ಕೆ ಟೋಲ್ ವಸೂಲಿ ಬೇಡ ಎಂದು ಸೂಚನೆ ಕೊಟ್ಟಿದ್ದೆವು. ಆದರೂ ಟೋಲ್ ವಸೂಲಿ ಶುರು ಮಾಡಿದ್ದಾರೆ. ಹೆದ್ದಾರಿ ಪ್ರಾಧಿಕಾರ ಕೇಂದ್ರ ಸರಕಾರದ ನಿಯಂತ್ರಣದಲ್ಲಿದೆ. ಅವಸರವಾಗಿ ಹೆದ್ದಾರಿ ಉದ್ಘಾಟನೆ ಮಾಡಿದರು. ರಾಜಕೀಯ ಉದ್ದೇಶದಿಂದ ತರಾತುರಿಯಲ್ಲಿ ಉದ್ಘಾಟನೆ ಮಾಡಿದರು. ಹೀಗಾಗಿ ಇಷ್ಟೆಲ್ಲ ಸಮಸ್ಯೆ ಆಗುತ್ತಿದೆ. ಹೈವೆಯಲ್ಲಿ ಇಷ್ಟು ಬೇಗ ಅಷ್ಟು ಜನ ಸಾಯುತ್ತಾರೆ ಎಂದರೆ ಅದರ ಅರ್ಥ ಬಹಳ ಲೋಪವಾಗಿದೆ. ಡ್ರಿಂಕ್ ಅಂಡ್ ಡ್ರೈವ್ ಪರಿಶೀಲನೆ ಕುರಿತು ಜನರಿಗೆ ತೊಂದರೆ ಆಗದಂತೆ ಸುರಕ್ಷತೆಗೆ ಬೇಕಾದ ಕ್ರಮ ಜರುಗಿಸುತ್ತೇವೆ ಎಂದರು.
ಸಬ್ ಇನ್ಸ್‌ಪೆಕ್ಟರ್ ಹುದ್ದೆ ನೇಮಕಾತಿ ಅಕ್ರಮ ಕುರಿತು ಪ್ರತಿಕ್ರಿಯಿಸಿ, ಅಕ್ರಮ ಕುರಿತ ವಿಚಾರಣೆಯಲ್ಲಿ ನ್ಯಾಯಾಲಯ ಸರಕಾರದ ಅಭಿಪ್ರಾಯ ಕೇಳಿದೆ. ನ್ಯಾಯಾಲಯಕ್ಕೆ ಜು.೫ರಂದು ನಮ್ಮ ಅಭಿಪ್ರಾಯ ಹೇಳುತ್ತೇವೆ ಎಂದರು.
ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ರಾಜ್ಯ ಸರ್ಕಾರದ ವಿರುದ್ಧ ಧರಣಿ ನಡೆಸಲು ಕರೆ ನೀಡಿರುವ ಕುರಿತು ಪ್ರತಿಕ್ರಿಯಿಸಿ, ವಿರೋಧ ಪಕ್ಷದವರನ್ನು ಧರಣಿ ಮಾಡಬೇಡಿ ಎಂದು ಯಾರೂ ಹೇಳಿಲ್ಲ. ಅವರು ಯಾವ ಕಾರಣಕ್ಕೆ ಧರಣಿ ಮಾಡಿದರೂ ನಾವು ಅದಕ್ಕೆ ತಕ್ಕ ಉತ್ತರ ಕೊಡುತ್ತೇವೆ ಎಂದರು.
ರಾಜ್ಯದ ವಿವಿಧ ಇಲಾಖೆಗಳಲ್ಲಿ ೨.೫೦ ಲಕ್ಷ ಹುದ್ದೆಗಳು ಖಾಲಿ ಇವೆ. ಅದನ್ನು ಭರ್ತಿ ಮಾಡುವ ಕಾರ್ಯ ಶುರುವಾಗಿದೆ. ಪೊಲೀಸ್ ಇಲಾಖೆಯಲ್ಲಿ ೧೫ ಸಾವಿರ ಹುದ್ದೆ ಖಾಲಿ ಇದ್ದು, ಮೊದಲ ಹಂತದಲ್ಲಿ ೪ ಸಾವಿರ ಪೊಲೀಸ್ ಪೇದೆ, ೪೦೦ ಸಬ್ ಇನ್ಸ್‌ಪೆಕ್ಟರ್ ಹುದ್ದೆ ಭರ್ತಿ ಮಾಡಲಾಗುವುದು.
-ಡಾ.ಜಿ.ಪರಮೇಶ್ವರ್, ಗೃಹ ಸಚಿವ
ಸೈಬರ್ ಕ್ರೈಂ ತಡೆಗೆ ಕ್ರಮ: ಇತ್ತೀಚಿನ ದಿನಗಳಲ್ಲಿ ದೇಶದಾದ್ಯಂತ ಸೈಬರ್ ಕ್ರೈಮ್ ಹೆಚ್ಚಾಗುತ್ತಿದೆ. ರಾಜ್ಯದಲ್ಲೂ ಸೈಬರ್ ಕ್ರೈಮ್ ಹೆಚ್ಚುತ್ತಿದ್ದು, ಸೈಬರ್ ಕ್ರೈಂ ಹಾಗೂ ಫೇಕ್ ನ್ಯೂಸ್ ತಡೆಗಟ್ಟಲು ರೂಪುರೇಷೆ ಸಿದ್ಧಪಡಿಸಲಾಗುತ್ತಿದೆ. ಸೈಬರ್ ವಿಭಾಗವನ್ನು ಹೆಚ್ಚು ಕ್ರಿಯಾಶೀಲಗೊಳಿಸಲಾಗುವುದು. ರಾಜಕೀಯವಾಗಿ, ಸಮಾಜದ ಶಾಂತಿ ಕದಡಲು ಫೇಕ್ ನ್ಯೂಸ್ ಹಾಕಲಾಗುತ್ತಿದೆ. ಇದನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದ್ದು, ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು.
ಅರಮನೆ, ಸುತ್ತೂರು ಮಠಕ್ಕೆ ಭೇಟಿ: ಗೃಹಸಚಿವ ಡಾ.ಜಿ.ಪರಮೇಶ್ವರ್ ಶನಿವಾರ ಕುಟುಂಬ ಸಮೇತ ಅರಮನೆಗೆ ಭೇಟಿ ನೀಡಿ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಅವರೊಂದಿಗೆ ಸಮಾಲೋಚನೆ ನಡೆಸಿದರು. ಅರಮನೆಗೆ ಭೇಟಿ ನೀಡಿದ ಪರಮೇಶ್ವರ್ ಅವರನ್ನು ಸಾಂಪ್ರದಾಯಿಕವಾಗಿ ಸ್ವಾಗತಿಸಿ, ಪೇಟ ತೊಡಿಸಿ ಗೌರವ ಸಲ್ಲಿಸಲಾಯಿತು. ಬಳಿಕ ಅರಮನೆಯ ಚಾಮುಂಡೇಶ್ವರಿ ಉತ್ಸವ ಮೂರ್ತಿಗೆ ಪೂಜೆ ಸಲ್ಲಿಸಿದರು. ಅಧಿದೇವತೆ ಚಾಮುಂಡೇಶ್ವರಿ ದೇವಿಯ ದರ್ಶನ ಪಡೆದಿದ್ದು ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗಾಗಿ ದೇವಿಯಲ್ಲಿ ಪ್ರಾರ್ಥಿಸಿದ್ದೇನೆ. ಒಡೆಯರ್ ಮನೆತನದವರಿಗೂ ನಮಗೂ ಬಹಳ ವರ್ಷಗಳಿಂದ ಪರಿಚಯವಿದೆ. ಅವರನ್ನು ಭೇಟಿಯಾಗಲು ಮೈಸೂರಿಗೆ ಬಂದಿದ್ದೇನೆ ಎಂದು ತಿಳಿಸಿದರು. ಬಳಿಕ ಚಾಮುಂಡಿಬೆಟ್ಟದ ತಪ್ಪಲಿನ ಸುತ್ತೂರು ಶಾಖಾ ಮಠಕ್ಕೆ ಭೇಟಿ ನೀಡಿ ಸುತ್ತೂರು ಶ್ರೀಗಳ ಆಶೀರ್ವಾದ ಪಡೆದರು.