ಚಾಮರಾಜನಗರ : ಜಿಲ್ಲೆಯ ಎಲ್ಲಾ ಗ್ರಾಮ,ತಾಲೂಕುಗಳ ಕುಡಿಯುವ ನೀರು,ನೈರ್ಮಲ್ಯತೆಗೆ ಹೆಚ್ಚು ಆದ್ಯತೆ ನೀಡಲಾಗುತ್ತದೆ ಎಂದು ಪಶುಸಂಗೋಪನೆ,ರೇಷ್ಮೆ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಹೇಳಿದರು.
ನಗರದ ಜಿಲ್ಲಾ ಪಂಚಾಯಿತಿ ಕೆಡಿಪಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಅವರು ಮಾತನಾಡಿ, ಜಿಲ್ಲೆಯಲ್ಲಿ ಮಳೆಯ ಪ್ರಮಾಣದ ಕೊರತೆ,ಬೆಳೆ ನಷ್ಟದ ಬಗ್ಗೆ ಅಂದಾಜು ಮಾಡಿ ಬೆಳೆ ವಿಮೆ ಬಗ್ಗೆ ರೈತರಿಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಆದಷ್ಟು ಬೇಗ ಅಧಿಕಾರಿಗಳು ಮಾಡಬೇಕು.ಅಲ್ಲದೆ ಬಿತ್ತನೆ ಬೀಜ ಹಾಗೂ ರಸಗೊಬ್ಬರ ಸಮರ್ಪಕವಾಗಿ ಯಾವುದೇ ಕೊರತೆ ಇಲ್ಲದಂತೆ ರೈತರಿಗೆ ವಿತರಣೆಯಾಗಬೇಕು ಎಂದು ತಿಳಿಸಿದರು.ಕೃಷಿ ಅಧಿಕಾರಿಗಳು ರೈತರನ್ನು ಬಿತ್ತನೆ ಬೀಜಗಳಿಗಾಗಿ ಕಚೇರಿಗಳಿಗೆ ಅಲೆದಾಡಿಸಬಾರದು ಹಾಗೂ ಜಿಲ್ಲೆಯ ಪ್ರತಿಯೊಂದು ಗ್ರಾಮಗಳಿಗೆ ಭೇಟಿ ನೀಡಿ ಅದರ ಬಗ್ಗೆ ಮಾಹಿತಿ ನೀಡಬೇಕು.ಕುಡಿಯುವ ನೀರು ಹಾಗೂ ಗ್ರಾಮಗಳ ಸ್ವಚ್ಛತೆ ಬಗ್ಗೆ ತೊಂದರೆಯಾಗದಂತೆ ಖುದ್ದು ಬೇಟಿ ನೀಡಿ ಪರಿಶೀಲಿಸಿ ಕ್ರಮವಹಿಸಬೇಕು.ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಉಳಿದಿರುವ ಹಣವನ್ನು ಹೆಚ್ಚು ಹೆಚ್ಚು ಕುಡಿಯುವ ನೀರಿಗಾಗಿ ಬಳಸಬೇಕು.ಗ್ರಾಮಗಳಲ್ಲಿ ಕೊಳವೆಬಾವಿಗಳ ಕೊರತೆ ಇದ್ದರೆ ಆದಷ್ಟು ಬೇಗ ಅದರ ಬಗ್ಗೆ ಮಾಹಿತಿ ನೀಡಿ ಕ್ರಮವಹಿಸಬೇಕು.ಪ್ರತಿ ಗ್ರಾಮಗಳಲ್ಲಿ ನೀರಿಗಾಗಿ ತಿಂಗಳಿಗೊಮ್ಮೆ ಟ್ಯಾಂಕ್ ಗಳನ್ನು ಸ್ವಚ್ಛಗೊಳಿಸಬೇಕು ಎಂದು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲಾದ್ಯಂತ ಎಷ್ಟು ಕೆರೆಗಳು ಒತ್ತುವರಿಯಾಗಿವೆ ಎಂಬುದನ್ನು ಸರ್ವೇ ಮಾಡಿಸಿ ಆದಷ್ಟು ಬೇಗ ಅದರ ಬಗ್ಗೆ ಮಾಹಿತಿ ನೀಡಬೇಕು.ಕೊಳ್ಳೇಗಾಲ ಎಪಿಎಂಸಿ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದು ಅದನ್ನು ಆದಷ್ಟು ಬೇಗ ಸರಿಪಡಿಸಿ ಎಂದು ತಿಳಿಸಿದರು.ಅಲ್ಲದೆ ಜಲಜೀವನ್ ಮಿಷನ್ ಯೋಜನೆಯಲ್ಲಿ ಸಾಕಷ್ಟು ವ್ಯತ್ಯಾಸಗಳು ಇವೆ ಅದನ್ನು ಮುಂದಿನ ದಿನಗಳಲ್ಲಿ ಇದೇ ರೀತಿ ಸಭೆ ಕರೆದು ಶಾಸಕರೊಡನೆ ಅಗತ್ಯ ಇರುವ ಕಡೆಗಳಲ್ಲಿ ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಮುಂದಿನ ಸಭೆಯಲ್ಲಿ ಹಾಜರಾಗುವ ಅಧಿಕಾರಿಗಳು ತಪ್ಪು ಮಾಹಿತಿ ನೀಡದೆ ಸಂಪೂರ್ಣ ಮಾಹಿತಿಯೊಡನೆ ಸಭೆಗೆ ಆಗಮಿಸಬೇಕು. ಉತ್ತಮ ಕೆಲಸ ಮಾಡುವ ಎಲ್ಲಾ ಅಧಿಕಾರಿಗಳ ಜೊತೆ ನಾನು ಮತ್ತು ನಮ್ಮ ಎಲ್ಲಾ ಶಾಸಕರು ಸಹಕಾರ ನೀಡುತ್ತೇವೆ ಉತ್ತಮ ಕೆಲಸ ಮಾಡಲು ವಿಫಲವಾದ ಅಧಿಕಾರಿಗಳನ್ನು ಬೇರೆಡೆ ಕಳುಹಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಶಾಸಕ ಎಆರ್ ಕೃಷ್ಣಮೂರ್ತಿ ಮಾತನಾಡಿ,ನಮ್ಮ ಕ್ಷೇತ್ರವು ಮೂರು ತಾಲೂಕುಗಳನ್ನು ಹೊಂದಿದ್ದು, ಕ್ಷೇತ್ರದ ಎಲ್ಲಾ ಅಧಿಕಾರಿಗಳು ಕಾನೂನಾತ್ಮಕವಾಗಿ ಕರ್ತವ್ಯ ನಿರ್ವಹಿಸಿ ಇಲ್ಲವಾದಲ್ಲಿ ಕೊಳ್ಳೇಗಾಲ ನಗರಸಭೆಯ ಅಧಿಕಾರಿಗಳಿಗಾದ ಸ್ಥಿತಿ ನಿಮಗೂ ಬರುತ್ತದೆ ಹಾಗೂ ಅಕ್ರಮ ಬಾರ್ ಗಳು,ಕೆರೆ ಒತ್ತುವರಿಗಳು ನಡೆಯದಂತೆ ನೋಡಿಕೊಳ್ಳಬೇಕು ಎಂದರು.
ವಿಧಾನ ಪರಿಷತ್ ಸದಸ್ಯರಾದ ಮರಿತಿಬ್ಬೇಗೌಡ ಅವರು ಮಾತನಾಡಿ,ಪಶು ಸಂಗೋಪನ ಇಲಾಖೆ ಹಾಗೂ ರೇಷ್ಮೆ ಇಲಾಖೆಯಲ್ಲಿ ಅತಿ ಹೆಚ್ಚು ಅಧಿಕಾರಿಗಳ ಕೊರತೆ ಇದೆ ಆದಷ್ಟು ಬೇಗ ನೇಮಕ ಮಾಡಿ ಇಲಾಖೆಗಳ ಕೆಲಸಗಳಿಗೆ ಅನುಕೂಲ ಮಾಡಿಕೊಡಬೇಕು ಎಂದು ಸಚಿವರಿಗೆ ತಿಳಿಸಿದರು.
ಈ ಸಂದರ್ಭದಲ್ಲಿ ಚಾಮರಾಜನಗರ ಶಾಸಕ ಸಿ.ಪುಟ್ಟರಂಗಶೆಟ್ಟಿ,ಕೊಳ್ಳೇಗಾಲ ಶಾಸಕ ಎ.ಆರ್ ಕೃಷ್ಣಮೂರ್ತಿ, ಗುಂಡ್ಲುಪೇಟೆ ಶಾಸಕ ಗಣೇಶ್ ಪ್ರಸಾದ್,ಹನೂರು ಶಾಸಕ ಎಂ.ಆರ್ ಮಂಜುನಾಥ್, ವಿಧಾನಪರಿಷತ್ ಸದಸ್ಯರಾದ ಡಾ.ತಿಮ್ಮಯ್ಯ,ಮರಿತಿಬ್ಬೇಗೌಡ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್, ಜಿಲ್ಲಾ ಪಂಚಾಯತ್ ಸಿಇಒ ಹಾಗೂ ಪ್ರಭಾರ ಜಿಲ್ಲಾಧಿಕಾರಿ ಪೂವಿತ.ಎಸ್, ಅಪರ ಜಿಲ್ಲಾಧಿಕಾರಿ ಗೀತಾಹುಡೇದ,ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಉದೇಶ್, ಬಿ ಆರ್ ಟಿ ಹುಲಿ ಯೋಜನೆಯ ನಿರ್ದೇಶಕಿ ದೀಪ, ಬಂಡೀಪುರ ಹುಲಿ ಯೋಜನೆ ನಿರ್ದೇಶಕ ರಮೇಶ್ ಕುಮಾರ್ ಸೇರಿದಂತೆ ಇತರರಿದ್ದರು.