ಜುಲೈ 8ರಿಂದ ಕೆಆರ್‌ಎಸ್ ವ್ಯಾಪ್ತಿಯ ಎಲ್ಲ ನಾಲೆಗಳಿಗೂ ನೀರು
ಮೈಸೂರು : ಹೆಚ್.ಡಿ.ಕೋಟೆ ತಾಲ್ಲೂಕಿನ ಬೀಚನಹಳ್ಳಿ ಬಳಿಯಿರುವ ಕಬಿನಿ ಜಲಾಶಯಕ್ಕೆ ಒಳಹರಿವು ಹೆಚ್ಚಾಗಿದ್ದು, ಇದೀಗ ಜಲಾಶಯ ಸಂಪೂರ್ಣ ಭರ್ತಿಯಾಗಲು ಕೇವಲ ಮೂರು ಅಡಿಗಳಷ್ಟು ಮಾತ್ರ ಬಾಕಿಯಿದೆ.
ಜತೆಗೆ ಕೊಡಗು ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲೆಯ ಕೆಆರ್‌ಎಸ್ ಜಲಾಶಯದ ಮಟ್ಟವೂ ೧೦೦.೫೦ ಅಡಿ ತಲುಪಿದೆ.
ಕೇರಳದ ವಯನಾಡು ಭಾಗದಲ್ಲಿ ಧಾರಾಕಾರ ಮಳೆಯಾಗುತ್ತಿರುವ ಪರಿಣಾಮ ಕಬಿನಿ ಜಲಾಶಯದ ನೀರಿನ ಮಟ್ಟ ಹೆಚ್ಚಾಗಿದೆ. ಜಲಾಶಯ ಭರ್ತಿಯಾಗುತ್ತಿರುವ ಹಿನ್ನೆಲೆಯಲ್ಲಿ ರೈತರ ಮೊಗದಲ್ಲಿ ಸಂತಸ ಮನೆಮಾಡಿದೆ.
ಪ್ರಸ್ತುತ ಕಬಿನಿ ಜಲಾಶಯದ ನೀರಿನ ಮಟ್ಟ ೨೨೮೧.೫೦ ಅಡಿಗಳಿದ್ದು, ಪೂರ್ಣ ಜಲಾಶಯದ ಮಟ್ಟ ೨೨೮೪ ಅಡಿಗಳಾಗಿದೆ. ಮುಂದಿನ ವಾರ ಜಲಾಶಯ ಸಂಪೂರ್ಣ ಭರ್ತಿಯಾಗುವ ನಿರೀಕ್ಷೆಗಳಿವೆ ಎಂದು ನೀರಾವರಿ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಬರದಿಂದ ತತ್ತರಿಸಿದ್ದ ಮಂಡ್ಯ ಜಿಲ್ಲೆಯ ರೈತರು ಕೆಆರ್‌ಎಸ್ ಜಲಾಶಯ ಸೆಂಚುರಿ ಬಾರಿಸಿದ ಹಿನ್ನೆಲೆ ಸಂತಸಗೊಂಡಿದ್ದು, ಕೃಷಿ ಚಟುವಟಿಕೆಗೆ ಸಿದ್ದರೆ ಮಾಡಿಕೊಳ್ಳುತ್ತಿದ್ದಾರೆ. ಕೊಡಗು ಜಿಲ್ಲೆಯಲ್ಲೂ ವ್ಯಾಪಕವಾಗಿ ಮಳೆಯಾಗುತ್ತಿರುವ ಹಿನ್ನೆಲೆ ಒಳ ಹರಿವು ಹೆಚ್ಚಾಗಿದ್ದು, ಜಲಾಶಯದಲ್ಲಿ ೧೦೦.೫೦ ಅಡಿ ನೀರು ಬಂದಿದೆ. ಜಲಾಶಯದ ಮಟ್ಟ ೧೨೪.೮೦ ಅಡಿಗಳಿದ್ದು, ೧೨ ಸಾವಿರ ಕ್ಯುಸೆಕ್ಸ್ ಒಳ ಹರಿವು ಇದೆ. ಇದೇ ರೀತಿ ಮಳೆ ಮುಂದುವರಿದರೆ ಇನ್ನೊಂದು ವಾರದಲ್ಲಿ ಕೆಆರ್‌ಎಸ್ ಜಲಾಶಯವೂ ಭರ್ತಿಯಾಗಲಿದೆ.

ಜುಲೈ ೮ರಿಂದ ನಾಲೆಗಳಿಗೆ ನೀರು : ಮಂಡ್ಯ ಕೊಡಗು ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೆಆರ್‌ಎಸ್ ಜಲಾಶಯದ ಮಟ್ಟ ೧೦೦ ಅಡಿ ಗಿಂತಲೂ ಹೆಚ್ಚು ಇರುವುದರಿಂದ ಜುಲೈ ೬ ರಂದು ಬೆಂಗಳೂರಿನಲ್ಲಿ ನೀರಾವರಿ ಸಲಹಾ ಸಮಿತಿ ಸಭೆ ನಡೆಸಿ, ಜುಲೈ ೮ ರಿಂದ ನಾಲೆಗಳಿಗೆ ನೀರು ಬಿಡುಗಡೆ ಮಾಡಲಾಗುವುದು ಎಂದು ಕೃಷಿ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್ ಚಲುವರಾಯಸ್ವಾಮಿ ತಿಳಿಸಿದ್ದಾರೆ.
ಕಳೆದ ಸಾಲಿನಲ್ಲಿ ಬರಗಾಲದ ಹಿನ್ನಲೆ ರೈತರ ಬೇಡಿಕೆಯಂತೆ ನೀರು ಹರಿಸಲು ಸಾಧ್ಯವಾಗಿರಲಿಲ್ಲ. ಜಲಾಶಯದಲ್ಲಿ ನೀರಿನ ಮಟ್ಟ ೧೦೦ ಅಡಿ ತಲುಪಿದ ನಂತರ ನೀರು ಹರಿಸುವುದಾಗಿ ಭರವಸೆ ನೀಡಲಾಗಿತ್ತು. ವಿ.ಸಿ.ನಾಲೆ ಆಧುನೀಕರಣ ಕಾಮಗಾರಿ ನಡೆಯುತ್ತಿದ್ದು, ರೈತರಿಗೆ ನೀರು ನೀಡಲು ತೊಂದರೆಯಾಗುತ್ತದೆ ಎಂದು ಹಲವಾರು ದೂರುಗಳು ಕೇಳಿ ಬಂದಿತ್ತು. ಇತ್ತೀಚೆಗೆ ಕಾಮಗಾರಿ ನಡೆಯುತ್ತಿರುವ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ನಾಲೆಗಳಿಗೆ ನೀರು ಹರಿಸಲು ಯಾವುದೇ ತೊಂದರೆಯಾಗದಂತೆ ವ್ಯವಸ್ಥೆ ಮಾಡಿರುವ ಬಗ್ಗೆ ಖಾತ್ರಿ ಪಡಿಸಿಕೊಳ್ಳಲಾಗಿದೆ.
ಜುಲೈ ೬ ರಂದು ನೀರಾವರಿ ಸಲಹಾ ಸಮಿತಿ ಸಭೆ ನಡೆಸಿ ಜುಲೈ ೮ ರಿಂದ ನಾಲೆಗಳಿಗೆ ನೀರು ಬಿಡುಗಡೆ ಮಾಡಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ರೈತರು ತಮ್ಮ ಕೃಷಿ ಚಟುವಟಿಕೆಗಳನ್ನು ಪ್ರಾರಂಭಿಸಿಕೊಂಡು ಉತ್ತಮ ಬೆಳೆ ಬೆಳೆಯಿರಿ. ರೈತರೊಂದಿಗೆ ಸರ್ಕಾರ ಸದಾ ಇದ್ದು, ಅವರ ಶ್ರೇಯೋಭಿವೃದ್ದಿಗೆ ಸದಾ ಚಿಂತಿಸುತ್ತದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನೀರಿನ ಮಟ್ಟದ ವಿವರ
ಕೆಆರ್‌ಎಸ್
ಗರಿಷ್ಠ ಮಟ್ಟ-೧೨೪.೮೦ ಅಡಿ
ಇಂದಿನ ಮಟ್ಟ-೧೦೦.೫೦
ಒಳಹರಿವು-೧೧೧೮೯ ಕ್ಯುಸೆಕ್
ಹೊರ ಹರಿವು-೫೪೦ ಕ್ಯುಸೆಕ್
ಕಬಿನಿ
ಗರಿಷ್ಠ ಮಟ್ಟ-೨೨೮೪ ಅಡಿ
ಇಂದಿನ ಮಟ್ಟ-೨೨೮೦.೩೫
ಒಳಹರಿವು-೬೮೭೪ ಕ್ಯುಸೆಕ್
ಹೊರ ಹರಿವು-೧೩೩೩ ಕ್ಯುಸೆಕ್
ಹೇಮಾವತಿ
ಗರಿಷ್ಠ ಮಟ್ಟ -೨೯೨೨ ಅಡಿ