ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ಜಗತ್ತಿನ ಸಕಲ ಜೀವ ರಾಶಿಗಳು ಆರೋಗ್ಯಯುತವಾಗಿ ಬದುಕಬೇಕಾದರೆ ಅರಣ್ಯ ಸಂಪತ್ತು ಮತ್ತು ಹಸಿರು ಅತ್ಯಂತ ಅವಶ್ಯಕವಾಗಿದ್ದು ಇದನ್ನು ಅರಿತು ಸರ್ವರೂ ಪರಿಸರದ ಉಳಿವಿಗೆ ಕಂಕಣಬದ್ದರಾಗಿ ಕೆಲಸ ಮಾಡಬೇಕು ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶ ಎಸ್.ಚಂದನ್ ಹೇಳಿದರು.
ಸಾಲಿಗ್ರಾಮ ತಾಲೂಕಿನ ಸಕ್ಕರೆ ಗ್ರಾಮದ ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಯ ಆವರಣದಲ್ಲಿ ನಡೆದ ವನ ಮಹೋತ್ಸವದಲ್ಲಿ ಗಿಡಗಳನ್ನ ನೆಟ್ಟು ನೀರೆರೆದ ನಂತರ ನಡೆದ ವೇದಿಕೆ ರ್ಯಕ್ರಮದಲ್ಲಿ ಮಾತನಾಡಿದ ಅವರು ಮನುಷ್ಯನ ದುರಾಸೆಯಿಂದ ಕಾಡಿನ ಪ್ರಾಣಿಗಳು ನಾಡಿಗೆ ಬರುತ್ತಿದ್ದು ಇದನ್ನು ತಪ್ಪಿಸಿ ಸಮತೋಲನ ಕಾಪಾಡಿಕೊಳ್ಳಲು ಪರಿಸರದ ಬಗ್ಗೆ ಪ್ರೀತಿ ಮತ್ತು ಕಾಳಜಿಯನ್ನು ಎಲ್ಲರೂ ಬೆಳೆಸಿಕೊಳ್ಳಬೇಕೆಂದರು.
ಭವಿಷ್ಯದ ದೃಷ್ಠಿಯಿಂದ ಅರಣ್ಯ ರಕ್ಷಣೆ ಅತ್ಯಂತ ಅಗತ್ಯವಾಗಿದ್ದು ಈ ದಿಸೆಯಲ್ಲಿ ಸರ್ವರೂ ಪ್ಲಾಸ್ಟಿಕ್ ನಿರ್ಮೂಲನೆಗೆ ಪಣತೊಟ್ಟು ಗಿಡ ನೆಡುವ ಹವ್ಯಾಸ ಬೆಳೆಸಿಕೊಂಡು ಇತರರಿಗೂ ಪ್ರೇರಣೆಯಾಗಬೇಕೆಂದು ಸಲಹೆ ನೀಡಿದರು.
ಪಾಶ್ಚಾತ್ಯ ಶೈಲಿಯಲ್ಲಿ ಕೇಕ್ ಕತ್ತರಿಸಿ ಹುಟ್ಟು ಹಬ್ಬ ಆಚರಣೆ ಮಾಡಿಕೊಳ್ಳುವ ಬದಲು ತಮ್ಮ ಜನ್ಮ ದಿನದಂದು ಪ್ರತಿವರ್ಷ ಗಿಡಗಳನ್ನು ನೆಡುವ ಹವ್ಯಾಸ ಬೆಳೆಸಿಕೊಂಡು ಇತರರಿಗೆ ಮಾದರಿಯಾಗಬೇಕೆಂದು ಮಾರ್ಗದರ್ಶನ ಮಾಡಿದರು.
ಹೆಚ್ಚುವರಿ ನ್ಯಾಯಾದೀಶೆ ಅಸ್ರಿನಾ ಮಾತನಾಡಿ ಮನುಷ್ಯ ಭೂಮಿಯ ಮೇಲೆ ಜೀವಿಸಲು ಶುದ್ದ ಗಾಳಿಯ ಅಗತ್ಯವಿದ್ದು ಅದು ದೊರೆಯಬೇಕಾದರೆ ಉತ್ತಮ ಪರಿಸರ ಇರಬೇಕು ಇವುಗಳು ನಮಗೆ ದೊರೆಯಬೇಕಾದರೆ ಯಥೇಚ್ಚವಾಗಿ ಗಿಡಗಳನ್ನು ನೆಡಬೇಕು ಎಂದರು.
ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಿದ್ದು ಮುಂದಿನ ದಿನಗಳಲ್ಲಿ ಸ್ವಾರ್ಥವನ್ನು ಬಿಟ್ಟು ಹಸಿರು ಸಿರಿ ಕಾಪಾಡಲು ಪರಸ್ಪರ ಸಮನ್ವಯತೆಯಿಂದ ಕೆಲಸ ಮಾಡಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಸಾಲಿಗ್ರಾಮ ತಹಸೀಲ್ದಾರ್ ನರಗುಂದ್, ತಾ.ಪಂ.ಇಒ ಜಿ.ಕೆ.ಹರೀಶ್, ಸಾಲಿಗ್ರಾಮ ಪೊಲೀಸ್ ನಿರೀಕ್ಷಕ ಕೃಷ್ಣರಾಜು ಮಾತನಾಡಿದರು.
ವಸತಿ ಶಾಲೆಯ ಪ್ರಾಂಶುಪಾಲ ಟಿ.ಸುರೇಶ್, ಸಾಮಾಜಿಕ ವಲಯ ಅರಣ್ಯಾಧಿಕಾರಿ ಟಿ.ವಿ.ಹರಿಪ್ರಸಾದ್, ಪ್ರಾದೇಶಿಕ ವಲಯ ಅರಣ್ಯಾಧಿಕಾರಿ ಎಂ.ಆರ್. ರಶ್ಮಿ, ಉಪ-ವಲಯ ಅರಣ್ಯಾಧಿಕಾರಿಗಳಾದ ಹರೀಶ್, ಶೋಭಾ, ಪಿಡಿಒ ರಾಜೇಶ್, ವಕೀಲರಾದ ರಾಮಚಂದ್ರರಾವ್, ಮಂಜಯ್ಯ ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.