ಮೈಸೂರು: ವಿದ್ಯಾರ್ಥಿಗಳು ಜೀವನದಲ್ಲಿ ಗುರಿ ತಲುಪಬೇಕಾದರೆ ಗುರು ಮುಖ್ಯವಾಗಿದ್ದು. ಗುರುಸ್ಮರಣೆಯೊಂದಿಗೆ ಗುರಿ ಇಟ್ಟುಕೊಂಡು ಸಾಧನೆ ಮಾಡಬೇಕು ಎಂದು ಶ್ರೀ ಕಾಗಿನೆಲೆ ಕನಕ ಗುರುಪೀಠದ ಮೈಸೂರು ವಿಭಾಗದ ಗುರುಗಳಾದ ಶ್ರೀ ಶಿವನಂದಾಪುರಿ ಮಹಾಸ್ವಾಮೀಜಿ ತಿಳಿಸಿದರು.
ಕುವೆಂಪುನಗರದಲ್ಲಿರುವ ಕಾಳಿದಾಸ ವಿದ್ಯಾಸಂಸ್ಥೆಯಲ್ಲಿ ನಡೆದ ಶ್ರೀ ಬೀರೇಂದ್ರ ಕೇಶವ ತಾರಕಾನಂದಪುರಿ ಮಹಾಸ್ವಾಮೀಜಿಯವರ ೧೭ನೇ ವರ್ಷದ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಶ್ರೀಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದ ಅವರು ಶ್ರೀ ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠದ ಪ್ರಥಮ ಪೀಠಾಧ್ಯಕ್ಷರಾಗಿದ್ದ ಶ್ರೀಗಳ ತಪೋಶಕ್ತಿ ಶ್ರಮ ಆಶೀರ್ವಾದದಿಂದ ಈ ಸಂಸ್ಥೆ ಹೆಮ್ಮರವಾಗಿ ಬೆಳೆಯುತ್ತಿದ್ದು ರಾಜ್ಯಾದಂತ್ಯ ಶಿಕ್ಷಣ ಸಂಸ್ಥೆಗಳು, ಸಮುದಾಯ ಭವನಗಳು, ಉಚಿತ ತರಬೇತಿ ಕೇಂದ್ರಗಳು ಹಾಸ್ಟೆಲ್‌ಗಳನ್ನು ನಿರ್ಮಾಣ ಮಾಡಿ ಸಾವಿರಾರು ವಿದ್ಯಾರ್ಥಿಗಳಿಗೆ ಅನುಕೂಲವಾಗಿದೆ. ನಮ್ಮ ಸಂಸ್ಥೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯರವರು, ಯಡಿಯೂರಪ್ಪನವರು, ಸರ್ಕಾರ, ಸಮಾಜ, ಶಿಕ್ಷಕವೃಂದ ಜಾತ್ಯಾತೀತವಾಗಿ ಸಹಾಯ ಮಾಡುತ್ತಾ ಬಂದಿದ್ದಾರೆ. ವಿದ್ಯಾರ್ಥಿಗಳು ದುಶ್ಚಟಗಳಿಗೆ ಬಲಿಯಾಗದೆ ಶಿಸ್ತಿನಿಂದ ಜೀವನದಲ್ಲಿ ಮೌಲ್ಯಗಳನ್ನು ಅಳವಡಿಸಿಕೊಂಡು ತಂದೆ ತಾಯಿಗೆ ಸಂಸ್ಥೆಗೆ ಗೌರವ ತರುವಂತಹ ಕೆಲಸ ಮಾಡಬೇಕು ಎಂದರು.
ಶ್ರೀ ಕಾಳಿದಾಸ ವಿದ್ಯಾಸಂಸ್ಥೆಯ ಗೌರವ ಕಾರ್ಯದರ್ಶಿ ಪುಟ್ಟಬಸವೇಗೌಡರು ಮಾತನಾಡಿ ನಮ್ಮ ಕನಕ ಗುರುಪೀಠದ ಮೂಲ ಪುರುಷರಾದ ಶ್ರೀಗಳ ಆಶೀರ್ವಾದದಿಂದ ಶ್ರೀ ಶಿವಾನಂದಪುರಿ ಮಹಾಸ್ವಾಮೀಜಿಗಳು ಶಿಕ್ಷಣ ಸಂಸ್ಥೆಗಳನ್ನು ಅತ್ಯಂತ ಯಶಸ್ವಿಯಾಗಿ ನಡೆಸಿಕೊಂಡು ಸಮಾಜದ ಏಳ್ಗೆಗೆ ಶ್ರಮಿಸುತ್ತಿದ್ದಾರೆ ಎಂದರು. ಈ ಸಂದರ್ಭದಲ್ಲಿ ಡಾ. ಸೆಲ್ವಕುಮಾರ್ ಎಸ್., ಮತ್ತು ಡಾ. ಪ್ರೇಮ್‌ಕುಮಾರ್ ಎಸ್ ರವರು ಸಂಸ್ಥೆಗೆ ಕಂಪ್ಯೂಟರ್ ಮೈಕ್‌ಸೆಟ್ ಪೋಡಿಯಂ ದಾನವಾಗಿ ನೀಡಿದರು.
ಸಮಾರಂಭದಲ್ಲಿ ಪ್ರಾಂಶುಪಾಲರಾದ ಡಾ. ವಿಶಾಲಾಕ್ಷಿ ಕೆ.ಕೆ., ಡಾ. ಶರತ್‌ಕುಮಾರ್ ಎಸ್.ಎಂ., ರವಿಶಂಕರ್, ನಾಗೇಶ್ ಜಿ.ಎಂ., ಚಂದ್ರಶೇಖರ್, ರಾಮೇಗೌಡ, ಮಂಜುನಾಥ್, ಕೃಷ್ಣಮೂರ್ತಿ, ಬಸವರಾಜು, ಮೋಹನ್,ಮಹಾದೇವ, ಅಣ್ಣಾಜಿ ಹಾಜರಿದ್ದರು.