Saturday, April 19, 2025
Google search engine

Homeರಾಜ್ಯಸುದ್ದಿಜಾಲಮಸಣಾಪುರ: ಸ್ಮಶಾನದ ಜಾಗ ಒತ್ತುವರಿ ಗ್ರಾಮಸ್ಥರಿಂದ ಪ್ರತಿಭಟನೆ

ಮಸಣಾಪುರ: ಸ್ಮಶಾನದ ಜಾಗ ಒತ್ತುವರಿ ಗ್ರಾಮಸ್ಥರಿಂದ ಪ್ರತಿಭಟನೆ

ಯಳಂದೂರು: ಸಮೀಪದ ಮಸಣಾಪುರ ಗ್ರಾಮದಲ್ಲಿ ಖಾಸಗಿ ವ್ಯಕ್ತಿಯೊಬ್ಬರು ಉಪ್ಪಾರ, ನಾಯಕ ಜನಾಂಗಕ್ಕೆ ಸೇರಿದ ಸ್ಮಶಾನದ ಜಾಗವನ್ನು ಒತ್ತುವರಿ ಮಾಡಿಕೊಂಡು ತೊಂದರೆ ನೀಡುತ್ತಿದ್ದಾರೆ ಎಂದು ಆರೋಪಿಸಿ ಗ್ರಾಮದ ಉಪ್ಪಾರ, ನಾಯಕ ಜನಾಂಗದವರು ಈ ಜಾಗದ ಬಳಿ ಶನಿವಾರ ಪ್ರತಿಭಟನೆ ನಡೆಸಿದರು.

ಈ ಜಮೀನು ಸರ್ವೇ ನಂ.೧೯/೬ ಎ ನಲ್ಲಿ ಬರುತ್ತದೆ. ಒಟ್ಟು ೨೭ ಗುಂಟೆ ಜಮೀನು ಕಾವೇರಿ ನೀರಾವರಿ ನಿಗಮಕ್ಕೆ ಸೇರಿದೆ. ಈ ಸ್ಥಳವನ್ನು ಉಪ್ಪಾರ ಹಾಗೂ ನಾಯಕ ಜನಾಂಗದ ಸ್ಮಶಾನಕ್ಕೆ ನೀಡಬೇಕು. ಈ ಸಮುದಾಯದ ಜನರು ಒಂದೂವರೆ ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿದ್ದಾರೆ. ಈ ಹಿಂದೆ ಗಂಗವಾಡಿ ರಸ್ತೆಯಲ್ಲಿದ್ದ ಸ್ಮಶಾನ ಹಳ್ಳದಲ್ಲಿದ್ದು, ಇದರಲ್ಲಿ ನೀರು ತುಂಬುವುದರಿಂದ ತೊಂದರೆಯಾಗುತ್ತದೆ. ಹಾಗಾಗಿ ಇಲ್ಲಿ ಅಂತ್ಯಸಂಸ್ಕಾರ ಮಾಡಲು ಅವಕಾಶ ನೀಡಬೇಕು ಎಂದು ಇಲಾಖೆಯ ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ಮನವಿ ಮಾಡಿಕೊಂಡು, ಇಲ್ಲಿ ಅನೇಕ ವರ್ಷಗಳಿಂದಲೂ ಅಂತ್ಯಸಂಸ್ಕಾರ ಮಾಡಿಕೊಂಡು ಬರಲಾಗುತ್ತಿತ್ತು.

ಈ ಹಿಂದೆ ಈ ಜಮೀನು ಇರುವ ಸ್ಥಳವನ್ನು ಸರ್ವೇ ಇಲಾಖೆಯ ಅಧಿಕಾರಿಗಳು ಸರ್ವೇ ಮಾಡಿ ಕಲ್ಲನ್ನು ನೆಟ್ಟಿದ್ದರು. ಆದರೆ ಈಗ ಈ ಜಮೀನಿನ ಪಕ್ಕದಲ್ಲಿರುವ ಖಾಸಗಿ ವ್ಯಕ್ತಿಯೊಬ್ಬರು ಆ ಕಲ್ಲನ್ನು ಕಿತ್ತು ಹಾಕಿ ಇಲ್ಲಿ ವ್ಯವಸಾಯ ಮಾಡಲು ಜಮೀನು ಉಳುಮೆ ಮಾಡಿಕೊಂಡಿದ್ದಾರೆ. ಇದು ನನಗೆ ಸೇರಿದ ಜಮೀನಾಗಿದೆ, ಇಲ್ಲಿ ಯಾವುದೇ ಅಂತ್ಯಸಂಸ್ಕಾರ ಮಾಡಬಾರದು ಎಂದು ವಿನಾ ಕಾರಣ ತೊಂದರೆ ನೀಡುತ್ತಿದ್ದಾರೆ.

ಇದು ಸರ್ಕಾರಿ ಜಮೀನಾಗಿದ್ದು ನಮ್ಮ ಜನಾಂಗದ ಸ್ಮಶಾನವಾಗಿದೆ. ಇಲ್ಲಿ ಅನೇಕರಿಗೆ ಅಂತ್ಯಕ್ರಿಯೆಯನ್ನು ಮಾಡಲಾಗಿದೆ. ಆದರೆ ಈ ವ್ಯಕ್ತಿ ರಸ್ತೆ ಬದಿಯಲ್ಲಿರುವ ಫಲವತ್ತಾದ ಜಮೀನನ್ನು ಕಬಳಿಸಿಕೊಳ್ಳಲು ಹುನ್ನಾರ ನಡೆಸುತ್ತಿದ್ದಾರೆ. ಹಾಗಾಗಿ ನಮಗೆ ಸೇರಿರುವ ಜಮೀನನ್ನು ಮತ್ತೆ ನಮಗೆ ವಾಪಸ್ಸು ನೀಡಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿ, ಪ್ರತಿಭಟಿಸಿ ಗ್ರಾಮ ಲೆಕ್ಕಾಧಿಕಾರಿ ರಾಜೇಂದ್ರರವರಿಗೆ ಮನವಿ ಪತ್ರ ಸಲ್ಲಿಸಿದರು.

ಈ ಸಂದರ್ಭದಲ್ಲಿ ರಾಜೇಂದ್ರ ಮಾತನಾಡಿ, ಈ ಬಗ್ಗೆ ಸಂಬಂಧಪಟ್ಟ ಉನ್ನತ ಮಟ್ಟದ ಅಧಿಕಾರಿಗಳಿಗೆ ಈ ವಿಷಯ ಗಮನಕ್ಕೆ ತಂದು ಮುಂದಿನ ಕ್ರಮ ವಹಿಸುವ ಭರವಸೆ ನೀಡಿದರು. ಸರ್ವೇಯರ್ ರಾಜು ಗ್ರಾಮದ ಮುಖಂಡರಾದ ಲೋಕೇಶ್ ನಾಯಕ, ರಂಗಸ್ವಾಮಿನಾಯಕ, ಅಂಕನಾಯಕ, ವೆಂಕಟರಂಗಸ್ವಾಮಿ, ಶ್ರೀನಿವಾಸ, ಅಂಕಶೆಟ್ಟಿ, ಮಾದೇಶ್, ಕೃಷ್ಣ ಸೇರಿದಂತೆ ನೂರಾರು ಮಂದಿ ಹಾಜರಿದ್ದರು.

RELATED ARTICLES
- Advertisment -
Google search engine

Most Popular